
ರಾಜಕೀಯ ನಾಯಕರ ಫೋಟೊಗಳನ್ನು ಸರ್ಕಾರಿ ಕಟ್ಟಡಗಳು, ಸಾರ್ವಜನಿಕ ಸ್ಥಳಗಳಲ್ಲಿ ಹಾಕುವುದು ಕರ್ನಾಟಕ ಬಯಲು ಸ್ಥಳಗಳನ್ನು ವಿರೂಪಗೊಳಿಸುವುದನ್ನು ತಡೆಯುವ ಕಾಯಿದೆಯ ವ್ಯಾಪ್ತಿಗೆ ಬರಲಿದೆಯೇ ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣ ಪತ್ರ ಸಲ್ಲಿಸುವಂತೆ ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.
ಬಿಬಿಎಂಪಿ ಹಾಗೂ ಇತರೆ ಸರ್ಕಾರಿ ಕಟ್ಟಡಗಳಲ್ಲಿ, ಉದ್ಯಾನಗಳಲ್ಲಿ ವಿಜಯನಗರ ಶಾಸಕ ಎಂ ಕೃಷ್ಣಪ್ಪ, ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ ಅವರ ಫೋಟೊಗಳನ್ನು ಬಿಬಿಎಂಪಿ ಹಣದಲ್ಲಿ ಹಾಕಿರುವುದಕ್ಕೆ ಆಕ್ಷೇಪಿಸಿ ಸ್ಥಳೀಯ ನಿವಾಸಿ ಎಚ್ ಎಂ ಆರತೀಶ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ. ಐ ಅರುಣ್ ಅವರ ವಿಭಾಗೀಯ ಪೀಠ ನಡೆಸಿತು.
ಅರ್ಜಿದಾರರ ಪರ ವಕೀಲರು “ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಮತ್ತು ಇಲಾಖಾ ಸಚಿವರು ಚಿತ್ರಗಳನ್ನು ಹೊರತುಪಡಿಸಿ, ಸಂಸದರು, ಶಾಸಕರು ಸೇರಿದಂತೆ ಬೇರೆ ಯಾರ ಚಿತ್ರಗಳನ್ನು ಸರ್ಕಾರಿ ಕಟ್ಟಡಗಳಲ್ಲಿ ಹಾಕುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಅದಾಗ್ಯೂ, ಪ್ರಿಯಕೃಷ್ಣ ಮತ್ತು ಕೃಷ್ಣಪ್ಪ ಅವರ ಚಿತ್ರಗಳನ್ನು ಬಿಬಿಎಂಪಿ ವ್ಯಾಪ್ತಿಯ ಕಟ್ಟಡಗಳಲ್ಲಿ ಹಾಕಲಾಗಿದೆ. ಅದೂ ಸಹ ಬಿಬಿಎಂಪಿಯ ಹಣದಲ್ಲಿ. ಅಲ್ಲದೇ ಅರ್ಜಿದಾರರಿಗೆ ಈ ಇಬ್ಬರು ಶಾಸಕರಿಂದ ನಿರಂತರ ಬೆದರಿಕೆ ಇದೆ ಎಂದು ಪೀಠದ ಗಮನಕ್ಕೆ ತಂದರು.
ಬಿಬಿಎಂಪಿ ಪರ ವಕೀಲರು “ಪಾಲಿಕೆಯು ಈ ಸಂಬಂಧ ಸುತ್ತೋಲೆ ಹೊರಡಿಸಿದೆ. ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದರು. ಈ ವೇಳೆ ಫೋಟೊ ಅಳವಡಿಸುವುದು ವಿರೂಪಗೊಳಿಸುವ ವ್ಯಾಪ್ತಿಗೆ ಬರುತ್ತದೆಯೇ ಎಂದು ಪೀಠ ಕೇಳಿತು. ಅದು ತಿಳಿದಿಲ್ಲ. ಆದರೆ, ಬಿಬಿಎಂಪಿ ಸುತ್ತೋಲೆಯಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಕೀಲರು ಸಮಜಾಯಿಷಿ ನೀಡಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ರಾಜಕೀಯ ನಾಯಕರ ಫೋಟೊಗಳನ್ನು ಸರ್ಕಾರಿ ಕಟ್ಟಡಗಳು, ಸಾರ್ವಜನಿಕ ಸ್ಥಳಗಳಲ್ಲಿ ಹಾಕುವುದರಿಂದ ಕರ್ನಾಟಕ ಬಯಲು ಸ್ಥಳಗಳನ್ನು ವಿರೂಪಗೊಳಿಸುವುದನ್ನು ತಡೆಯುವ ಕಾಯಿದೆಯ ಉಲ್ಲಂಘನೆ ಆಗಲಿದೆಯೇ, ಈ ವಿಚಾರ ಕಾಯಿದೆಯ ವ್ಯಾಪ್ತಿಗೆ ಬರಲಿದೆಯೇ ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣ ಪತ್ರ ಸಲ್ಲಿಸುವಂತೆ ಬಿಬಿಎಂಪಿ ಪರ ವಕೀಲರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಮಾರ್ಚ್ 21ಕ್ಕೆ ಮುಂದೂಡಿತು.