ಬಳಕೆದಾರರ ವಾಕ್‌ ಸ್ವಾತಂತ್ರ್ಯ ಸಮರ್ಥಿಸಲು ಮೇಲ್ಮನವಿ ಸಲ್ಲಿಸಲಾಗುವುದು: ಎಕ್ಸ್‌ ಕಾರ್ಪ್‌

ಸಹಯೋಗ್‌ ಪೋರ್ಟಲ್‌ ಆರಂಭಿಸಿರುವುದನ್ನು ಪ್ರಶ್ನಿಸಿ ಎಕ್ಸ್‌ ಕಾರ್ಪ್‌ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾಗೊಳಿಸಿತ್ತು.
Twitter logo and Karnataka High Court
Twitter logo and Karnataka High Court
Published on

ಮಾಹಿತಿ ನಿರ್ಬಂಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸಹಯೋಗ್‌ ಪೋರ್ಟಲ್‌ ಆರಂಭ ಪ್ರಶ್ನಿಸಿ ಎಕ್ಸ್‌ ಕಾರ್ಪ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠ ಮಾಡಿದ್ದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ ಮಾಡಲಾಗುವುದು ಎಂದು ಕಂಪನಿಯು ತಿಳಿಸಿದೆ.

ಏಕಸದಸ್ಯ ಪೀಠದ ಆದೇಶದಿಂದ ಲಕ್ಷಾಂತರ ಪೊಲೀಸರು ಸ್ವೇಚ್ಛೆಯಿಂದ ಕೂಡಿದ ನಿರ್ಬಂಧ ಆದೇಶಗಳನ್ನು "ಗೌಪ್ಯವಾಗಿರುವ ಆನ್‌ಲೈನ್‌ ಪೋರ್ಟಲ್‌" ಬಳಸಿ ಹೊರಡಿಸುವುದರ ಬಗ್ಗೆ ಆತಂಕಕ್ಕೆ ಒಳಗಾಗಿರುವುದಾಗಿ ಎಕ್ಸ್‌ನ ಗ್ಲೋಬಲ್‌ ಗವರ್ನಮೆಂಟ್‌ ಅಫೇರ್ಸ್‌ ತಂಡವು ಟ್ವೀಟ್‌ ಮಾಡಿದೆ.

ಸಹಯೋಗ್‌ ಪೋರ್ಟಲ್‌ಗೆ ಕಾನೂನಿನಲ್ಲಿ ಮಾನ್ಯತೆ ಇಲ್ಲ. ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 69ಎಗೆ ಹಾಗೂ ಸುಪ್ರೀಂ ಕೋರ್ಟ್‌ ತೀರ್ಪಿಗೆ ಇದು ವಿರುದ್ಧವಾಗಿದ್ದು, ಭಾರತೀಯರ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಎಕ್ಸ್‌ ಹೇಳಿದೆ.

“ನ್ಯಾಯಾಲಯದ ಪರಿಶೀಲನೆ ಅಥವಾ ಬಳಕೆದಾರರ ವಾದ ಆಲಿಸದೇ ಅಕ್ರಮದ ಆರೋಪದ ಮೇಲೆ ಎಕ್ಸ್‌ನಲ್ಲಿನ ವಿಷಯ ತೆಗೆಯಲು ಸಹಯೋಗ್‌ಗೆ ಅವಕಾಶವಾಗಲಿದೆ. ಸಹಯೋಗ್‌ ಆದೇಶ ಪಾಲಿಸದಿದ್ದರೆ ಎಕ್ಸ್‌ ಕ್ರಿಮಿನಲ್‌ ಹೊಣೆಗಾರಿಕೆಯಡಿ ಬೆದರಿಕೆ ಎದುರಿಸಲಿದೆ” ಎಂದು ಎಕ್ಸ್‌ ಹೇಳಿದೆ.

ಭಾರತೀಯ ಕಾನೂನನ್ನು ಗೌರವಿಸಲಾಗುತ್ತದೆ ಹಾಗೂ ಪಾಲಿಸಲಾಗುತ್ತದೆ. ಆದರೆ, ಹೈಕೋರ್ಟ್‌ನ ಏಕಸದಸ್ಯ ಪೀಠವು ತನ್ನ ಆದೇಶದಲ್ಲಿ ಮೂಲ ಸಾಂವಿಧಾನಿಕ ಪ್ರಶ್ನೆಗಳಿಗೆ ಉತ್ತರಿಸಲು ವಿಫಲವಾಗಿದ್ದು, ಬಾಂಬೆ ಹೈಕೋರ್ಟ್‌ನ ಪೀಠವು ಈಚೆಗೆ ಇದೇ ವ್ಯವಸ್ಥೆಯನ್ನು ಅಸಾಂವಿಧಾನಿಕ ಎಂದಿದೆ ಎಂದು ಸ್ಮರಿಸಲಾಗಿದೆ.

Also Read
ವಿದೇಶಿ ಸಂಸ್ಥೆಗಳು ವಾಕ್ ಸ್ವಾತಂತ್ರ್ಯದ ಹಕ್ಕು ಪಡೆಯುವಂತಿಲ್ಲ: ಎಕ್ಸ್ ಕಾರ್ಪ್ ತೀರ್ಪಿನಲ್ಲಿ ಕರ್ನಾಟಕ ಹೈಕೋರ್ಟ್

“ನಮ್ಮ ಸಂಸ್ಥೆಯು ವಿದೇಶದ್ದಾಗಿದೆ ಎಂದ ಮಾತ್ರಕ್ಕೆ ಕಳಕಳಿ ವ್ಯಕ್ತಪಡಿಸುವಂತಿಲ್ಲ ಎಂಬ ವಾದವನ್ನು ನಾವು ವಿನಯಪೂರ್ವಕವಾಗಿ ವಿರೋಧಿಸುತೇವೆ. ಭಾರತದಲ್ಲಿ ಸಾರ್ವಜನಿಕ ಚರ್ಚೆ-ಸಂವಾದಗಳಿಗೆ ಎಕ್ಸ್‌ ಕಾರ್ಪ್‌ ವೇದಿಕೆ ಕಲ್ಪಿಸಿದ್ದು, ಬಳಕೆದಾರರ ಅಭಿಪ್ರಾಯವು ನಮ್ಮ ವೇದಿಕೆಯ ಆತ್ಮವಾಗಿದೆ. ವಾಕ್‌ ಸ್ವಾತಂತ್ರ್ಯವನ್ನು ಸಮರ್ಥಿಸಲು ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಲಾಗುವುದು” ಎಂದು ಅದು ವಿವರಿಸಿದೆ.

Kannada Bar & Bench
kannada.barandbench.com