ಮತಾಂತರ ನಿಷೇಧ ಮಸೂದೆ ಮಂಡನೆಗೆ ಸಿದ್ಧವಾದ ರಾಜ್ಯ ಸರ್ಕಾರ; ಸೋಮವಾರದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

ಮಸೂದೆಯ ಪ್ರತಿಯನ್ನು ಆಯ್ದ ಮಾಧ್ಯಮಗಳಿಗೆ ಸೋರಿಕೆ ಮಾಡುವ ಮೂಲಕ ಸರ್ಕಾರವು ಸಾರ್ವಜನಿಕ ವಲಯದಿಂದ ವ್ಯಕ್ತವಾಗುವ ಟೀಕೆಟಿಪ್ಪಣಿಗಳ ಬಗ್ಗೆ ಕಣ್ಣಿಟ್ಟಿದ್ದು ಮಸೂದೆಗೆ ಅಂತಿಮ ರೂಪವನ್ನು ಆನಂತರವಷ್ಟೇ ನೀಡಲು ಉದ್ದೇಶಿಸಿದೆ ಎನ್ನುವ ಮಾಹಿತಿ ಇದೆ.
Anti Conversion Bill and Suvarna Vidhana Soudha, Belagavi

Anti Conversion Bill and Suvarna Vidhana Soudha, Belagavi

ಬೆಳಗಾವಿಯ ವಿಧಾನ ಮಂಡಲ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿರುವ ವಿವಾದಾತ್ಮಕ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸುವ ಸಂಬಂಧ ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರವು ನಿರ್ಧಾರ ಕೈಗೊಳ್ಳಲಿದೆ. ಮುಂದಿನ ಬುಧವಾರ ಅಥವಾ ಆ ನಂತರ ಮಸೂದೆ ಮಂಡನೆಯಾಗುವ ಸಾಧ್ಯತೆಗಳಿವೆ.

ಪ್ರಸ್ತಾವಿತ ಮಸೂದೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರು, ಬುದ್ಧಿಮಾಂದ್ಯರು, ಅಪ್ರಾಪ್ತರು ಮತ್ತು ಹೆಂಗಸರ ಮತಾಂತರ ಮಾಡಿದರೆ ಕನಿಷ್ಠ ಮೂರು ವರ್ಷದಿಂದ ಹತ್ತು ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ರೂ.50 ಸಾವಿರ ದಂಡ ವಿಧಿಸಲು ಅನುವು ಮಾಡಲಾಗಿದೆ ಎನ್ನಲಾಗಿದೆ. ಮತಾಂತರಕ್ಕೂ ಎರಡು ತಿಂಗಳು ಮುನ್ನ ಮತಾಂತರಗೊಳ್ಳುವ ವ್ಯಕ್ತಿಯು ಈ ಕುರಿತು ನೋಟಿಸ್‌ ಅನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರಿಗೆ ನೀಡಬೇಕಾಗುತ್ತದೆ. ಅದೇ ರೀತಿ, ಮತಾಂತರ ಮಾಡುವ ವ್ಯಕ್ತಿಯೂ ಸಹ ಈ ಬಗ್ಗೆ ಒಂದು ತಿಂಗಳಿಗೂ ಮುನ್ನ ಮ್ಯಾಜಿಸ್ಟ್ರೇಟ್‌ ಅವರಿಗೆ ನೋಟಿಸ್‌ ನೀಡಬೇಕಾಗುತ್ತದೆ. ಮತಾಂತರಗೊಂಡ ನಂತರ ವ್ಯಕ್ತಿಯು ಒಂದು ತಿಂಗಳ ಒಳಗೆ ಈ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರಿಗೆ ಮಾಹಿತಿಯನ್ನು ನೀಡಬೇಕು. ತಪ್ಪಿದಲ್ಲಿ ಮತಾಂತರಗೊಂಡವರು ಹಾಗೂ ಮತಾಂತರ ಮಾಡಿದವರು ಇಬ್ಬರೂ ಸೆರೆವಾಸ ಅನುಭವಿಸಬೇಕಾಗುತ್ತದೆ.

ಇದಲ್ಲದೆ ಒಮ್ಮೆ ಮತಾಂತರಗೊಂಡ ನಂತರ ಒಂದೊಮ್ಮೆ ಆ ವ್ಯಕ್ತಿ ಮೀಸಲಾತಿ ವ್ಯಾಪ್ತಿಗೆ ಒಳಪಡುವ ಜಾತಿ, ಧರ್ಮಗಳಿಗೆ ಸೇರಿದ್ದರೆ ಅವರಿಗೆ ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಮುಂತಾದವುಗಳಿಂದ ದೊರೆಯುವ ಸವಲತ್ತುಗಳನ್ನು ನಿಲ್ಲಿಸಲಾಗುತ್ತದೆ ಎನ್ನಲಾಗಿದೆ.

ಮಸೂದೆಯ ಪ್ರತಿಯನ್ನು ಆಯ್ದ ಮಾಧ್ಯಮಗಳಿಗೆ ಸೋರಿಕೆ ಮಾಡುವ ಮೂಲಕ ಸರ್ಕಾರವು ಸಾರ್ವಜನಿಕ ವಲಯದಿಂದ ವ್ಯಕ್ತವಾಗುವ ಟೀಕೆಟಿಪ್ಪಣಿಗಳ ಬಗ್ಗೆ ಕಣ್ಣಿಟ್ಟಿದ್ದು ಮಸೂದೆಗೆ ಅಂತಿಮ ರೂಪವನ್ನು ಆನಂತರವಷ್ಟೇ ನೀಡಲಾಗುವುದು ಎನ್ನುವ ಮಾಹಿತಿ ಇದೆ. ಇದಾಗಲೇ ಉತ್ತರ ಪ್ರದೇಶ ಹಾಗೂ ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷವು ಮತಾಂತರ ಕಾಯಿದೆಗಳನ್ನು ಜಾರಿಗೆ ತಂದಿದ್ದು ರಾಜ್ಯ ಸರ್ಕಾರವು ಮಂಡಿಸಲು ಉದ್ದೇಶಿಸಿರುವ ಕಾಯಿದೆಯು ಬಹುತೇಕವಾಗಿ ಅದರ ನೆರಳಿನಂತಿರಲಿದೆ ಎನ್ನಲಾಗಿದೆ.

ಮಸೂದೆಗೆ ಅಂತಿಮ ಸ್ಪರ್ಶ ನೀಡುವ ಸಂಬಂಧ ಗುರುವಾರ ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಕಾನೂನು ಮತ್ತು ಸಂಸದೀಯ ಸಚಿವ ಜೆ ಸಿ ಮಾಧುಸ್ವಾಮಿ ಅವರು ಸಮಾಲೋಚನೆ ನಡೆಸಿದ್ದಾರೆ.

Also Read
ಬೆಳಗಾವಿಯಲ್ಲಿ ಇಂದಿನಿಂದ ವಿಧಾನ ಮಂಡಲ ಚಳಿಗಾಲದ ಅಧಿವೇಶನ: ಮತಾಂತರ ನಿಷೇಧ ಮಸೂದೆ ಮಂಡನೆಯ ಸುತ್ತ ಎಲ್ಲರ ಕಣ್ಣು

ಬಿಟ್‌ ಕಾಯಿನ್ ಹಗರಣ, ಸಚಿವರೊಬ್ಬರ ಅಕ್ರಮ ಆಸ್ತಿ ಪ್ರಕರಣದ ಹಗರಣ, ರಮೇಶ್‌ ಜಾರಕಿಹೊಳಿ ಸಿ ಡಿ ಹಗರಣದ ಬಗ್ಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಲು ವಿರೋಧ ಪಕ್ಷ ಕಾಂಗ್ರೆಸ್‌ ಮುಂದಾಗಿರುವ ಹಿನ್ನೆಲೆಯಲ್ಲಿ ಮತಾಂತರ ನಿಷೇಧ ಕಾಯಿದೆಯನ್ನು ಹೆಚ್ಚಿನ ಚರ್ಚೆಗೆ, ಸದನದೊಳಗಿನ ಪ್ರತಿಭಟನೆಗಳಿಗೆ ಆಸ್ಪದವಾಗದಂತೆ ಅಧಿವೇಶನದ ಕೊನೆಯ ದಿನಗಳಲ್ಲಿ ಮಂಡಿಸುವ ಚಿಂತನೆ ಸರ್ಕಾರಕ್ಕಿದೆ ಎನ್ನಲಾಗಿದೆ.

Related Stories

No stories found.
Kannada Bar & Bench
kannada.barandbench.com