“ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರಿಂದ ಜನರು ಮತ್ತು ದೇಶವನ್ನು ರಕ್ಷಿಸುವುದು ಸಾಂವಿಧಾನಿಕ ನ್ಯಾಯಾಲಯಗಳ ಕರ್ತವ್ಯ. ದೇಶವಿಲ್ಲದಿದ್ದರೆ ಸಂವಿಧಾನ ಇರುವುದಿಲ್ಲ” ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್ ಶಿವಮೊಗ್ಗದ ಪ್ರೇಮ್ ಸಿಂಗ್‌ಗೆ ಚಾಕು ಇರಿದ ಪ್ರಕರಣದ ಆರೋಪಿಗೆ ಈಚೆಗೆ ಜಾಮೀನು ನಿರಾಕರಿಸಿದೆ.
ಎನ್‌ಐಎ ವಿಶೇಷ ನ್ಯಾಯಾಲಯವು ಪ್ರಕರಣದಲ್ಲಿ ಆರನೇ ಆರೋಪಿಯಾಗಿರುವ ದಕ್ಷಿಣ ಕನ್ನಡದ 22 ವರ್ಷದ ಮಜಿನ್ ಅಬ್ದುಲ್ ರಹಮಾನ್ ಅಲಿಯಾಸ್ ಮಜಿನ್‌ಗೆ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್‌ಕುಮಾರ್ ಮತ್ತು ವಿಜಯಕುಮಾರ್ ಎ. ಪಾಟೀಲ್ ಅವರ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿದೆ.
“ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳು ಮೇಲ್ನೋಟಕ್ಕೆ ದೇಶದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವಂತಿರುವಾಗ ಸಾಂವಿಧಾನಿಕ ಅಧಿಕಾರವನ್ನು ಚಲಾಯಿಸಲಾಗದು. ಇದಕ್ಕೆ ಬದಲಾಗಿ, ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರಿಂದ ಜನರು ಮತ್ತು ದೇಶವನ್ನು ರಕ್ಷಿಸುವುದು ಸಾಂವಿಧಾನಿಕ ನ್ಯಾಯಾಲಯಗಳ ಕರ್ತವ್ಯ. ದೇಶವಿಲ್ಲದಿದ್ದರೆ ಸಂವಿಧಾನ ಇರುವುದಿಲ್ಲ” ಎಂದು ಆದೇಶದಲ್ಲಿ ಹೇಳಿದೆ.
ಅರ್ಜಿದಾರ ಆರೋಪಿಯನ್ನು ಪ್ರತಿನಿಧಿಸಿದ್ದ ವಕೀಲ ಎಸ್ ಬಾಲಕೃಷ್ಣನ್ ಅವರು “ಪ್ರಕರಣದಲ್ಲಿ ಎರಡನೇ ಆರೋಪಿಯ ಸ್ನೇಹಿತನಾಗಿದ್ದ ಕಾರಣಕ್ಕೆ ಆರನೇ ಆರೋಪಿಯಾಗಿರುವ ಅರ್ಜಿದಾರ ಮಜಿನ್ ಅಬ್ದುಲ್ ರಹಮಾನ್ ಅಲಿಯಾಸ್ ಮಜಿನ್‌ನನ್ನು ಸಿಲುಕಿಸಲಾಗಿದೆ. ಇಡೀ ಪ್ರಕರಣದಲ್ಲಿ ಅರ್ಜಿದಾರನ ಪಾತ್ರ ಇದೆ ಎಂಬುದಕ್ಕೆ ಪೂರಕವಾಗಿ ಯಾವುದೇ ದಾಖಲೆ ಇಲ್ಲ. ಹೀಗಾಗಿ, ದೇಶದ ವಿರುದ್ಧ ಯುದ್ದ ಸಾರಿದ್ದಾರೆ ಎಂದು ಯುಎಪಿಎ ಸೆಕ್ಷನ್ ಅನ್ವಯಿಸಿರುವುದು ಅಸಮಂಜಸ” ಎಂದು ವಾದಿಸಿದ್ದರು.
ಎನ್‌ಐಎ ಪ್ರತಿನಿಧಿಸಿದ್ದ ಪಿ ಪ್ರಸನ್ನಕುಮಾರ್ ಅವರು “ಎಲ್ಲಾ ಆರೋಪಿಗಳು ಒಟ್ಟಾಗಿ ಅರಾಜಕತೆ ಸೃಷ್ಟಿಸಲು ಸಭೆ ನಡೆಸಿದ್ದಾರೆ. ಆರೋಪಿಗಳ ಉದ್ದೇಶ ದೇಶದ ವಿರುದ್ಧ ಯುದ್ದ ಸಾರುವುದಾಗಿದೆ. ಡಾರ್ಕ್ ವೆಬ್‌ನಿಂದ ಅರ್ಜಿದಾರ/ಆರೋಪಿಯು ಬೋಧನಾ ಮಾಹಿತಿ ಸಂಗ್ರಹಿಸಿರುವುದಾಗಿ ತನಿಖಾಧಿಕಾರಿಗೆ ಸಾಕ್ಷಿಗಳು ಹೇಳಿದ್ದಾರೆ. ಎರಡನೇ ಆರೋಪಿ ಮತ್ತು ಅರ್ಜಿದಾರ ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂಬುದು ಸಿಡಿಆರ್‌ನಿಂದ ಸಾಬೀತಾಗಿದೆ” ಎಂದು ವಾದಿಸಿದ್ದರು.
ಪ್ರಕರಣದ ಹಿನ್ನೆಲೆ: ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ವೀರ್ ಸಾವರ್ಕರ್ ಮತ್ತು ಟಿಪ್ಪು ಸುಲ್ತಾನ್ ಫ್ಲೆಕ್ಸ್ ಅಳವಡಿಕೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಭೆ ನಡೆದು ಪರಿಸ್ಥಿತಿ ತಹಬಂದಿಗೆ ಬಂದಿದೆ ಎನ್ನುವಾಗಲೇ 2022ರ ಆಗಸ್ಟ್ 16ರಂದು ಪ್ರೇಮ್ ಸಿಂಗ್ ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿತ್ತು. ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆನಂತರ ಪ್ರಕರಣವನ್ನು ಎನ್‌ಐಗೆ ಹಸ್ತಾಂತರಿಸಲಾಗಿದ್ದು, ಎನ್‌ಐಎ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಸೆಕ್ಷನ್‌ಗಳಾದ 18, 20 ಮತ್ತು 38, ಐಪಿಸಿ ಸೆಕ್ಷನ್‌ಗಳಾದ 120ಬಿ, 121ಎ ಅಡಿ ಆರೋಫಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ಈ ಸಂಬಂಧ ಪ್ರಕರಣದಲ್ಲಿ ಆರನೇ ಆರೋಪಿಯಾಗಿರುವ ಮಜಿನ್ 2023 ಜನವರಿ 10ರಿಂದ ಜೈಲಿನಲ್ಲಿದ್ದಾನೆ.