ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯೋಮಿತಿ ಹೆಚ್ಚಿಸುವುದಿಲ್ಲ: ಕೇಂದ್ರ ಕಾನೂನು ಸಚಿವ ರಿಜಿಜು

ನ್ಯಾಯಾಂಗದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಹುದ್ದೆ ಖಾಲಿ ಇರುವುದರಿಂದ ಪ್ರಕರಣಗಳ ಬಾಕಿ ಹೆಚ್ಚಿದೆ ಎಂಬ ತಪ್ಪು ಕಲ್ಪನೆ ಇದೆ ಎಂದು ಸಚಿವರು ಹೇಳಿದರು.
Kiren Rijiju (Arbitrator's Handbook)
Kiren Rijiju (Arbitrator's Handbook)

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಯಾವುದೇ ಚಿಂತನೆ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಹೇಳಿದ್ದಾರೆ. ಮುಂಬೈನಲ್ಲಿ ಶುಕ್ರವಾರ ನಡೆದ ಇಂಡಿಯಾ ಟುಡೇ ವಾಹಿನಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಲ್ಲದೆ ನಿವೃತ್ತಿ ವಯಸ್ಸು ಮತ್ತು ಖಾಲಿ ಇರುವ ಹುದ್ದೆಗಳು ಪ್ರಕರಣ ಬಾಕಿ ಉಳಿಯಲು ಕಾರಣವಲ್ಲ ಎಂದು ಸಚಿವರು ಹೇಳಿದರು. "ನಾವು ನ್ಯಾಯಮೂರ್ತಿಗಳ ಅಧಿಕಾರಾವಧಿಯನ್ನು ಹೆಚ್ಚಿಸುತ್ತಿಲ್ಲ. ಸುಪ್ರೀಂ ಕೋರ್ಟ್‌ಗೆ 65 (ವರ್ಷ) ಮತ್ತು ಹೈಕೋರ್ಟ್‌ಗೆ 62 (ವರ್ಷ) ನಿವೃತ್ತಿ ವಯಸ್ಸು (ವಿಧಿಸಿರುವುದು) ಸೂಕ್ತವಾಗಿದೆ ಎಂದು ನಾವು ಭಾವಿಸುತ್ತೇವೆ. ನಿರ್ಧಾರ ತೆಗೆದುಕೊಳ್ಳಬೇಕಾದಾಗ ಅದನ್ನು ತೆಗೆದುಕೊಳ್ಳಲಾಗುತ್ತದೆ, ಆದರೆ ಸದ್ಯಕ್ಕೆ ಅಂತಹ ಚಿಂತನೆ ಇಲ್ಲ” ಎಂದು ಅವರು ತಿಳಿಸಿದರು.

ನ್ಯಾಯಾಂಗದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಹುದ್ದೆ ಖಾಲಿ ಇರುವುದರಿಂದ ಪ್ರಕರಣಗಳ ಬಾಕಿ ಹೆಚ್ಚಿದೆ ಎಂಬ ತಪ್ಪು ಕಲ್ಪನೆ ಇದೆ ಎಂದು ಸಚಿವರು ಹೇಳಿದರು."ದೊಡ್ಡ ಪ್ರಶ್ನೆಯೆಂದರೆ - ಪ್ರಕರಣಗಳ ವಿಲೇವಾರಿ. ಅದಕ್ಕೂ ವಯೋಮಿತಿ ಅಥವಾ ಹುದ್ದೆಗಳು ಖಾಲಿ ಇರುವುದಕ್ಕೆ ಯಾವುದೇ ಸಂಬಂಧವಿಲ್ಲ. ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಇರುವ ಕಾರಣಕ್ಕೆ ಪ್ರಕರಣಗಳು ಬಾಕಿ ಉಳಿದಿವೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಇದು ನಿಜವಲ್ಲ. ನಾನು ಎಲ್ಲಾ ಕಾರಣಗಳನ್ನು ವಿವರಿಸಲಾರೆ. ಅದು ನೀರಸ ಅನ್ನಿಸಬಹುದು"  ಎಂದು ಅವರು ಹೇಳಿದರು.

Also Read
"ದೇಶ ನಡೆಸಬೇಕಿರುವುದು ನ್ಯಾಯಾಂಗವೇ ಅಥವಾ ಚುನಾಯಿತ ಸರ್ಕಾರವೇ?" ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಪ್ರಶ್ನೆ

“ಅರ್ಹವಲ್ಲದ ಪ್ರಕರಣಗಳು ಕೂಡ ಸುಪ್ರೀಂ ಕೋರ್ಟ್‌ವರೆಗೂ ಬಂದು ನ್ಯಾಯಾಂಗದ ಹೊರೆಯನ್ನು ಹೆಚ್ಚಿಸುತ್ತಿವೆ. ಜಾಮೀನು ಅರ್ಜಿಗಳು ಕೂಡ ಸುಪ್ರೀಂ ಕೋರ್ಟ್‌ವರೆಗೆ ಹೋಗುತ್ತಿವೆ. ಜಾಮೀನು ಅರ್ಜಿಗಳನ್ನು ವಿಚಾರಣೆ ಮಾಡಲು ಭಾರತದ ಸರ್ವೋಚ್ಚ ನ್ಯಾಯಾಲಯವನ್ನು ರೂಪಿಸಲಾಗಿದೆಯೇ? ಜಾಮೀನು ಅರ್ಜಿಗಳ ವಿಚಾರಣೆಯನ್ನು ಕೆಳ ನ್ಯಾಯಾಲಯಗಳು ನಡೆಸಬೇಕು. ಸುಪ್ರೀಂ ಕೋರ್ಟ್‌ಗೆ ಬಿಡಿ ಹೈಕೋರ್ಟ್‌ಗೂ ಸಹ ಕಡಿಮೆ ಪ್ರಮಾಣದ ಪ್ರಕರಣಗಳು ಮಾತ್ರವೇ ಬರಬೇಕು. ಮರಣದಂಡನೆ ಅಥವಾ ಕೆಲ ಗಂಭೀರ ಪ್ರಕರಣಗಳನ್ನು ಬಿಟ್ಟು ಸರ್ವೋಚ್ಚ ನ್ಯಾಯಾಲಯ ಜಾಮೀನು ಅರ್ಜಿಗಳನ್ನು ಏಕೆ ವಿಚಾರಣೆ ನಡೆಸಬೇಕು?” ಎಂದು ಅವರು ಪ್ರಶ್ನಿಸಿದರು.

“ಕಾನೂನು ವ್ಯಾಜ್ಯಗಳು ಅನಗತ್ಯವಾಗಿ ನ್ಯಾಯಾಲಯದ ಮೆಟ್ಟಿಲೇರದೆ ಮಧ್ಯಸ್ಥಿಕೆ ಮೂಲಕ ಇತ್ಯರ್ಥಗೊಳ್ಳುವಂಹ ವಿಕಸಿತ ಕಾರ್ಯವಿಧಾನವೊಂದನ್ನು ಸರ್ಕಾರ ಎದುರು ನೋಡುತ್ತಿದೆ. ಎಷ್ಟೋ ಪ್ರಕರಣಗಳನ್ನು ಸ್ಥಳೀಯವಾಗಿ ಬಗೆಹರಿಸಬಹುದಾಗಿದ್ದು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಮಧ್ಯಸ್ಥಿಕೆ ಮಸೂದೆಗೆ ಅಂಗೀಕಾರ ದೊರೆಯಬಹುದು ಎಂಬ ಭರವಸೆ ಇದೆ” ಎಂದರು.

ನಿಯಮಿತ ನೇಮಕಾತಿಗಳು ನಡೆಯುತ್ತಿದ್ದರೂ, ನ್ಯಾಯಾಂಗದಲ್ಲಿ ಯಾವಾಗಲೂ 20 ಪ್ರತಿಶತದಷ್ಟು ಹುದ್ದೆ ಖಾಲಿ ಇರುತ್ತದೆ  ಕೊಲಿಜಿಯಂ ವ್ಯವಸ್ಥೆ ಮತ್ತು ಅದು ವ್ಯವಹರಿಸುವ ವಿಧಾನ ಖಂಡಿತವಾಗಲೂ ಎಲ್ಲ ಸಮಯಕ್ಕೂ ಶೇ 20ರಷ್ಟು ಹುದ್ದೆಗಳನ್ನು ಖಾಲಿ ಇರಿಸಿರುತ್ತದೆ ಎಂದು ಸಚಿವರು ಇದೇ ವೇಳೆ ಕೊಲಿಜಿಯಂ ವ್ಯವಸ್ಥೆಯತ್ತ ಬೆರಳು ಮಾಡಿದರು .  

Related Stories

No stories found.
Kannada Bar & Bench
kannada.barandbench.com