ಡಿಕೆಶಿ ಪ್ರಕರಣದ ತನಿಖೆಗೆ ಸಿಬಿಐಗೆ ನೀಡಿದ್ದ ಅನುಮೋದನೆ ಹಿಂಪಡೆತ: ಬಿಜೆಪಿ ಶಾಸಕ ಯತ್ನಾಳ್‌ರಿಂದ ಅರ್ಜಿ ಸಲ್ಲಿಕೆ

ಸಿಬಿಐ ತನಿಖೆಗೆ ಬಿಜೆಪಿ ನೇತೃತ್ವದ ಸರ್ಕಾರ ಅನುಮೋದನೆ ನೀಡಿರುವುದನ್ನು ಎತ್ತಿ ಹಿಡಿದಿರುವ ಏಕಸದಸ್ಯ ಪೀಠದ ಆದೇಶ ಬದಿಗೆ ಸರಿಸಬೇಕು ಎಂದು ಕೋರಿ ಡಿಕೆಶಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ನಾಳೆ ನಡೆಸಲಿದೆ.
ಡಿಕೆಶಿ ಪ್ರಕರಣದ ತನಿಖೆಗೆ ಸಿಬಿಐಗೆ ನೀಡಿದ್ದ ಅನುಮೋದನೆ ಹಿಂಪಡೆತ: ಬಿಜೆಪಿ ಶಾಸಕ ಯತ್ನಾಳ್‌ರಿಂದ ಅರ್ಜಿ ಸಲ್ಲಿಕೆ

ಆದಾಯ ಮೀರಿ ಆಸ್ತಿ ಗಳಿಕೆ ಮಾಡಿರುವ ಆರೋಪದಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರನ್ನು ರಕ್ಷಿಸಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೀಡಿದ್ದ ತನಿಖಾ ಅನುಮೋದನೆಯನ್ನು ಹಿಂಪಡೆಯಲು ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಆಕ್ಷೇಪಿಸಿ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕರ್ನಾಟಕ ಹೈಕೋರ್ಟ್‌ಗೆ ಮಧ್ಯಪ್ರವೇಶಿಕೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಸಿಬಿಐ ದಾಖಲಿಸಿರುವ ಎಫ್‌ಐಆರ್‌ಗೆ ಸಂಬಂಧಿಸಿದ ದಾಖಲೆಗಳನ್ನು ತರಿಸಿಕೊಳ್ಳುವಂತೆ ಮತ್ತು ಸಿಬಿಐ ತನಿಖೆಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅನುಮೋದನೆ ನೀಡಿರುವುದನ್ನು ಎತ್ತಿ ಹಿಡಿದಿರುವ ಏಕಸದಸ್ಯ ಪೀಠದ ಆದೇಶ ಬದಿಗೆ ಸರಿಸಬೇಕು ಹಾಗೂ ಸಿಬಿಐ ತನಿಖೆಗೆ ಅನುಮೋದಿಸಿರುವ ರಾಜ್ಯ ಸರ್ಕಾರದ ಆದೇಶ ವಜಾ ಮಾಡಬೇಕು ಎಂದು ಕೋರಿ ಡಿ ಕೆ ಶಿವಕುಮಾರ್‌ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ನಾಳೆ ನಡೆಸಲಿದೆ. ಇದರ ಭಾಗವಾಗಿ ಮಧ್ಯಪ್ರವೇಶಿಕೆ ಕೋರಿ ಯತ್ನಾಳ್‌ ಅರ್ಜಿ ಸಲ್ಲಿಸಿದ್ದಾರೆ.

ಡಿಕೆಶಿ ಅರ್ಜಿ ವಜಾ ಮಾಡಿರುವ ಆದೇಶದಲ್ಲಿ ಏಕಸದಸ್ಯ ಪೀಠವು ಸಿಬಿಐ ಶೇ.90ರಷ್ಟು ತನಿಖೆ ಪೂರ್ಣಗೊಳಿಸಿದೆ ಎಂದು ಉಲ್ಲೇಖಿಸಿದೆ. ಈ ಹಂತದಲ್ಲಿ ಸಿಬಿಐಗೆ ನೀಡಿರುವ ಅನುಮೋದನೆ ಹಿಂಪಡೆಯುವ ಮೂಲಕ ಪ್ರಕ್ರಿಯೆಯಲ್ಲಿ ಹಾಲಿ ಸರ್ಕಾರ ಮಧ್ಯಪ್ರವೇಶ ಮಾಡಲು ಮುಂದಾಗಿದೆ. ದುರುದ್ದೇಶದಿಂದ ರಾಜ್ಯ ಸರ್ಕಾರ ತೀರ್ಮಾನ ಮಾಡಿದ್ದು, ಡಿ ಕೆ ಶಿವಕುಮಾರ್‌ ಅವರನ್ನು ರಕ್ಷಿಸಲು ಮುಂದಾಗಿದೆ. ರಾಜ್ಯ ಸರ್ಕಾರದ ನಿರ್ಧಾರವು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಸಾರ್ವಜನಿಕ ಆತ್ಮಸಾಕ್ಷಿಗೆ ಆಘಾತ ಉಂಟು ಮಾಡಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Also Read
ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಆದೇಶ ಹಿಂಪಡೆತ: ನ್ಯಾಯಾಲಯದಲ್ಲಿ ಪ್ರಕರಣ ಈವರೆಗೆ ಸಾಗಿ ಬಂದ ಹಾದಿಯ ಮಾಹಿತಿ

ಡಿಕೆಶಿ ಪ್ರಕರಣದ ಕಾನೂನು ಸಿಂಧುತ್ವವನ್ನು ಹಾಲಿ ಪ್ರಕರಣದಲ್ಲಿ ನ್ಯಾಯಾಲಯ ನಿರ್ಧರಿಸಲಿದೆ. ಈ ಮಧ್ಯೆ, ಅನುಮೋದನೆ ಹಿಂಪಡೆಯುವ ನಿರ್ಧಾರವು ನ್ಯಾಯಾಂಗ ಪ್ರಕ್ರಿಯೆಯಲ್ಲಿನ ಮಧ್ಯಪ್ರವೇಶವಾಗಿದೆ. ಅನುಮೋದನೆ ಹಿಂಪಡೆಯುವ ತೀರ್ಮಾನ ಮಾಡುವ ಮೂಲಕ ಅಕ್ರಮ ಮತ್ತು ಸಂವಿಧಾನಬಾಹಿರ ಕೃತ್ಯಕ್ಕೆ ಸರ್ಕಾರ ಮುಂದಾಗಿದೆ.

ನೆಲದ ಕಾನೂನು ಮತ್ತು ಸಂವಿಧಾನದ 144ನೇ ವಿಧಿಗೆ ವಿರುದ್ಧವಾಗಿ ರಾಜ್ಯ ಸರ್ಕಾರವು ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದಿದೆ. ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದ ತೀರ್ಮಾನವನ್ನು ನ್ಯಾಯಾಲಯದ ಗಮನಕ್ಕೆ ತರುತ್ತಿರುವುದರಲ್ಲಿ ವೈಯಕ್ತಿಕವಾಗಿ ಯಾವುದೇ ಹಿತಾಸಕ್ತಿ ಇಲ್ಲ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಉದ್ದೇಶಪೂರ್ವಕವಾಗಿ ಮೂಗು ತೂರಿಸುವುದನ್ನು ತೋರಿಸುವ ಉದ್ದೇಶ ಮಾತ್ರ ಅರ್ಜಿ ಸಲ್ಲಿಕೆಯ ಹಿಂದೆ ಇದೆ. ಈ ನೆಲೆಯಲ್ಲಿ ತಮ್ಮ ವಾದವನ್ನು ಆಲಿಸಬೇಕು ಎಂದು ಯತ್ನಾಳ್‌ ಕೋರಿದ್ದಾರೆ.

Related Stories

No stories found.
Kannada Bar & Bench
kannada.barandbench.com