

ಮತದಾರರ ಪಟ್ಟಿ ವಿಶೇಷ ಆಮೂಲಾಗ್ರ ಪರಿಷ್ಕರಣೆ ಸಂಬಂಧಿತ ಕರ್ತವ್ಯಕ್ಕಾಗಿ ಚುನಾವಣಾ ಆಯೋಗಕ್ಕೆ ನಿಯೋಜಿಸಲಾದ ಪಶ್ಚಿಮ ಬಂಗಾಳದ 8,000ಕ್ಕೂ ಹೆಚ್ಚು ಅಧಿಕಾರಿಗಳು ಮಂಗಳವಾರ ಸಂಜೆಗೊಳಗೆ ತಮ್ಮ ತಮ್ಮ ಜಿಲ್ಲೆಗಳ ಚುನಾವಣಾಧಿಕಾರಿಗಳೆದುರು ಹಾಜರಾಗುವಂತೆ ಪಶ್ಚಿಮ ಬಂಗಾಳ ಸರ್ಕಾರ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶಿಸಿದೆ.
ಎಸ್‌ಐಆರ್ ಪ್ರಕ್ರಿಯೆ ಸುಗಮವಾಗಿ ನಡೆಯಲಯ ಅಗತ್ಯ ನಿರ್ದೇಶನ ನೀಡಲಾಗುತ್ತಿದ್ದು ಈ ಪ್ರಕ್ರಿಯೆಗೆ ಯಾವುದೇ ರೀತಿ ಅಡ್ಡಿ ಉಂಟುಮಾಡುವುದನ್ನು ಸಹಿಸುವುದಿಲ್ಲ ಎಂದು ಸಿಜೆಐ ಸೂರ್ಯಕಾಂತ್ ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ಎನ್ ವಿ ಅಂಜಾರಿಯಾ ಅವರಿದ್ದ ಪೀಠ ಸ್ಪಷ್ಟಪಡಿಸಿತು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಡ್ಡಿಪಡಿಸುವುದನ್ನು ಅನುಮತಿಸುವುದಿಲ್ಲ. ಇದರ ಬಗ್ಗೆ ಎಲ್ಲಾ ರಾಜ್ಯಗಳಿಗೆ ಸ್ಪಷ್ಟತೆ ಇರಲಿ ಎಂದು ಸಿಜೆಐ ಸೂರ್ಯಕಾಂತ್ ಹೇಳಿದರು.
ಪಶ್ಚಿಮ ಬಂಗಾಳ ಸರ್ಕಾರ ಚುನಾವಣಾ ಸಂಸ್ಥೆಗೆ ಸಮರ್ಪಕ ಸಹಕಾರ ನೀಡುತ್ತಿಲ್ಲ ಎಂದು ಚುನಾವಣಾ ಆಯೋಗ ದೂರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ವಿಚಾರ ಸ್ಪಷ್ಟಪಡಿಸಿದರು. ಎಸ್‌ಐಆರ್ ಪ್ರಕ್ರಿಯೆ ಹಿಂಸಾಚಾರ, ಬೆದರಿಕೆ ಹಾಗೂ ನಿರಂತರ ರಾಜಕೀಯ ಹಸ್ತಕ್ಷೇಪದಿಂದ ತೊಂದರೆಗೆ ಒಳಗಾಗಿದೆ ಎಂಬ ಆಯೋಗದ ವಾದವನ್ನು ನ್ಯಾಯಾಲಯ ಪುರಸ್ಕರಿಸಿತು.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸ್ಪಷ್ಟ ನಿರ್ದೇಶನ ಈಗಾಗಲೇ ನೀಡಲಾಗಿದೆ ಎಂದು ಪೀಠ ಪುನರುಚ್ಚರಿಸಿತು. ಜೊತೆಗೆ, ರಾಜ್ಯದ ವಿರುದ್ಧದ ಆರೋಪಗಳ ಕುರಿತು ಪಶ್ಚಿಮ ಬಂಗಾಳ ಡಿಜಿಪಿ ಖುದ್ದು ಪ್ರಮಾಣಪತ್ರ (ಅಫಿಡವಿಟ್) ಸಲ್ಲಿಸಬೇಕೆಂದು ಅದು ನಿರ್ದೇಶಿಸಿತು.
ರಾಜ್ಯ ಸರ್ಕಾರದಿಂದ ಇನ್ನೂ 8,500 ಹೆಚ್ಚುವರಿ ಸಿಬ್ಬಂದಿಯನ್ನು ಒದಗಿಸುವ ಪ್ರಸ್ತಾವನೆಯಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಆದರೆ, ಈ ಅಧಿಕಾರಿಗಳ ಪೂರ್ಣ ವಿವರಗಳನ್ನು ಸರಿಯಾಗಿ ನೀಡಿಲ್ಲ ಎಂದು ಆಯೋಗ ಆಕ್ಷೇಪ ವ್ಯಕ್ತಪಡಿಸಿತು. ಹೆಸರುಗಳೊಂದಿಗೆ ಸಂಪೂರ್ಣ ಮಾಹಿತಿ ನೀಡಬೇಕಾಗಿತ್ತು ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಈಗಾಗಲೇ 80,000 ಬಿಎಲ್‌ಒಗಳು, 8,524 ಎಇಆರ್‌ಒಗಳು ಮತ್ತು 294 ಇಆರ್‌ಒಗಳನ್ನು ಆಯೋಗಕ್ಕೆ ಒದಗಿಸಲಾಗಿದೆ ಎಂದು ತಿಳಿಸಿದರು. ಆದರೆ ಆಯೋಗದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಡಿ ಎಸ್ ನಾಯ್ಡು, ಎಸ್‌ಐಆರ್‌ನಲ್ಲಿ ಅರೆ-ನ್ಯಾಯಾಂಗ ಸ್ವರೂಪದ ನಿರ್ಧಾರಗಳ ಅಗತ್ಯ ಇರುವುದರಿಂದ ಅನುಭವ ಹೊಂದಿದ ಅಧಿಕಾರಿಗಳ ಅಗತ್ಯವಿದೆ ಎಂದು ಹೇಳಿದರು. ಈ ಅಧಿಕಾರಿಗಳ ಯೋಗ್ಯತೆ, ಅನುಭವ ಮತ್ತು ತರಬೇತಿಯನ್ನು ಪರಿಶೀಲಿಸುವ ಸ್ವಾತಂತ್ರ್ಯ ಇಸಿಐಗೆ ಇದೆ ಎಂದು ಪೀಠ ತಿಳಿಸಿತು.
ಮೈಕ್ರೊ ಅಬ್ಸರ್ವರ್‌ಗಳಿಗೆ ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರ ಇಲ್ಲ ಅವರು ಕೇವಲ ಇಆರ್‌ಒಗಳಿಗೆ ಸಹಾಯ ಮಾಡುವ ಪಾತ್ರ ನಿರ್ವಹಿಸಬೇಕು. ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಇಆರ್‌ಒಗೆ ಸೇರಿದೆ ಎಂದು ಅದು ಹೇಳಿತು.
ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ಗೆ ನೀಡಲಾಗಿದ್ದ ಗಡುವನ್ನು ನ್ಯಾಯಾಲಯ ಇಂದು ಒಂದು ವಾರದ ಮಟ್ಟಿಗೆ ವಿಸ್ತರಿಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಶ್ಯಾಮ್ ದಿವಾನ್, ಕರಡು ಮತದಾರರ ಪಟ್ಟಿಯಲ್ಲಿ 7.08 ಕೋಟಿ ಮತದಾರರು ಇದ್ದಾರೆ ಎಂದು ತಿಳಿಸಿದರು. ಅವರಲ್ಲಿ 6.75 ಕೋಟಿ ಪರಾಮರ್ಶಿಸಲಾಗಿದ್ದು, 32 ಲಕ್ಷ ಮಂದಿಯ ಪರಾಮರ್ಶೆ ಕಾರ್ಯ ನಡೆಯಬೇಕಿದೆ. 1.36 ಕೋಟಿ ಮತದಾರರನ್ನು ಹೆಸರು ಲೋಪ, ಅಕ್ಷರದ ದೋಷ ವರ್ಗಕ್ಕೆ ಸೇರಿಸಲಾಗಿದೆ. ಹೆಸರುಗಳಲ್ಲಿ ಸಣ್ಣ ವ್ಯತ್ಯಾಸಗಳು (ಉದಾ: ದತ್ತ–ದಟ್ಟಾ, ರಾಯ್–ರೇ) ಇರುವುದರಿಂದಲೇ ಲಕ್ಷಾಂತರ ಹೆಸರುಗಳನ್ನು ಪ್ರಶ್ನಿಸಲಾಗಿದೆ ಎಂದು ಅವರು ಆರೋಪಿಸಿದರು.
ಫೆಬ್ರವರಿ 14ರಂದು ಅಂತಿಮ ಎಸ್‌ಐಆರ್ ಪಟ್ಟಿ ಪ್ರಕಟವಾದರೆ ಆಗ ಪ್ರಶ್ನೆಗೆ ಅವಕಾಶ ಇಲ್ಲದಂತಾಗಿ ಬಿಡುತ್ತದೆ ಎಂದು ದಿವಾನ್ ಎಚ್ಚರಿಸಿದರು. ಇದರಿಂದ ಸಾಮೂಹಿಕ ಮತಗಳವು ಸಂಭವಿಸುವ ಅಪಾಯವಿದೆ ಎಂದು ಅವರು ಹೇಳಿದರು. ಹೆಸರುಗಳನ್ನು ತಿರಸ್ಕರಿಸಲು ಸರ್ವೇಸಾಧಾರಣ ಹಾಗೂ ಯಾಂತ್ರಿಕವಾದ ನಿರ್ದೇಶನಗಳನ್ನು ನೀಡಲಾಗಿದೆ, ಆಧಾರ್ ಅಥವಾ ಪೋಷಕರೊಂದಿಗೆ ಸಂಬಂಧಿಸುವ ದಾಖಲೆ ಇಲ್ಲದಿದ್ದರೆ ತಕ್ಷಣ ತಿರಸ್ಕರಿಸಲಾಗುತ್ತಿದೆ ಎಂದು ಅವರು ಆಕ್ಷೇಪಿಸಿದರು.
ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಈಗಾಗಲೇ 1.36 ಕೋಟಿ ಹೆಸರುಗಳನ್ನು ಹೊರಗಿಡಲಾಗಿದೆ ಎಂದು ಹೇಳಿದರು. ಅಂತಿಮ ಪಟ್ಟಿ ಫೆಬ್ರವರಿ 14ರಂದು ಪ್ರಕಟಿಸಬಾರದು ಎಂದು ಮನವಿ ಮಾಡಿದರು.
ಪಿಐಎಲ್ ಅರ್ಜಿದಾರರ ಪರವಾಗಿ ಹಿರಿಯ ವಕೀಲ ವಿ ವಿ ಗಿರಿ, ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಿದೆ ಎಂದು ತಿಳಿಸಿದರು. ಫಾರ್ಮ್–7 ಆಕ್ಷೇಪಣೆ ಅರ್ಜಿಗಳನ್ನು ದೊಡ್ಡ ಪ್ರಮಾಣದಲ್ಲಿ ಸುಟ್ಟುಹಾಕಲಾಗಿದೆ ಎಂದು ಹೇಳಿದರು. ಜೊತೆಗೆ ಆಕ್ಷೇಪಣೆ ಸಲ್ಲಿಸಲು ಗಡುವು ವಿಸ್ತರಿಸುವಂತೆ ಮನವಿ ಮಾಡಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇಸಿಐ ಸಲ್ಲಿಸಿದ ಅಫಿಡವಿಟ್ ಪರಿಶೀಲಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಒಂದು ಸಂವಿಧಾನಾತ್ಮಕ ಸಂಸ್ಥೆಯೇ ಚುನಾವಣಾ ಆಯೋಗಕ್ಕೆ ಬೆದರಿಕೆ ಹಾಕುತ್ತಿರುವ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದ ಅವರು, ಹಿಂಸಾಚಾರಕ್ಕೆ ರಾಜಕೀಯ ನಾಯಕರಿಂದ ಪ್ರೇರಣೆ ಸಿಗುತ್ತಿದೆ ಎಂದು ಆರೋಪಿಸಿದರು. ಸಂವಿಧಾನ ಎಲ್ಲಾ ರಾಜ್ಯಗಳಿಗೆ ಸಮಾನವಾಗಿ ಅನ್ವಯವಾಗುತ್ತದೆ ಎಂಬ ಸಂದೇಶ ಸ್ಪಷ್ಟವಾಗಿ ಹೋಗಬೇಕು ಎಂದು ಅವರು ಹೇಳಿದರು.