ಚುನಾವಣಾ ಆಯೋಗಕ್ಕೆ ಲಕ್ಷ್ಮಣರೇಖೆ ಎಳೆಯಲು ಸುಪ್ರೀಂಕೋರ್ಟ್ ಮೊರೆ ಹೋಗುವೆ: ಮಮತಾ ಬ್ಯಾನರ್ಜಿ

(ಚುನಾವಣಾ ಆಯೋಗದ) ಮೂವರು ನಾಮನಿರ್ದೇಶಿತ ವ್ಯಕ್ತಿಗಳಿಂದ ದೇಶದ ನಿಯಂತ್ರಣ ಸಾಧ್ಯವಿಲ್ಲ ಎಂದಿರುವ ಮಮತಾ ಇತರ ರಾಜಕೀಯ ಪಕ್ಷಗಳು ಕೂಡ ಜಂಟಿಯಾಗಿ ಅರ್ಜಿ ಸಲ್ಲಿಸಲು ಮನವಿ ಮಾಡುವುದಾಗಿ ಹೇಳಿದ್ದಾರೆ.
ಚುನಾವಣಾ ಆಯೋಗಕ್ಕೆ ಲಕ್ಷ್ಮಣರೇಖೆ ಎಳೆಯಲು ಸುಪ್ರೀಂಕೋರ್ಟ್ ಮೊರೆ ಹೋಗುವೆ: ಮಮತಾ ಬ್ಯಾನರ್ಜಿ

ಚುನಾವಣೆಗೂ ಮೊದಲು ತಮ್ಮ ಪಕ್ಷ ಚುನಾವಣಾ ಆಯೋಗದಿಂದ ಎದುರಿಸಿದ ಭೀತಿ ಮತ್ತು ಅನುಸರಿಸಿದ ಪಕ್ಷಪಾತ ಧೋರಣೆ ಹಿನ್ನೆಲೆಯಲ್ಲಿ ಅದರ ಅಧಿಕಾರಕ್ಕೆ ಕಡಿವಾಣ ಹಾಕಲು ಸುಪ್ರೀಂಕೋರ್ಟ್‌ ಮೊರೆ ಹೋಗುವುದಾಗಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವನ್ನು ಚಾರಿತ್ರಿಕ ಗೆಲುವಿನತ್ತ ಮುನ್ನಡೆಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದರು.

Also Read
ಮದ್ರಾಸ್ ಹೈಕೋರ್ಟ್‌ನ ʼಕೊಲೆ ಕೇಸ್ʼ ಹೇಳಿಕೆ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಚುನಾವಣಾ ಆಯೋಗ

ಈ ನಿಟ್ಟಿನಲ್ಲಿ ಜಂಟಿಯಾಗಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಇತರ ರಾಜಕೀಯ ಪಕ್ಷಗಳಿಗೂ ಮನವಿ ಮಾಡುವುದಾಗಿ ಅವರು ಹೇಳಿದರು. “ಚುನಾವಣಾ ಆಯೋಗದ ಭೀತಿ ಎದುರಿಸಿದ್ದೇವೆ. ಅಂತಿಮವಾಗಿ ನಾನು ಸಂವಿಧಾನಿಕ ಪೀಠದ ಮೊರೆ ಹೋಗುತ್ತೇನೆ. ಅದರ ಪಕ್ಷಪಾತದ ಧೋರಣೆಯನ್ನು ಸಹಿಸಿಕೊಂಡರೆ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯದು”ಎಂದು ಅವರು ಹೇಳಿದರು.

"ನಾನು ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಮನವಿ ಮಾಡುತ್ತೇನೆ. ನಾವು ಒಟ್ಟಾಗಿ ಸುಪ್ರೀಂ ಕೋರ್ಟ್‌ಗೆ ಹೋಗೋಣ. ಚುನಾವಣಾ ಆಯೋಗಕ್ಕೆ ಒಂದು ಲಕ್ಷ್ಮಣ ರೇಖೆ ಇರಬೇಕು ಎನ್ನುವುದನ್ನು ಸಾಂವಿಧಾನಿಕ ಪೀಠದ ಮುಂದೆ ಕೇಳೋಣ. ನಾಮಕರಣಗೊಂಡ ಮೂವರು ಹಾಗೂ ಕೆಲ ನಿವೃತ್ತ ಸರ್ಕಾರಿ ಅಧಿಕಾರಿಗಳು ಸೇರಿ ದೇಶವನ್ನು ನಿಯಂತ್ರಿಸಬಾರದು."

- ಮಮತಾ ಬ್ಯಾನರ್ಜಿ, ಅಧ್ಯಕ್ಷರು, ಅಖಿಲ ಭಾರತ ತೃಣಮೂಲ ಕಾಂಗ್ರೆಸ್

"ಚುನಾವಣಾ ಆಯೋಗ ಸ್ವಲ್ಪ ಮಿತಿಯಲ್ಲಿ ಇರಬೇಕು. ಅದರ ಮೂವರು ನಾಮನಿರ್ದೇಶಿತ ವ್ಯಕ್ತಿಗಳಿಂದ ದೇಶ ನಿಯಂತ್ರಣ ಸಾಧ್ಯವಿಲ್ಲ" ಎಂದು ಅವರು ಗುಡುಗಿದ್ದಾರೆ. ರಾಜ್ಯದಲ್ಲಿ ಎಂಟು ಹಂತದ ಚುನಾವಣೆ ನಡೆಸಿದ್ದು, ಬಿಜೆಪಿ ನಾಯಕರ ವಿರುದ್ಧದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ನಿಭಾಯಿಸಿದ ರೀತಿಗೆ ಸಂಬಂಧಿಸಿದದಂತೆ ಟಿಎಂಸಿ ಚುನಾವಣೆ ವೇಳೆ ಸತತವಾಗಿ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿತ್ತು.

Kannada Bar & Bench
kannada.barandbench.com