ಅತ್ಯಾಚಾರಕ್ಕೆ ಕುಮ್ಮಕ್ಕು ನೀಡಿದ ಮಹಿಳೆ ಸಾಮೂಹಿಕ ಅತ್ಯಾಚಾರದ ಆರೋಪದಡಿ ತಪ್ಪಿತಸ್ಥೆ: ಅಲಾಹಾಬಾದ್ ಹೈಕೋರ್ಟ್

ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಬಳಸಿರುವ ʼವ್ಯಕ್ತಿʼ ಎಂಬ ಪದವನ್ನು ಸಂಕುಚಿತ ಅರ್ಥದಲ್ಲಿ ಅರ್ಥೈಸಬಾರದು ಎಂದ ನ್ಯಾಯಾಲಯ.
Allahabad High Court
Allahabad High Court

ಮಹಿಳೆ ಅತ್ಯಾಚಾರ ಎಸಗುವುದು ಸಾಧ್ಯವಿಲ್ಲವಾದರೂ ಮತ್ತೊಬ್ಬ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲು ಹಾದಿ ಸುಗಮ ಮಾಡಿಕೊಟ್ಟರೆ ಐಪಿಸಿಗೆ ಮಾಡಿರುವ ತಿದ್ದುಪಡಿಯ ಪ್ರಕಾರ ಆಕೆಯ ವಿರುದ್ಧ ಕಾನೂನುಕ್ರಮ ಜರುಗಿಸಬಹುದು ಎಂದು ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಸುನೀತಾ ಪಾಂಡೆ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ತಿದ್ದುಪಡಿ ಮಾಡಲಾದ ಐಪಿಸಿಯ ಸೆಕ್ಷನ್ 375 ಮತ್ತು 376 ಅನ್ನು ಅವಲಂಬಿಸಿ ಈ ತೀರ್ಪು ನೀಡಿದ್ದಾರೆ. ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಬಳಸಿರುವ "ವ್ಯಕ್ತಿ" ಎಂಬ ಪದವನ್ನು ಸಂಕುಚಿತ ಅರ್ಥದಲ್ಲಿ ಅರ್ಥೈಸಬಾರದು ಎಂದು ನ್ಯಾಯಾಲಯ ಹೇಳಿದೆ. ಆ ಮೂಲಕ ಕೆಳ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.

"ಮಹಿಳೆಗೆ ಅತ್ಯಾಚಾರ ಎಸಗಲು ಸಾಧ್ಯವಿಲ್ಲ. ಆದರೆ ಆಕೆ ಗುಂಪಿನೊಂದಿಗೆ ಸೇರಿ ಅತ್ಯಾಚಾರ ಕ್ರಿಯೆ ಸುಗಮಗೊಳಿಸಿದರೆ ತಿದ್ದುಪಡಿ ಮಾಡಲಾದ ನಿಯಮಾನುಸಾರ ಆಕೆಯ ವಿರುದ್ಧ ಸಾಮೂಹಿಕ ಅತ್ಯಾಚಾರ ಎಸಗಿದಕ್ಕಾಗಿ ಕಾನೂನು ಕ್ರಮ ಜರುಗಿಸಬಹುದಾಗಿದೆ. ಪುರುಷರು ಮಾತ್ರವಲ್ಲದೆ ಮಹಿಳೆಯನ್ನು ಕೂಡ ಲೈಂಗಿಕ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ನಿರ್ಣಯಿಸಬಹುದಾಗಿದೆ. ಒಬ್ಬ ಮಹಿಳೆಯು ಪುರುಷರ ಗುಂಪಿನೊಂದಿಗೆ  ಸೇರಿ ಅತ್ಯಾಚಾರ ಕ್ರಿಯೆಯನ್ನು ಸುಗಮಗೊಳಿಸಿದ್ದರೆ ಆಕೆಯನ್ನು ಸಾಮೂಹಿಕ ಅತ್ಯಾಚಾರದ ಅಪರಾಧಿ ಎಂದು ಪರಿಗಣಿಸಬಹುದು" ಎಂದು ನ್ಯಾಯಾಲಯ ವಿವರಿಸಿದೆ.

Also Read
ಅತ್ಯಾಚಾರ ಅಪರಾಧಿಗಳ ಬಿಡುಗಡೆ: ಬಿಲ್ಕಿಸ್ ಬಾನೊ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸಾಮೂಹಿಕ ಅತ್ಯಾಚಾರ ಮತ್ತು ಐಪಿಸಿ ಅಡಿಯಲ್ಲಿ ಅಪರಾಧಿಗೆ ಆಶ್ರಯ ನೀಡಿದ್ದಕ್ಕೆ ಸಂಬಂಧಿಸಿದಂತೆ ತಮಗೆ ನೀಡಿದ್ದ ಸಮನ್ಸ್‌ ರದ್ದುಗೊಳಿಸುವಂತೆ ಕೋರಿ ಅರ್ಜಿದಾರೆ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ  ನ್ಯಾಯಾಲಯ ಈ ಅಂಶಗಳನ್ನು ಸ್ಪಷ್ಟಪಡಿಸಿತು.

ಮಾಹಿತಿದಾರರ ಪ್ರಕಾರ, 2015ರಲ್ಲಿ ಅವರ 15 ವರ್ಷ ವಯಸ್ಸಿನ ಮಗಳನ್ನು ಪ್ರಲೋಭಿಸಿ ಕರೆದೊಯ್ಯಲಾಗಿತ್ತು. ಈ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ಘಟನೆಯಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆ ಆರೋಪಿಸಿದ್ದರು. ಆರೋಪಪಟ್ಟಿಯಲ್ಲಿ ಅರ್ಜಿದಾರೆಯ ಹೆಸರು ಇಲ್ಲದಿದ್ದರೂ ಆಕೆ ಕೂಡ ಆಪಾದಿತ ಘಟನೆಯಲ್ಲಿ ಭಾಗಿಯಾಗಿದ್ದಾಳೆ ಎಂದು ದೂರಿದ್ದರು.

ಅರ್ಜಿದಾರೆಯ ಪರ ವಾದ ಮಂಡಿಸಿದ ವಕೀಲರು ʼತಮ್ಮ ಕಕ್ಷಿದಾರೆ ಮಹಿಳೆಯಾಗಿರುವುದರಿಂದ ಆಕೆ ಸಾಮೂಹಿಕ ಅತ್ಯಾಚಾರ ಕೃತ್ಯದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ವಿಚಾರಣಾ ನ್ಯಾಯಾಲಯದ ಆದೇಶ ನ್ಯಾಯಕ್ಕೆ ಧಕ್ಕೆ ತರುವಂತಿದ್ದು ಅದನ್ನು ರದ್ದುಗೊಳಿಸಬೇಕುʼ ಎಂದು ಕೋರಿದರು.

ಆದರೆ  ಅರ್ಜಿದಾರೆ ಕೃತ್ಯ ಎಸಗಿದ್ದು, ಮಹಿಳೆಯಾಗಿರುವ ಅವರು ಸಾಮೂಹಿಕ ಅತ್ಯಾಚಾರದ ಅಪರಾಧ ಕೃತ್ಯ ಎಸಗಲು ಸಾಧ್ಯವಿಲ್ಲ ಎಂದು ಹೇಳಲಾಗದು” ಎಂದು ಸರ್ಕಾರದ ಪರ ವಕೀಲರು ವಾದಿಸಿದರು.  

Related Stories

No stories found.
Kannada Bar & Bench
kannada.barandbench.com