ದರ್ಗಾ ಸಮೀಪ ಮದ್ಯದ ಅಂಗಡಿ: ಊಹೆ, ಕಲ್ಪನೆಗಳ ಆಧಾರದಲ್ಲಿ ಅರ್ಜಿದಾರರಿಂದ ವಾದ ಎಂದು ಪಿಐಎಲ್‌ ವಜಾ ಮಾಡಿದ ಹೈಕೋರ್ಟ್‌

ಸಮಗ್ರವಾದ ಮಾಹಿತಿ ಒದಗಿಸದೆ ಅವ್ಯವಸ್ಥಿತವಾಗಿ ಅರ್ಜಿ ಸಲ್ಲಿಸಲಾಗಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೆಸರಿನಲ್ಲಿ ಇಂತಹ ಅರೆಬೆಂದ ಅರ್ಜಿಗಳನ್ನು ಪುರಸ್ಕರಿಸಲಾಗದು ಎಂದ ನ್ಯಾಯಾಲಯ.
Karnataka High Court
Karnataka High Court

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಹುಸೈನ್‌ಪುರ ಗ್ರಾಮದಲ್ಲಿ ಮುಸ್ಲಿಂ ಸಮುದಾಯದವರು ಪೂಜಿಸುವ ದರ್ಗಾದಿಂದ 100 ಮೀಟರ್ ದೂರದಲ್ಲಿ ಮದ್ಯದ ಅಂಗಡಿಗೆ ನೀಡಿರುವ ಪರವಾನಗಿ ರದ್ದುಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ.

ಬಾಲಾಜಿ ಸೇರಿ ಹುಸೈನ್‌ಪುರ ಗ್ರಾಮದ ಮೂವರು ನಿವಾಸಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಹುಸೈನ್‌ಪುರ ಗ್ರಾಮದ ದರ್ಗಾದಿಂದ ಕೇವಲ 100 ಮೀಟರ್‌ ಅಂತರದಲ್ಲಿ ಅನ್ನಪೂರ್ಣ ಬಾರ್‌ ಮತ್ತು ರೆಸ್ಟೋರೆಂಟ್‌ ನಡೆಸಲಾಗುತ್ತಿದೆ. ನಿಯಮಗಳನ್ನು ಉಲ್ಲಂಘಿಸಿ ಮದ್ಯದ ಅಂಗಡಿ ನಡೆಸಲಾಗುತ್ತಿದೆ. ಸ್ಥಳೀಯ ಮನವಿ ಪತ್ರ ಪರಿಗಣಿಸಿ ಬಾರ್‌ ಅನ್ನು ಬೇರೊಂದು ಸ್ಥಳಕ್ಕೆ ಸ್ಥಳಾಂತರಿಸಲು ಸರ್ಕಾರದ ಪ್ರಾಧಿಕಾರಗಳು ಬಯಸಿವೆ ಎಂಬುದಾಗಿ ಅರ್ಜಿದಾರರು ಹೇಳುತ್ತಾರೆ. ಆದರೆ, ಸರ್ಕಾರದ ಸಂಬಂಧಪಟ್ಟ ಇಲಾಖೆ ಅಥವಾ ಸಂಸ್ಥೆ ವಿವಾದಿತ ಸ್ಥಳದ ಸರ್ವೇ ನಡೆಸಿದೆ ಹಾಗೂ ಸ್ಥಳೀಯರ ಮನವಿಯನ್ನು ಸರ್ಕಾರ ಸಂಬಂಧಪಟ್ಟ ಇಲಾಖೆ ಪರಿಗಣಿಸಿದೆ ಎಂಬುದನ್ನು ತೋರಿಸುವ ಯಾವೊಂದು ದಾಖಲೆಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಅರ್ಜಿದಾರರ ಪೈಕಿ ಯಾರೊಬ್ಬರು ಮುಸ್ಲಿಂ ಸಮುದಾಯದವರು ಇಲ್ಲ. ಇದರಿಂದ ಅರ್ಜಿಯಲ್ಲಿ ಎತ್ತಿರುವ ಕುಂದು ಕೊರತೆ ವಾಸ್ತವ ಪರಿಸ್ಥಿತಿಯಲ್ಲಿದೆ ಎಂಬುದು ದೃಢಪಡುವುದಿಲ್ಲ. ಮೇಲಾಗಿ ಅರ್ಜಿದಾರರು ಕೇವಲ ಊಹೆ ಹಾಗೂ ಕಲ್ಪನೆಗಳ ಆಧಾರದ ವಾದ ಮಂಡಿಸಿದ್ದಾರೆ. ಸಮಗ್ರವಾದ ಮಾಹಿತಿ ಒದಗಿಸದೆ ಅವ್ಯವಸ್ಥಿತವಾಗಿ ಅರ್ಜಿ ಸಲ್ಲಿಸಲಾಗಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೆಸರಿನಲ್ಲಿ ಇಂತಹ ಅರೆಬೆಂದ ಅರ್ಜಿಗಳನ್ನು ಪುರಸ್ಕರಿಸಲಾಗದು ಎಂದು ಅಭಿಪ್ರಾಯಪಟ್ಟು ಪೀಠವು ಅರ್ಜಿ ವಜಾಗೊಳಿಸಿತು.

Attachment
PDF
Balaji and others Vs State of Karnataka.pdf
Preview

Related Stories

No stories found.
Kannada Bar & Bench
kannada.barandbench.com