ಸಾಮಾಜಿಕ ಮಾಧ್ಯಮ ಹಾಗೂ ಒಟಿಟಿಗಳಲ್ಲಿ (ವೆಬ್ ಸ್ಟ್ರೀಮಿಂಗ್ ವೇದಿಕೆಗಳು) ಹೊಲಸು, ಅಶ್ಲೀಲ ಹಾಗೂ ಕೆಟ್ಟ ಪದಗಳ ಬಳಕೆ ನಿಯಂತ್ರಿಸಲು ನಿಯಮಾವಳಿ ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಈ ಸಂಬಂಧ ನ್ಯಾ. ಸ್ವರಣಾ ಕಾಂತಾ ಶರ್ಮಾ ಅವರಿದ್ದ ಹೈಕೋರ್ಟ್ ಪೀಠಕ್ಕೆ ವರದಿ ಸಲ್ಲಿಸಿರುವ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MEITY) ಕಾಲೇಜ್ ರೊಮಾನ್ಸ್ ವೆಬ್ ಸರಣಿ ಪ್ರಕರಣದಲ್ಲಿ ನ್ಯಾಯಾಲಯದ ಅವಲೋಕನಗಳನ್ನು ತಾನು ಗಮನಿಸಿರುವುದಾಗಿ ತಿಳಿಸಿದೆ.
ಈ ವರ್ಷದ ಮಾರ್ಚ್‌ನಲ್ಲಿ, ಕಾಲೇಜ್ ರೋಮ್ಯಾನ್ಸ್ ವೆಬ್-ಸರಣಿಯ ತಯಾರಕರು ಸಲ್ಲಿಸಿದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ, ಸಾಮಾಜಿಕ ಮಾಧ್ಯಮ ಮತ್ತು ಒಟಿಟಿ ವೇದಿಕೆಗಳಲ್ಲಿ ಅಶ್ಲೀಲತೆಗೆ ಕಡಿವಾಣ ಹಾಕುವಂತೆ ಸೂಚಿಸಿತ್ತು.
ಸಾಮಾಜಿಕ ಮಾಧ್ಯಮವನ್ನು ನಿಯಂತ್ರಣ ನೀತಿ ನಿರ್ಧಾರವಾಗಿರುವುದರಿಂದ, ಸೂಕ್ತ ನಿಯಮಗಳನ್ನು ಜಾರಿಗೆ ತರಲಾಗುವುದು ಮತ್ತು ನ್ಯಾಯಾಲಯದ ತೀರ್ಪಿನ ಪ್ರಕಾರ ಸಾಮಾಜಿಕ ಮಾಧ್ಯಮಗಳಲ್ಲಿ ಇತರೆ ಮಧ್ಯಸ್ಥ ವೇದಿಕೆಗಳಲ್ಲಿ ಹೊಲಸು, ಅಶ್ಲೀಲ ಹಾಗೂ ಕೆಟ್ಟ ಪದಗಳ ಬಳಕೆಯಿಂದ ರಕ್ಷಿಸಲು ನಿಯಮಾವಳಿ ಜಾರಿಗೆ ತರಲಾಗುವುದು ಎಂದು ವರದಿ ತಿಳಿಸಿದೆ.
ಕೇಂದ್ರ ಸರ್ಕಾರ ಸಲ್ಲಿಸಿದ್ದ ಸ್ಥಿತಿಗತಿ ವರದಿ ಪರಿಶೀಲಿಸಿದ ನ್ಯಾಯಾಲಯ ಇದು ನೀತಿ ನಿರ್ಧಾರದ ವಿಷಯವಾಗಿರುವುದರಿಂದ ನ್ಯಾಯಾಲಯದ ಆದೇಶದ ಅಗತ್ಯ ಅನುಪಾಲನೆಯಾಗಿದೆ ಎಂದು ಅಭಿಪ್ರಾಯಪಟ್ಟಿತು.
ತೀರ್ಪಿನ ಮೂಲಕ ನ್ಯಾಯಾಲಯ ವ್ಯಕ್ತಪಡಿಸಿದ್ದ ಆತಂಕಗಳನ್ನು ಗಮನಿಸಿ ಭವಿಷ್ಯದ ನಿಯಮ ಮತ್ತು ನಿಬಂಧನೆಗಳನ್ನು ಅಳವಡಿಸಲಾಗುವುದು ಎಂದು ಈ ನ್ಯಾಯಾಲಯಕ್ಕೆ ಭರವಸೆ ನೀಡಲಾಗಿದೆ. ಅದನ್ನು ಶೀಘ್ರವೇ ಈಡೇರಿಸಬೇಕು ಎಂದು ನ್ಯಾಯಾಲಯ ನುಡಿಯಿತು.
ಕಾಲೇಜ್ ರೊಮ್ಯಾನ್ಸ್ ವೆಬ್ ಸರಣಿ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ತಡೆ ನೀಡಲು ಈ ಹಿಂದೆ ನ್ಯಾಯಾಲಯವು ನಿರಾಕರಿಸಿತ್ತು. ಅಲ್ಲದೆ, ಇದೇ ವೇಳೆ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ವೇದಿಕೆಗಳಿಗೆ ಮಾರ್ಗಸೂಚಿ ಮತ್ತು ಡಿಜಿಟಲ್ ಮಾಧ್ಯಮಗಳ ನೀತಿ ಸಂಹಿತೆ) ನಿಯಮಾವಳಿ, 2021ಅನ್ನು ಗಂಭೀರವಾಗಿ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಸೂಚಿಸಿತ್ತು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]