ಮೀನು ಕದ್ದ ಆರೋಪದ ಮೇಲೆ ಮಹಿಳೆ ಮೇಲೆ ಹಲ್ಲೆ: ಮೂವರು ಆರೋಪಿಗಳಿಗೆ ಹೈಕೋರ್ಟ್‌ನಿಂದ ಜಾಮೀನು

ಉಡುಪಿಯ ಲಕ್ಷ್ಮಿ ಸಾಲಿಯಾನ, ಶಿಲ್ಪಾ ಬಾಯಿ ಹಾಗೂ ಸುಂದರ್‌ ಸಲ್ಲಿಸಿದ್ದ ಜಾಮೀನು ಪುರಸ್ಕರಿಸಿದ ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರ ಏಕಸದಸ್ಯ ಪೀಠ.
Justice Hemant Chandangoudar
Justice Hemant Chandangoudar
Published on

“ಬಂಧನಕ್ಕೂ ಮುನ್ನ ಪೊಲೀಸರು ಆರೋಪಿಗಳಿಗೆ ಸಕಾರಣವನ್ನು ತಿಳಿಸಿಲ್ಲ” ಎಂಬ ಕಾನೂನು ಲೋಪದ ಅಡಿಯಲ್ಲಿ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಇತ್ತೀಚೆಗೆ ಮೀನು ಕದ್ದ ಆರೋಪದ ಮೇಲೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೂವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ಷರತ್ತುಬದ್ಧ ಜಾಮೀನು ನೀಡಿದೆ.

ಉಡುಪಿಯ ಲಕ್ಷ್ಮಿ ಸಾಲಿಯಾನ, ಶಿಲ್ಪಾ ಬಾಯಿ ಹಾಗೂ ಸುಂದರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್‌ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲೆ ಊರ್ಮಿಳಾ ಪುಲ್ಲತ್ ಅವರ ವಾದ ಆಲಿಸಿದ ಪೀಠವು “ಅರ್ಜಿದಾರರು ಬಿಡುಗಡೆಗೊಂಡ ನಂತರ ಅವರನ್ನು ಮೆರವಣಿಗೆ ಮೂಲಕ ಕರೆದುಕೊಂಡು ಹೋಗುವ ಅಥವಾ ಅವರನ್ನು ವೈಭವೀಕರಿಸಿ ಬರಮಾಡಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಎಲ್ಲಾ ಅರ್ಜಿದಾರರು ತಲಾ ಒಂದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತೆ ನೀಡಬೇಕು. ಅಗತ್ಯವಿದ್ದಾಗೆಲ್ಲಾ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ಪ್ರಾಸಿಕ್ಯೂಷನ್‌ ಸಾಕ್ಷ್ಯಿಗಳನ್ನು ಬೆದರಿಸಬಾರದು. ಇದೇ ಮಾದರಿಯ ಅಪರಾಧದಲ್ಲಿ ಭಾಗಿಯಾಗಬಾರದು. ತನಿಖಾಧಿಕಾರಿಯ ಪೂರ್ವಾನುಮತಿಯಿಲ್ಲದೆ ಮಲ್ಪೆ ಪೊಲೀಸ್ ಠಾಣೆಯ ಸರಹದ್ದು ಬಿಟ್ಟು ಹೊರ ಹೋಗಬಾರದು" ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

"ಪೊಲೀಸರು ನೀಡಿರುವ ಬಂಧನ ಮೆಮೊದಲ್ಲಿ ತಮ್ಮ ಅಪರಾಧವನ್ನು ಅರ್ಜಿದಾರರು ಒಪ್ಪಿಕೊಂಡಿದ್ದಾರೆ ಎಂಬ ಕಾರಣಕ್ಕೆ ವಿಚಾರಣೆಗೆ ಹಾಜರಾಗುವಂತೆ ಅರ್ಜಿದಾರಿಗೆ ನೋಟಿಸ್‌ ನೀಡಿರುವುದು ತಿಳಿಯಲಿದೆ. ವಿಚಾರಣೆಗೆ ಹಾಜರಾದ ವೇಳೆ ಬಂಧಿಸಲಾಗಿದೆ. ಆದರೆ, ವಿಚಾರಣೆಗೆ ಹಾಜರಾಗಲು ಸೂಚಿಸಿ ಪೊಲೀಸರು ನೀಡಿದ್ದ ನೋಟಿಸ್‌ ಅನ್ನು ಉಲ್ಲಂಘಿಸಿದ ಬಗ್ಗೆ ಬಂಧನ ಮೆಮೊದಲ್ಲಿ ಯಾವುದೇ ಉಲ್ಲೇಖವಿಲ್ಲ. ಹೀಗಿದ್ದರೂ ಅರ್ಜಿದಾರರನ್ನು ಬಂಧಿಸಿರುವ ಕ್ರಮ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಸ್‌) ಸೆಕ್ಷನ್‌ 35(3) ಉಲ್ಲಂಘನೆಯಾಗಿದೆ" ಎಂದು ಪೀಠ ಹೇಳಿದೆ.

"ಅರ್ಜಿದಾರರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸುವ ಮುನ್ನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸೂಕ್ತ ರೀತಿಯಲ್ಲಿ ವಿವೇಚನೆ ಬಳಸಿಲ್ಲ. ಬಿಎನ್‌ಎಸ್‌ಎಸ್‌ ಸೆಕ್ಷನ್‌ 47 ಹೇಳಿರುವಂತೆ ಬಂಧನ ಮಾಡಿದ ಕೂಡಲೇ ಪೊಲೀಸರು ಅರ್ಜಿದಾರರಿಗೆ ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ ಮತ್ತು ಅವರ ಜಾಮೀನು ಹಕ್ಕಿನ ಬಗ್ಗೆ ತಿಳಿಸಿಕೊಟ್ಟಿಲ್ಲ. ಆದ್ದರಿಂದ ಅರ್ಜಿದಾರನ್ನು ಕೂಡಲೇ ಬಿಡುಗಡೆ ಮಾಡಬೇಕು" ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದ ಮೇಲೆ ಲಂಬಾಣಿ ಸಮುದಾಯಕ್ಕೆ ಸೇರಿದ ಲಕ್ಕಿ ಬಾಯಿ ಅವರನ್ನು 2025ರ ಮಾರ್ಚ್‌ 18ರಂದು ಸಂಜೆ 6 ಗಂಟೆಯ ವೇಳೆಯಲ್ಲಿ ಒಂದು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಲಕ್ಷ್ಮೀ ಸಾಲಿಯಾನ್‌, ಶಿಲ್ಪ, ಆರಾಧನ ಬೋಟಿನ ಚಂದ್ರ , ಸುಂದರ್‌ ಸೇರಿದಂತೆ ಹಲವರ ವಿರುದ್ಧ ಉಡುಪಿಯ ಮಲ್ಪೆ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 189(2), 191(2), 126(2), 127(2), 74, 115(2), 353, 351(2), 190 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಷೇಧ) ಕಾಯಿದೆ ಸೆಕ್ಷನ್‌ಗಳಾದ 3(1)(r), 3(1)(s), 3(2)(v-a) ಅಡಿ ಪ್ರಕರಣ ದಾಖಲಿಸಲಾಗಿದೆ. 

Kannada Bar & Bench
kannada.barandbench.com