

ವಿನ್ಜೊ ಗೇಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತದರ ಪ್ರತಿನಿಧಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ ಡಿ) ಬೆಂಗಳೂರಿನಲ್ಲಿ ನಡೆಸುತ್ತಿರುವ ತನಿಖೆಯನ್ನು ಪ್ರಶ್ನಿಸಿ ಕಂಪನಿಯ ಸಹ-ಸಂಸ್ಥಾಪಕಿ ಹಾಗೂ ನಿರ್ದೇಶಕಿ ಸೌಮ್ಯಾ ರಾಥೋಡ್ ಕರ್ನಾಟಕ ಹೈಕೋರ್ಟ್‌ಗೆ ಗುರುವಾರ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಬೆಂಗಳೂರು ವಲಯ ಕಚೇರಿಯಲ್ಲಿ ದಾಖಲಾಗಿರುವ ಇಸಿಐಆರ್ ರದ್ದುಕೋರಿ ಸೌಮ್ಯಾ ರಾಥೋಡ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ಪೀಠವು ವಿಚಾರಣೆಯನ್ನು ಜನವರಿ 14ಕ್ಕೆ ಮುಂದೂಡಿತಲ್ಲದೆ, ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಇಡಿಗೆ ನಿರ್ದೇಶಿಸಿತು.
ಸೌಮ್ಯಾ ರಾಥೋಡ್ ಪರ ಹಿರಿಯ ವಕೀಲ ಸಜನ್ ಪೂವಯ್ಯ ಅವರು “ವಿನ್ಜೊ ಸಂಸ್ಥೆಯ ಕಾರ್ಯಾಚರಣೆ, ಬ್ಯಾಂಕ್ ಖಾತೆಗಳು ಮತ್ತು ಉದ್ಯೋಗಿಗಳು ದೆಹಲಿಯಲ್ಲೇ ನೆಲೆಗೊಂಡಿರುವುದರಿಂದ, ಇ ಡಿ ತನ್ನ ತನಿಖೆಯನ್ನು ದೆಹಲಿಯಲ್ಲಿ ನಡೆಸಬೇಕೇ ಹೊರತು ಬೆಂಗಳೂರಿನಲ್ಲಲ್ಲ” ಎಂದು ಆಕ್ಷೇಪಿಸಿದರು.
“ಇಡಿ ತನಿಖೆ ಹೊರತುಪಡಿಸಿ, ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲವೂ ದೆಹಲಿಯಲ್ಲೇ ಕೇಂದ್ರೀಕೃತವಾಗಿದೆ. ಕಂಪನಿಯ ಹದಿನಾಲ್ಕು ಖಾತೆಗಳನ್ನು ಸ್ಥಗಿತಗೊಳಿಸಲಾಗಿದ್ದು (ಫ್ರೀಜ್), ಇವೆಲ್ಲವೂ ದೆಹಲಿಯಲ್ಲಿವೆ. ಇ ಡಿಗೆ ದೆಹಲಿಯಲ್ಲಿ ಕಚೇರಿ ಇಲ್ಲವೇ? ಹೀಗಿದ್ದರೂ, ಬೆಂಗಳೂರನ್ನೇ ಏಕೆ ಆಯ್ಕೆ ಮಾಡಿಕೊಳ್ಳಲಾಗಿದೆ?” ಎಂದು ಪ್ರಶ್ನಿಸಿದರು.
ಮುಂದುವರಿದು, “ಬೆಂಗಳೂರು ವಲಯ ಕಚೇರಿಯು ಉತ್ತಮ ಸೌಲಭ್ಯಗಳನ್ನು ಹೊಂದಿದೆ ಎಂಬಂತಹ ಕಾರಣಗಳಿಗಾಗಿ ಇ ಡಿ ಬೆಂಗಳೂರಿನಲ್ಲಿ ತನಿಖೆ ನಡೆಸಲು ನಿರ್ಧರಿಸಿದೆ ಎಂದುಕೊಂಡರೂ, ಈ ತನಿಖೆಗೆ ಸಂಬಂಧಿಸಿದ ನ್ಯಾಯಾಲಯದ ಪ್ರಕ್ರಿಯೆಗಳು ದೆಹಲಿಯಲ್ಲಿಯೇ ನಡೆಯಬೇಕು” ಎಂದು ಪ್ರತಿಪಾದಿಸಿದರು.
ಸೌಮ್ಯಾ ರಾಥೋಡ್ ಅರ್ಜಿಯ ಸಿಂಧುತ್ವವನ್ನೇ ಪ್ರಶ್ನಿಸಿದ ಇಡಿ ವಿಶೇಷ ಸರ್ಕಾರಿ ಅಭಿಯೋಜಕ ಮಧು ಎನ್. ರಾವ್ ಅವರು “ಇಡಿ ತನಿಖೆಯು ನಿರ್ಣಾಯಕ ಹಂತದಲ್ಲಿದ್ದು, ಈಗಾಗಲೇ ₹800 ಕೋಟಿ ಜಪ್ತಿ ಮಾಡಲಾಗಿದೆ. ಆದ್ದರಿಂದ, ಅರ್ಜಿದಾರರು ಕೋರಿರುವ ಪರಿಹಾರ ನೀಡಬಾರದು” ಎಂದು ಪೀಠಕ್ಕೆ ಮನವಿ ಮಾಡಿದರು.
ವಿನ್ಜೊ ಪ್ಲಾಟ್‌ಫಾರ್ಮ್‌ನ ಆಟಗಳಲ್ಲಿ 'ಬಾಟ್'ಗಳನ್ನು ಬಳಸಲಾಗಿದೆ ಎಂದು ಅಲ್ಲಿ ಆಟವಾಡಿರುವ ನೂರಾರು ಆಟಗಾರರು ಆರೋಪಿಸಿದ್ದಾರೆ. ಅವರಲ್ಲಿ ಅನೇಕರಿಗೆ ಎಲ್ಲಿ ದೂರು ನೀಡಬೇಕು ಎಂದು ಸಹ ತಿಳಿದಿರಲಿಲ್ಲ. ಇ ಡಿ ಅಖಿಲ ಭಾರತ ಸಂಸ್ಥೆಯಾಗಿರುವುದರಿಂದ, ಈ ವಿಷಯವನ್ನು ತನಿಖೆ ಮಾಡುವಾಗ ಅದು ತನ್ನ ಅಧಿಕಾರ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸುತ್ತಿದೆ ಎಂದು ಇಡಿ ಪರ ವಕೀಲರು ಸಮರ್ಥಿಸಿಕೊಂಡರು.
ಈ ವೇಳೆ ಮಧ್ಯಪ್ರವೇಶಿಸಿದ ಸಜನ್ ಪೂವಯ್ಯ ಅವರು “ಹಾಲಿ ಅರ್ಜಿಯು ಇ ಡಿ ತನಿಖೆಯ ಅಧಿಕಾರ ವ್ಯಾಪ್ತಿಯ ಬಗ್ಗೆ ಅಲ್ಲ, ಬದಲಿಗೆ ತನಿಖೆಯನ್ನು ಬೆಂಗಳೂರಿನಿಂದ ನಡೆಸಬಹುದೇ ಎಂಬುದಕ್ಕೆ ಸಂಬಂಧಿಸಿದ್ದಾಗಿದೆ. ಇಡಿ ಆರೋಪಗಳು ನಿಜ ಎಂದು ಭಾವಿಸಿದರೂ, ವಿನ್ಜೊ ಪ್ರತಿನಿಧಿಗಳಿಗೆ ಇ ಡಿ ನೀಡಿದ ಸಮನ್ಸ್ ಮತ್ತು ಅವರ ಬಂಧನವನ್ನು ಹೊರತುಪಡಿಸಿ, ಪ್ರಕರಣಕ್ಕೆ ಸಂಬಂಧಿಸಿದ ಬೇರೇನೂ ಬೆಂಗಳೂರಿನಲ್ಲಿ ನಡೆದಿಲ್ಲ” ಎಂದು ತಿಳಿಸಿದರು.
ಅರ್ಜಿದಾರೆ ಸೌಮ್ಯಾ ರಾಥೋಡ್ ಅವರಿಗೆ ಈ ಪ್ರಕರಣದಲ್ಲಿ ಜಾಮೀನು ದೊರೆತಿದ್ದರೂ, ಸಹ-ಸಂಸ್ಥಾಪಕ ಪವನ್ ನಂದಾ ಅವರು ಬೆಂಗಳೂರು ನ್ಯಾಯಾಲಯ ನೀಡಿದ ರಿಮ್ಯಾಂಡ್ ಆದೇಶದ ಮೇರೆಗೆ ಜೈಲಿನಲ್ಲಿಯೇ ಇದ್ದಾರೆ. ಆದರೆ, ಈ ಪ್ರಕರಣ ದೆಹಲಿ ನ್ಯಾಯಾಲಯದ ಮುಂದೆ ಬರಬೇಕಿದ್ದರಿಂದ ಬೆಂಗಳೂರು ನ್ಯಾಯಾಲಯಕ್ಕೆ ಪ್ರಾದೇಶಿಕ ನ್ಯಾಯವ್ಯಾಪ್ತಿ ಇಲ್ಲ ಎಂದು ಸಜನ್ ಪೂವಯ್ಯ ವಿವರಿಸಿದರು.
ಈ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು “ಪರೋಕ್ಷವಾಗಿ ನೀವು (ಪವನ್ ನಂದಾ ಅವರಿಗೆ) ಜಾಮೀನು ಕೋರುತ್ತಿದ್ದೀರೇ ಎಂದರು. ಅದಕ್ಕೆ ಪೂವಯ್ಯ ಅವರು, ಇಲ್ಲ, ಅಂಥ ಪರಿಹಾರಕ್ಕೆ ವಿಚಾರಣಾ ನ್ಯಾಯಾಲಯಕ್ಕೆ ಹೋಗುತ್ತೇವೆ” ಎಂದು ಹೇಳಿದರು.
ಆಗ ನ್ಯಾಯಮೂರ್ತಿಗಳು “ಇಲ್ಲಿ ಏನೇ ಆದೇಶವಾದರೂ, ಅದು ಕಸ್ಟಡಿಯಲ್ಲಿರುವ ವ್ಯಕ್ತಿಗೂ ತನ್ನಿಂತಾನೇ ಅನ್ವಯಿಸುತ್ತದೆ” ಎಂದು ಬೊಟ್ಟು ಮಾಡಿದರು. ಅದಕ್ಕೆ ಪೂವಯ್ಯ ಅವರು, “ನಮಗೆ ಅರ್ಥವಾಗುತ್ತದೆ. ಆದರೆ, ನ್ಯಾಯವ್ಯಾಪ್ತಿಯ ಮೇಲಿನ ಅಭಿಪ್ರಾಯಗಳಿಗಾಗಿ ನಾವು ಸಾಂವಿಧಾನಿಕ ನ್ಯಾಯಾಲಯಕ್ಕೆ ಮಾತ್ರ ಬರಬಹುದು. ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯಕ್ಕೆ ಹೋಗುತ್ತೇವೆ. ಆದರೆ ನ್ಯಾಯಾಲಯದ ನ್ಯಾಯವ್ಯಾಪ್ತಿಯ ಬಗ್ಗೆ ಅನುಮಾನವಿದೆ” ಎಂದರು.