ಜನಪ್ರತಿನಿಧಿಗಳ ವಿರುದ್ಧದ ಪ್ರಕರಣ: ಸೆಷನ್ಸ್‌, ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಿಂದ ಪಟ್ಟಿ ಪಡೆಯಲು ಹೈಕೋರ್ಟ್‌ ಆದೇಶ

“ಪ್ರಕರಣಗಳ ವಿಚಾರಣೆ ಕುರಿತು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ವ್ಯಾಪ್ತಿಗೆ ಸಂಬಂಧಪಟ್ಟ ವಿಷಯವು ಸುಪ್ರೀಂ ಮುಂದೆ ಇದ್ದು, ಈ ಕುರಿತ ವಿಚಾರವನ್ನು ನ.24ರಂದು ಪರಿಗಣಿಸಲಿದೆ. ಇದಕ್ಕಾಗಿ ಸುಪ್ರೀಂ ನಿರ್ಧಾರಕ್ಕೆ ಕಾಯಬೇಕಿದೆ” ಎಂದ ಸೋಂಧಿ.
Sr Counsel Aditya Sondhi and Karnataka HC
Sr Counsel Aditya Sondhi and Karnataka HC

ಕಳೆದ ವರ್ಷದ ಸೆಪ್ಟೆಂಬರ್‌ 16 ಬಳಿಕ ರಾಜ್ಯದಲ್ಲಿ ಶಾಸಕರು ಮತ್ತು ಸಂಸದರ ವಿರುದ್ಧ ಹಿಂತೆಗೆದುಕೊಂಡಿರುವ ಅಥವಾ ಬಾಕಿ ಇರುವ ಕ್ರಿಮಿನಲ್‌ ಪ್ರಕರಣಗಳ ಪಟ್ಟಿಯನ್ನು ರಿಜಿಸ್ಟ್ರಾರ್‌ ಜನರಲ್‌ ಅವರು ವಿಶೇಷ ಸೆಷನ್ಸ್‌ ಮತ್ತು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಿಂದ ಪಡೆಯಬೇಕು ಎಂದು ಬುಧವಾರ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಆರಂಭಿಸಬೇಕು ಮತ್ತು ಅವುಗಳ ಮೇಲ್ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

“ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳಿಗೆ ಸಂಬಂಧಿಸಿದ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ನವೆಂಬರ್‌ 24ರಂದು ವಿಚಾರಣೆಗೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಜನವರಿ 17ಕ್ಕೆ ವಿಚಾರಣೆಗೆ ನಿಗದಿಪಡಿಸುವಂತೆ” ಪೀಠವು ಆದೇಶದಲ್ಲಿ ಹೇಳಿದೆ.

ಪ್ರಕರಣದಲ್ಲಿ ಅಮಿಕಸ್‌ ಕ್ಯೂರಿಯಾಗಿರುವ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು “ಆಗಸ್ಟ್‌ 26ರಂದು ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳನ್ನು ಪ್ರಾಸಿಕ್ಯೂಷನ್‌ ಹಿಂಪಡೆದಿರುವ ಕುರಿತು ಅಧಿಕೃತ ಮಾಹಿತಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ಅಫಿಡವಿಟ್‌ಗೆ ಪ್ರತಿಕ್ರಿಯೆ ಸಲ್ಲಿಸಲು ಪೀಠವು ಆದೇಶಿಸಿತ್ತು” ಎಂದರು.

ಆಗ ಪೀಠವು ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದಿರುವುದಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲಾಗಿದೆ ಎಂದಿತು. ಇದಕ್ಕೆ ಸೋಂಧಿ ಅವರು “ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲಾಗಿದೆ. ಕಳೆದ ವರ್ಷದ ಸೆಪ್ಟೆಂಬರ್‌ 16ರ ಬಳಿಕ ಬಾಕಿ ಇರುವ ಅಥವಾ ವಿಲೇವಾರಿ ಮಾಡಲಾದ ಪ್ರಕರಣಗಳ ಪಟ್ಟಿಯನ್ನು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರು ವಿಶೇಷ ನ್ಯಾಯಾಲಯಗಳಿಂದ ಪಡೆದುಕೊಳ್ಳಬೇಕು ಎಂಬುದು ಸುಪ್ರೀಂ ಕೋರ್ಟ್‌ ನಿರ್ದೇಶನವಾಗಿದೆ” ಎಂದರು.

“ಪ್ರಕರಣಗಳ ವಿಚಾರಣೆ ಕುರಿತು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ವ್ಯಾಪ್ತಿಗೆ ಸಂಬಂಧಪಟ್ಟ ವಿಷಯವು ಸುಪ್ರೀಂ ಕೋರ್ಟ್‌ ಮುಂದೆ ಇದ್ದು, ಈ ಕುರಿತು ನವೆಂಬರ್‌ 24ರಂದು ಸರ್ವೋಚ್ಚ ನ್ಯಾಯಾಲಯ ಪರಿಗಣಿಸಲಿದೆ. ಈ ವಿಚಾರದ ಕುರಿತು ಸುಪ್ರೀಂ ಕೋರ್ಟ್‌ ನಿರ್ಧಾರಕ್ಕಾಗಿ ನಾವು ಕಾಯಬೇಕಿದೆ” ಎಂದರು.

ಈ ಮಧ್ಯೆ, ಮುಖ್ಯ ನ್ಯಾಯಮೂರ್ತಿ ಅವಸ್ಥಿ ಅವರು “ವಿಶೇಷ ನ್ಯಾಯಾಲಯ ಆರಂಭಿಸಲಾಗಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಸೋಂಧಿ ಅವರು “ಈಗಾಗಲೇ ವಿಶೇಷ ನ್ಯಾಯಾಲಯ ಆರಂಭಿಸಲಾಗಿದೆ. ಆದರೆ, ಪ್ರಕರಣಗಳು ಮ್ಯಾಜಿಸ್ಟ್ರೇಟ್‌ ವ್ಯಾಪ್ತಿಗೆ ಒಳಪಡಲಿದೆಯೇ ಅಥವಾ ಸೆಷನ್ಸ್‌ ನ್ಯಾಯಾಲಯದ ವ್ಯಾಪ್ತಿಗೆ ಒಳಪಡಲಿದೆಯೇ ಎಂಬುದನ್ನು ಸುಪ್ರೀಂ ಕೋರ್ಟ್‌ ಪರಿಗಣಿಸಲಿದೆ. ಕೆಲವು ಪ್ರಕರಣಗಳನ್ನು ಮಾತ್ರ ಮ್ಯಾಜಿಸ್ಟ್ರೇಟ್‌ ನಡೆಸಬಹುದಾಗಿದ್ದು, ಉಳಿದವು ಸೆಷನ್ಸ್‌ ನ್ಯಾಯಾಧೀಶರ ವ್ಯಾಪ್ತಿಗೆ ಒಳಪಡುತ್ತವೆ” ಎಂದರು.

ಮುಂದುವರಿದು, “ಕೆಲವು ರಾಜ್ಯಗಳಲ್ಲಿ ಮ್ಯಾಜಿಸ್ಟ್ರೇಟ್‌ ನಡೆಸಬಹುದಾದ ಪ್ರಕರಣಗಳನ್ನು ಸೆಷನ್ಸ್‌ ನ್ಯಾಯಾಧೀಶರಿಗೆ ವರ್ಗಾಯಿಸಲಾಗಿದೆ. ಇಲ್ಲಿ ಮೇಲ್ಮನವಿ ಹಕ್ಕು ಕಳೆದು ಹೋಗಲಿದೆ. ಈ ವಿಚಾರವು ಸುಪ್ರೀಂ ಕೋರ್ಟ್‌ ಪರಿಗಣನೆಗೆ ಒಳಪಟ್ಟಿದೆ” ಎಂದರು.

Also Read
ಶಾಸಕರು, ಸಂಸದರ ವಿರುದ್ಧದ ಪ್ರಕರಣಗಳ ಹಿಂಪಡೆತ: ಅಧಿಕೃತ ಆದೇಶಗಳ ಸಲ್ಲಿಕೆಗೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್‌

ಕಳೆದ ವಿಚಾರಣೆಯ (ಆಗಸ್ಟ್‌ 16ರ ಆದೇಶದಲ್ಲಿ) ಸಂದರ್ಭದಲ್ಲಿ “ಸುಪ್ರೀಂ ಕೋರ್ಟ್‌ ಆಗಸ್ಟ್‌ 10ರ ಸಂಬಂಧಿತ ಆದೇಶದತ್ತ ಅಮಿಕಸ್ ಕ್ಯೂರಿ ಸೋಂಧಿ ಅವರು ಬೆರಳು ಮಾಡಿದ್ದಾರೆ. ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸಬಹುದಾದ ವಿಶೇಷ ನ್ಯಾಯಾಲಯಗಳ ವ್ಯಾಪ್ತಿಯ ಕುರಿತ ವಿಚಾರವನ್ನು ಆಗಸ್ಟ್‌ 23ರ ವಿಚಾರಣೆಯಂದು ಸುಪ್ರೀಂ ಕೋರ್ಟ್‌ ನಡೆಸಲಿದೆ ಎಂದು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್‌ ಆದೇಶಕ್ಕೆ ಕಾಯಬೇಕಾದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಬೇಕು ಎಂಬ ಅಮಿಕಸ್‌ ಅವರ ವಾದದಲ್ಲಿ ಹುರುಳಿದೆ. ಈ ಮಧ್ಯೆ, ಮ್ಯಾಜಿಸ್ಟ್ರೇಟ್‌ ಅವರಿಂದ ಹೊಸದಾಗಿ ಸೃಷ್ಟಿಸಿರುವ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ನ ವಿಶೇಷ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸುವುದಕ್ಕೆ ಸಂಬಂಧಿಸಿದಂತೆ ಯಾವುದಾದರೂ ನಿರ್ಧಾರ ಕೈಗೊಂಡರೆ ಅದನ್ನು ಅಡ್ವೊಕೇಟ್‌ ಜನರಲ್‌ ಮತ್ತು ಅಮಿಕಸ್‌ ಅವರಿಗೆ ರಿಜಿಸ್ಟ್ರಾರ್‌ ಜನರಲ್‌ ಅವರು ತಿಳಿಸಬೇಕು" ಎಂದಿತ್ತು.

ಮುಂದುವರೆದು, "ಸದ್ಯಕ್ಕೆ ಪ್ರಕರಣವನ್ನು ಸೆಪ್ಟೆಂಬರ್‌ 2ರ ವರೆಗೆ ವಿಚಾರಣೆ ಮುಂದೂಡಲಾಗುವುದು. ಕರ್ನಾಟಕ ಹೈಕೋರ್ಟ್‌ ಈ ಕುರಿತು ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ರಿಜಿಸ್ಟ್ರಾರ್‌ ಅವರು ಸುಪ್ರೀಂ ಕೋರ್ಟ್‌ ನೇಮಿಸಿರುವ ಅಮಿಕಸ್‌ ಅವರಿಗೆ ತಿಳಿಸಬೇಕು. ಕಳೆದ ವರ್ಷದ ಸೆಪ್ಟೆಂಬರ್‌ 16ರ ಬಳಿಕ ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಾಸಿಕ್ಯೂಷನ್‌ ಹಿಂಪಡೆಯಲು ನಿರ್ಧರಿಸಿದ ಮಾಹಿತಿಯನ್ನು ರಾಜ್ಯ ಸರ್ಕಾರವು ಅಧಿಕೃತವಾಗಿ ಸಲ್ಲಿಸಬೇಕು. ಸುಪ್ರೀಂ ಕೋರ್ಟ್‌ ಆಗಸ್ಟ್‌ 10ರಂದು ಹೊರಡಿಸಿರುವ ಆದೇಶದಂತೆ ಸರ್ಕಾರ ಹಿಂಪಡೆದ ಪ್ರಕರಣಗಳ ಸಿಂಧುತ್ವವನ್ನು ಹೈಕೋರ್ಟ್‌ ಪರಿಶೀಲಿಸಬೇಕು. ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದಿರುವುದಕ್ಕೆ ಸಂಬಂಧಿಸಿದ ಆದೇಶಗಳ ಮಾಹಿತಿಯನ್ನು ಆಗಸ್ಟ್‌ 31ರ ಒಳಗೆ ನ್ಯಾಯಾಲಯಕ್ಕೆ ಮತ್ತು ಅಮಿಕಸ್ ಕ್ಯೂರಿಗೆ ತಲುಪಿಸಬೇಕು” ಎಂದು ಹೇಳಿತ್ತು.

Related Stories

No stories found.
Kannada Bar & Bench
kannada.barandbench.com