ಶೀಘ್ರದಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೊಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಬಂಗಾಳಿ ಸುದ್ದಿವಾಹಿನಿ ಎಬಿಪಿ ಆನಂದ್‌ಗೆ ತಿಳಿಸಿದ್ದಾರೆ.
ಮಾರ್ಚ್ 5ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಳಿಕ ತಮ್ಮ ರಾಜೀನಾಮೆ ನಿರ್ಧಾರದ ಹಿಂದಿನ ಕಾರಣಗಳನ್ನು ಬಹಿರಂಗಪಡಿಸುವುದಾಗಿ ಸುದ್ದಿವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಅನೇಕ ವಿವಾದಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಗೆ ಗ್ರಾಸವಾಗಿದ್ದರು.
ವಿಭಾಗೀಯ ಪೀಠದ ಮುಖ್ಯಸ್ಥರಾಗಿರುವ ನ್ಯಾಯಮೂರ್ತಿ ಸೌಮೆನ್ ಸೇನ್ ಅವರು ರಾಜ್ಯದ ರಾಜಕೀಯ ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.
ನಕಲಿ ಜಾತಿ ಪ್ರಮಾಣಪತ್ರ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸುವಂತೆ ಪಶ್ಚಿಮ ಬಂಗಾಳ ಪೊಲೀಸರಿಗೆ ನಿರ್ದೇಶನ ನೀಡಿದ ನ್ಯಾ. ಗಂಗೋಪಾಧ್ಯಾಯ ಅವರ ಆದೇಶವನ್ನು ವಿಭಾಗೀಯ ಪೀಠದ ಭಾಗವಾಗಿದ್ದ ನ್ಯಾ. ಸೇನ್ ತಡೆಹಿಡಿದ ನಂತರ ಈ ಬೆಳವಣಿಗೆ ಸಂಭವಿಸಿತ್ತು.
ನಂತರ ಅದೇ ದಿನ ಪ್ರಕರಣವನ್ನು ಮತ್ತೆ ಕೈಗೆತ್ತಿಕೊಂಡಿದ್ದ ನ್ಯಾ. ಗಂಗೋಪಾಧ್ಯಾಯ ಪ್ರಕರಣದ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸುವಂತೆ ಎಜಿಗೆ ಆದೇಶಿಸಿದ್ದರು. ಜೊತೆಗೆ ವಿಭಾಗೀಯ ಪೀಠ ಹೊರಡಿಸಿದ ತಡೆಯಾಜ್ಞೆಯ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದಿದ್ದರು.
ವಿಶೇಷವೆಂದರೆ ಅರ್ಜಿಯಲ್ಲಿ ಸಿಬಿಐ ತನಿಖೆಗೆ ಯಾವುದೇ ನಿರ್ದೇಶನ ಕೋರಿರಲಿಲ್ಲವಾದರೂ ಅವರು ಸಿಬಿಐ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಆದೇಶಿಸಿದ್ದರು.
ವಿಶೇಷವೆಂದರೆ, ಅರ್ಜಿಯು ಸಿಬಿಐ ತನಿಖೆಗೆ ಯಾವುದೇ ನಿರ್ದೇಶನ ಕೋರಿರಲಿಲ್ಲವಾದರೂ ನ್ಯಾಯಮೂರ್ತಿಗಳು ಸಿಬಿಐನ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸಬೇಕೆಂದು ಆದೇಶಿಸಿದ್ದರು.
ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಭಾಗಿಯಾಗಿರುವ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ನ್ಯಾ. ಅಮೃತಾ ಸಿನ್ಹಾ ಅವರನ್ನು ನ್ಯಾ. ಸೇನ್ ತಮ್ಮ ಕೊಠಡಿಗೆ ಕರೆದು ಅಭಿಷೇಕ್ ಬ್ಯಾನರ್ಜಿಗೆ ರಾಜಕೀಯ ಭವಿಷ್ಯವಿದ್ದು ಅವರಿಗೆ ತೊಂದರೆಯಾಗಬಾರದು ಎಂದು ಹೇಳಿದ್ದರು ಎಂಬುದಾಗಿ ನ್ಯಾ. ಗಂಗೋಪಾಧ್ಯಾಯ ತಮ್ಮ ಆದೇಶದಲ್ಲಿ ಆರೋಪಿಸಿದ್ದರು.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದ ಸಂಬಂಧಿತ ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ತನಗೆ ವರ್ಗಾಯಿಸಿಕೊಂಡಿತ್ತು.
ಮೇ 2018ರಿಂದ ಹೈಕೋರ್ಟ್ ನ್ಯಾಯಮೂರ್ತಿಯಾಗಿರುವ ಗಂಗೋಪಾಧ್ಯಾಯ ಅವರು ವಿಸ್ತೃತ ಪೀಠದ ಆದೇಶಗಳ ನಿರ್ಲಕ್ಷ್ಯ, ರಾಜಕೀಯ ವಿಷಯಗಳ ಬಗ್ಗೆ ಸುದ್ದಿವಾಹಿನಿಗಳ ಜೊತೆ ಚರ್ಚೆ ಮಾತ್ರವಲ್ಲದೆ, ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೇ ಆದೇಶ ನೀಡುವ ಮೂಲಕ ನ್ಯಾಯಾಂಗ ಶಿಸ್ತಿನ ಮಾನದಂಡಗಳನ್ನು ಪದೇ ಪದೇ ಉಲ್ಲಂಘಿಸಿದ ಆರೋಪ ಎದುರಿಸುತ್ತಿದ್ದಾರೆ.
ಏಪ್ರಿಲ್ 2023ರಲ್ಲಿ, 'ಶಾಲಾ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದ ನ್ಯಾ. ಗಂಗೋಪಾಧ್ಯಾಯ ಅವರು ಈ ಹಗರಣದಲ್ಲಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಪಾತ್ರದ ಬಗ್ಗೆ ಸ್ಥಳೀಯ ಬಂಗಾಳಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಟಿವಿ ಚಾನೆಲ್ ಗಳಿಗೆ ಸಂದರ್ಶನ ನೀಡುವುದು ಹಾಲಿ ನ್ಯಾಯಮೂರ್ತಿಗಳ ಕೆಲಸವಲ್ಲ ಎಂದಿತ್ತು.
ನ್ಯಾ. ಗಂಗೋಪಾಧ್ಯಾಯ ಅವರು ಸಂದರ್ಶನ ನೀಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಕಲ್ಕತ್ತಾ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಂದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ವರದಿ ಕೇಳಿತ್ತು.
ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಸಂದರ್ಶನ ನೀಡಿದ್ದು ನಿಜವಾಗಿದ್ದರೆ, ಅರ್ಜಿಗಳ ವಿಚಾರಣೆ ಮುಂದುವರಿಸಲು ಅವರಿಗೆ ಅವಕಾಶ ನೀಡುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿತ್ತು.
ತರುವಾಯ, ಪ್ರಕರಣವನ್ನು ಮತ್ತೊಂದು ಪೀಠಕ್ಕೆ ನಿಯೋಜಿಸುವಂತೆ ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರಿಗೆ ಸಿಜೆಐ ಆದೇಶಿಸಿದ್ದರು.
ಸುಪ್ರೀಂ ಕೋರ್ಟ್ ಆದೇಶ ನೀಡಿದ ಕೆಲವೇ ಗಂಟೆಗಳಲ್ಲಿ, ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಬಂಗಾಳಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದ ವರದಿ ಮತ್ತು ಅಧಿಕೃತ ಅನುವಾದವನ್ನು ತಮ್ಮೆದುರು ಹಾಜರುಪಡಿಸುವಂತೆ ಸುಪ್ರೀಂ ಕೋರ್ಟ್ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದರು.
ಪರಿಣಾಮ ಅದೇ ದಿನ ಸಂಜೆ ವಿಶೇಷ ಅಧಿವೇಶನ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರಿದ್ದ ವಿಭಾಗೀಯ ಪೀಠ ಇಂತಹ ಆದೇಶ 'ನ್ಯಾಯಾಂಗ ಶಿಸ್ತಿಗೆ ವಿರುದ್ಧʼ ಎಂದಿತ್ತು.