ಸಿಂಹಗಳಿಗೆ ಇರಿಸಿದ್ದ ಸೀತೆ, ಅಕ್ಬರ್‌ ಹೆಸರು ಬದಲಿಸಲು ಸೂಚಿಸಿದ ಕಲ್ಕತ್ತಾ ಹೈಕೋರ್ಟ್‌

ಸೀತೆಯನ್ನು ದೇಶದ ಬಹುಸಂಖ್ಯಾತ ಜನರು ಪೂಜಿಸುತ್ತಾರೆ ಮತ್ತು ಅಕ್ಬರ್ ಒಬ್ಬ ದಕ್ಷ, ಯಶಸ್ವಿ ಜಾತ್ಯತೀತ ಮೊಘಲ್ ಚಕ್ರವರ್ತಿ ಎಂದು ಹೇಳಿದ ನ್ಯಾಯಾಲಯ.
ಸಿಂಹಿ
ಸಿಂಹಿ ಪ್ರತಿನಿಧಿ ಉದ್ದೇಶಕ್ಕಾಗಿ ಚಿತ್ರ
Published on

ಸಿಲಿಗುರಿಯ ಉತ್ತರ ಬಂಗಾಳ ವನ್ಯಜೀವಿ ಉದ್ಯಾನಕ್ಕೆ ಕರೆತರುವ ಮುನ್ನವೇ 2016 ಮತ್ತು 2018ರಲ್ಲಿ ಎರಡು ಸಿಂಹಗಳಿಗೆ ಸೀತಾ ಮತ್ತು ಅಕ್ಬರ್ ಎಂದು ತ್ರಿಪುರ ಮೃಗಾಲಯದ ಅಧಿಕಾರಿಗಳು ನಾಮಕರಣ ಮಾಡಿದ್ದರು ಎಂಬುದಾಗಿ ಪಶ್ಚಿಮ ಬಂಗಾಳ ಸರ್ಕಾರ ಗುರುವಾರ ಕಲ್ಕತ್ತಾ ಹೈಕೋರ್ಟ್‌ಗೆ ತಿಳಿಸಿತು.

ಅದೇನೇ ಇದ್ದರೂ ವಿವಾದಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಆ ಎರಡು ಸಿಂಹಗಳಿಗೆ ಬೇರೆ ಹೆಸರಿಡುವುದನ್ನು ಪರಿಗಣಿಸುವಂತೆ ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರಿದ್ದ ಏಕಸದಸ್ಯ ಪೀಠ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಒತ್ತಾಯಿಸಿತು.

ಸೀತೆಯನ್ನು ದೇಶದ ಬಹುಸಂಖ್ಯಾತ ಜನರು ಪೂಜಿಸುತ್ತಾರೆ ಮತ್ತು ಅಕ್ಬರ್ ಒಬ್ಬ ದಕ್ಷ, ಯಶಸ್ವಿ ಮತ್ತು ಜಾತ್ಯತೀತ ಮೊಘಲ್ ಚಕ್ರವರ್ತಿ ಎಂದು ನ್ಯಾಯಾಲಯ ಇದೇ ವೇಳೆ ತಿಳಿಸಿತು.

"ವಕೀಲರೇ ನಿಮ್ಮ ಸ್ವಂತ ಸಾಕುಪ್ರಾಣಿಗೆ ಯಾವುದಾದರೂ ಹಿಂದೂ ದೇವರು ಅಥವಾ ಮುಸ್ಲಿಂ ಪ್ರವಾದಿಯ ಹೆಸರಿಡುತ್ತೀರಾ... ನಮ್ಮಲ್ಲಿ ಯಾರಾದರೂ ಅಧಿಕಾರಿಗಳಾಗಿದ್ದರೆ, ಯಾರೂ ಅವುಗಳನ್ನು ಅಕ್ಬರ್ ಮತ್ತು ಸೀತೆ ಎಂದು ಹೆಸರಿಸುತ್ತಿರಲಿಲ್ಲ ಎಂದು ಭಾವಿಸುತ್ತೇನೆ. ನಮ್ಮಲ್ಲಿ ಯಾರಾದರೂ ಪ್ರಾಣಿಯೊಂದಕ್ಕೆ ರವೀಂದ್ರನಾಥ ಟ್ಯಾಗೋರ್ ಅವರ ಹೆಸರಿಡುವುದನ್ನು ಯೋಚಿಸಲು ಸಾಧ್ಯವೇ? ಸೀತೆಯನ್ನು ಈ ದೇಶದ ವಿಸ್ತೃತ ಭಾಗ ಪೂಜಿಸುತ್ತದೆ ... ಸಿಂಹಕ್ಕೆ ಅಕ್ಬರ್ ಹೆಸರಿಡುವುದನ್ನೂ ನಾನು ವಿರೋಧಿಸುತ್ತೇನೆ. ಅಕ್ಬರ್‌ ದಕ್ಷ, ಯಶಸ್ವಿ ಮತ್ತು ಜಾತ್ಯತೀತ ಮೊಘಲ್ ಚಕ್ರವರ್ತಿಯಾಗಿದ್ದರು" ಎಂದು ನ್ಯಾಯಾಲಯ ಹೇಳಿದೆ.

"ನೀವು ಅದಕ್ಕೆ ಬಿಜ್ಲಿ ಅಥವಾ ಆ ರೀತಿಯ ಬೇರೆ ಹೆಸರಿಡಬಹುದಿತ್ತು. ಬದಲಿಗೆ ಅಕ್ಬರ್ ಮತ್ತು ಸೀತೆಯ ಹೆಸರುಗಳನ್ನೇ ಇಟ್ಟಿದ್ದೇಕೆ?" ಎಂದು ನ್ಯಾಯಾಲಯ ಪ್ರಶ್ನಿಸಿತು.

ಬಂಗಾಳ ವನ್ಯಜೀವಿ ಉದ್ಯಾನದ ಸಿಂಹಿಣಿಗೆ ಸೀತಾ ಎಂದು ಹೆಸರಿಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಪ್ರಶ್ನೆಗಳನ್ನು ಕೇಳಿದೆ.

ತ್ರಿಪುರಾದಿಂದ ಸಿಲಿಗುರಿಯ ಬಂಗಾಳ ಸಫಾರಿ ಉದ್ಯಾನವನಕ್ಕೆ ತರಲಾದ ಎರಡು ಸಿಂಹಗಳಿಗೆ ಸೀತಾ ಮತ್ತು ಅಕ್ಬರ್ ಹೆಸರುಗಳನ್ನು ನೀಡಲಾಗಿದೆಯೇ ಎಂದು ಅಧಿಕೃತವಾಗಿ ತಿಳಿಸುವಂತೆ ಪೀಠ ನಿನ್ನೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಆದರೆ ಹೆಸರಿಟ್ಟಿದ್ದು ಪಶ್ಚಿಮ ಬಂಗಾಳ ಸರ್ಕಾರವಲ್ಲ ಬದಲಿಗೆ ತ್ರಿಪುರ ಮೃಗಾಲಯದ ಅಧಿಕಾರಿಗಳು ಎಂದು ಇಂದು ದಾಖಲೆಗಳ ಸಹಿತ ವಿವರಿಸಲಾಯಿತು.

ಆಗ ನ್ಯಾಯಾಲಯ ಸಿಂಹಗಳಿಗೆ ದೇವರ ಅಥವಾ ಐತಿಹಾಸಿಕವಾಗಿ ಪೂಜ್ಯ ವ್ಯಕ್ತಿಗಳ ಹೆಸರನ್ನು ಇಡುವುದು ಒಳ್ಳೆಯದಲ್ಲ ಎಂದಿತು.

ಜೊತೆಗೆ, ಸಿಂಹಗಳಿಗೆ ಈ ಹೆಸರುಗಳನ್ನಿಟ್ಟು ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದು ಅರ್ಜಿದಾರರು ಹೇಳುತ್ತಿರುವುದರಿಂದ, ಪ್ರಕರಣವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಅರ್ಜಿಯಾಗಿ ಪರಿಶೀಲಿಸಬೇಕಾಗುತ್ತದೆ ಎಂಬುದಾಗಿ ನ್ಯಾಯಾಲಯ ಹೇಳಿತು. ಅದರಂತೆ ಪಿಐಎಲ್‌ಗಳನ್ನು ಆಲಿಸುವ ಪೀಠದೆದುರು ವಿಚಾರಣೆಗೆ ಪಟ್ಟಿ ಮಾಡುವಂತೆ ಅದು ಆದೇಶಿಸಿತು.

Kannada Bar & Bench
kannada.barandbench.com