
ಹಣ ಪಣಕ್ಕಿಟ್ಟು ಆಡಲಾಗುವ ಆನ್‌ಲೈನ್ ಆಟಗಳನ್ನು ನಿಷೇಧಿಸಿ ಈಚೆಗೆ ಕೇಂದ್ರ ಸರ್ಕಾರ ರೂಪಿಸಿರುವ ಆನ್‌ಲೈನ್ ಗೇಮಿಂಗ್ (ಉತ್ತೇಜನ ಮತ್ತು ನಿಯಂತ್ರಣ) ಕಾಯಿದೆಯನ್ನು ಪ್ರಶ್ನಿಸಿ ಹೆಡ್ ಡಿಜಿಟಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದು, ಶನಿವಾರ ಅರ್ಜಿ ವಿಚಾರಣೆ ನಡೆಯಲಿದೆ.
ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರ ಏಕಸದಸ್ಯ ಪೀಠದ ಮುಂದೆ ಹಿರಿಯ ವಕೀಲರಾದ ಆರ್ಯಮಾ ಸುಂದರಮ್ ಮತ್ತು ಧ್ಯಾನ್ ಚಿನ್ನಪ್ಪ ಅವರು ಅರ್ಜಿ ವಿಚಾರಣೆಗೆ ಕೋರಿದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯವು ಅರ್ಜಿಯನ್ನು ಶನಿವಾರಕ್ಕೆ ವಿಚಾರಣೆಗೆ ಪಟ್ಟಿ ಮಾಡುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿದೆ.
ಆನ್‌ಲೈನ್ ರಮ್ಮಿ ಮತ್ತು ಪೋಕರ್ ಆಟಗಳನ್ನು ನಿಷೇಧಿಸುವುದರಿಂದ ಶಾಸನಬದ್ದ ಉದ್ಯಮಕ್ಕೆ ಇರುವ ಸಾಂವಿಧಾನಿಕ ರಕ್ಷಣೆ ಉಲ್ಲಂಘನೆಯಾಗಲಿದೆ. ಈಗಾಗಲೇ ನ್ಯಾಯಾಲಯಗಳು ಕೌಶಲ ಆಟಗಳು ಎಂದು ಪರಿಗಣಿಸಿರುವುದಕ್ಕೆ ಧಕ್ಕೆ ಮಾಡಲಿದ್ದು, ಗೇಮಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮತ್ತು ಹೂಡಿಕೆಗೆ ಹಾನಿ ಮಾಡುತ್ತದೆ ಎಂದು ಆಕ್ಷೇಪಿಸಲಾಗಿದೆ.
ಮಸೂದೆಗೆ ಆಗಸ್ಟ್ 19ರಂದು ಕೇಂದ್ರ ಸಂಪುಟ ಒಪ್ಪಿಗೆ ನೀಡಿದ್ದು, ಮಾರನೆಯ ದಿನ ಲೋಕಸಭೆಯಲ್ಲಿ ಅದನ್ನು ಮಂಡಿಸಲಾಗಿತ್ತು. ಧ್ವನಿಮತದ ಮೂಲಕ ಅಲ್ಲಿ ಮಸೂದೆ ಅಂಗೀಕಾರಗೊಂಡಿತ್ತು. ಆಗಸ್ಟ್ 21ರಲ್ಲಿ ರಾಜ್ಯಸಭೆಯಲ್ಲಿ ಮಸೂದೆಗೆ ಒಪ್ಪಿಗೆ ದೊರೆತು, ಆಗಸ್ಟ್ 22ರಂದು ರಾಷ್ಟ್ರಪತಿಗಳು ಮಸೂದೆಗೆ ಸಹಿ ಹಾಕಿದ್ದರು.
ಆಟವು ಕೌಶಲದ ಆಟ ಅಥವಾ ಅವಕಾಶದ ಆಟ ಎನ್ನುವ ವ್ಯತ್ಯಾಸವಿಲ್ಲದೆ ಆನ್‌ಲೈನ್‌ನಲ್ಲಿ ಹಣ ಕಟ್ಟಿ ಆಡುವ ಎಲ್ಲ ಆಟಗಳು ಕಾಯಿದೆ ಅಡಿ ಅಪರಾಧವಾಗಲಿದೆ. ಇದನ್ನು ಸಂಜ್ಞೇ ಮತ್ತು ಸಂಜ್ಞೇಯೇತರ ಅಪರಾಧವನ್ನಾಗಿ ವರ್ಗೀಕರಿಸಲಾಗಿದೆ.
ಈ ಹಿಂದೆ ಕೇಂದ್ರ ಸರ್ಕಾರವು ತಂತ್ರಜ್ಞಾನ ಕಾಯಿದೆ ನಿಯಮಗಳ ಅಡಿ ನಿಯಂತ್ರಣ ಮಾರ್ಗಸೂಚಿ ರೂಪಿಸಿದ್ದರೂ ಸಾರ್ವಜನಿಕರ ಜೊತೆ ಸಮಾಲೋಚನೆ ನಡೆಸದೇ ಅಥವಾ ಸಂಸದೀಯ ಸಮಿತಿಯ ಪರಿಶೀಲನೆಗೆ ಒಳಪಡಿಸದೇ ಶರವೇಗದಲ್ಲಿ ಕೇಂದ್ರ ಸರ್ಕಾರ ನಿಲುವು ಬದಲಿಸಿದೆ ಎಂದು ಆಕ್ಷೇಪಿಸಲಾಗಿದೆ.
ಕೇಂದ್ರ ಸರ್ಕಾರವು ಆನ್‌ಲೈನ್ ಗೇಮಿಂಗ್ ನಿಷೇಧ ಹೇರಿರುವುದರಿಂದ ಅಂದಾಜು ₹23,440 ಕೋಟಿ ಹೂಡಿಕೆಗೆ ಹೊಡೆತ ಬಿದ್ದು, ಇದರಲ್ಲಿ ಹೆಚ್ಚಿನ ಪ್ರಮಾಣದ ವಿದೇಶಿ ಹೂಡಿಕೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.