ವಿಚ್ಛೇದನದ ಬಳಿಕ ಮಹಿಳೆ ಕ್ರೌರ್ಯ ಪ್ರಕರಣ ಹೂಡಿದರೂ ಅದು ದಾಂಪತ್ಯದ ಘಟನೆಗಷ್ಟೇ ಸೀಮಿತವಾಗಿರಬೇಕು: ಗುಜರಾತ್ ಹೈಕೋರ್ಟ್

ವಿಚ್ಛೇದನದ ನಂತರ ನಡೆದ ಘಟನೆ ಆಧರಿಸಿ ಮಹಿಳೆ ಐಪಿಸಿ ಸೆಕ್ಷನ್ 498 ಎ ಅಡಿ ಕ್ರೌರ್ಯ ಪ್ರಕರಣ ದಾಖಲಿಸುವಂತಿಲ್ಲ ಎಂದು ನ್ಯಾ. ಜಿತೇಂದ್ರ ಜೋಷಿ ತಿಳಿಸಿದ್ದಾರೆ.
Gujarat High Court, Section 498A
Gujarat High Court, Section 498A

ವಿಚ್ಛೇದನದ ಬಳಿಕ ಮಹಿಳೆ ಐಪಿಸಿ ಸೆಕ್ಷನ್‌ 498ರಡಿ ಕ್ರೌರ್ಯ ಪ್ರಕರಣ ದಾಖಲಿಸಬಹುದಾದರೂ ಅದು ವಿವಾಹ ಊರ್ಜಿತವಾಗಿದ್ದ ಸಂದರ್ಭದಲ್ಲಿ ನಡೆದ ಘಟನೆಗಳಿಗೆ ಸೀಮಿತವಾಗಿರಬೇಕು ಎಂದು ಗುಜರಾತ್‌ ಹೈಕೋರ್ಟ್ ಶುಕ್ರವಾರ ಹೇಳಿದೆ [ರಮೇಶ್‌ ಭಾಯ್‌ ದಾಂಜಿಭಾಯ್‌ ಸೋಲಂಕಿ ಮತ್ತು ಗುಜರಾತ್‌ ಸರ್ಕಾರ ನಡುವಣ ಪ್ರಕರಣ].

ಸಂಬಂಧಪಟ್ಟ ನ್ಯಾಯಾಲಯ ವಿಚ್ಛೇದನಕ್ಕೆ ಅನುಮತಿಸಿ ವಿವಾಹವನ್ನು ವಿಸರ್ಜಿಸಿದ ಬಳಿಕ ನಡೆಯುವ ಅಪರಾಧ ಅಥವಾ ಅಂತಹ ಘಟನೆಗಳಿಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ 498 ಎ ಅಡಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ನ್ಯಾ. ಜಿತೇಂದ್ರ ದೋಷಿ ಹೇಳಿದ್ದಾರೆ.

ಐಪಿಸಿ ಸೆಕ್ಷನ್‌ 498 ಎ ಅಡಿ ಆರೋಪಿಗೆ "ಗಂಡ" ಮತ್ತು "ಗಂಡನ ಸಂಬಂಧಿಕರು" ಎಂಬ ಪದ ಬಳಸಲಾಗಿದೆ. ಈ ಸೆಕ್ಷನ್‌ ಅಡಿ ಆರೋಪ ಮಾಡಲು ʼಗಂಡ; ಅಥವಾ ʼಗಂಡನ ಸಂಬಂಧಿಕರʼ ಸ್ಥಾನಮಾನ ಅಸ್ತಿತ್ವದಲ್ಲಿರಬೇಕು ಎಂದು ನ್ಯಾಯಾಲಯ ನುಡಿದಿದೆ.

ಸೆಕ್ಷನ್‌ನ ವ್ಯಾಖ್ಯಾನ ʼಮಾಜಿ ಪತಿ ಅಥವಾ ಆ ಮಾಜಿ ಪತಿಯ ಸಂಬಂಧಿಗಳನ್ನು ಒಳಗೊಂಡಿಲ್ಲ. ಆದರೆ ಅದೇ ನಿಯಮಾವಳಿಯು ಸೆಕ್ಷನ್ 498 ಎ ಅಡಿ ಮಹಿಳೆ ಪ್ರಕರಣ ದಾಖಲಿಸಬಹುದಾಗಿದೆ. ಅಂದರೆ ಪ್ರಕರಣ ದಾಖಲಿಸುವ ವೇಳೆ ಆಕೆ ಪತ್ನಿ ಆಗಿರಬೇಕಾಗಿಲ್ಲ ಎಂದು ನ್ಯಾಯಾಲಯ ನುಡಿದಿದೆ.

"ಐಪಿಸಿಯ 498ಎ ಸೆಕ್ಷನ್‌ನಲ್ಲಿ 'ಪತಿ ಅಥವಾ ಗಂಡನ ಸಂಬಂಧಿಕರು' ಎಂಬ ಪದವನ್ನು (ಕಾಯಿದೆ ರೂಪಿಸುವ) ಶಾಸಕಾಂಗ ಬಳಸಿದಾಗ, ಮಹಿಳೆ ಎಂಬ ಪದವನ್ನು ಉಪಯೋಗಿಸಿದೆಯೇ ವಿನಾ ಹೆಂಡತಿ ಎಂದಲ್ಲ" ಎಂದು ನ್ಯಾಯಾಲಯ ಹೇಳಿದೆ.

ಆದ್ದರಿಂದ, ವಿವಾಹ ಅಸ್ತಿತ್ವದಲ್ಲಿದ್ದಾಗಲೇ ಕಿರುಕುಳ ಮತ್ತು ಕ್ರೌರ್ಯದ ಘಟನೆಯನ್ನು ಎದುರಿಸಿದ್ದರೆ ಮಾತ್ರ ಸೆಕ್ಷನ್ 498 ಎ ಅಡಿಯಲ್ಲಿ ವಿಚ್ಛೇದಿತ- ಪತ್ನಿ ದೂರು ನೀಡಬಹುದಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

Also Read
ಪತಿಯನ್ನು ಕಪ್ಪು ಬಣ್ಣದ ಚರ್ಮ ಹೊಂದಿದವ ಎಂದು ಕರೆಯುವುದು ಕ್ರೌರ್ಯ: ವಿಚ್ಛೇದನ ಅರ್ಜಿ ಪುರಸ್ಕರಿಸಿದ ಹೈಕೋರ್ಟ್‌

"ಆದರೂ, ವಿಚ್ಛೇದನದ ನಂತರ ನಡೆದಿರಬಹುದಾದ ಘಟನೆಯನ್ನು 498-ಎ ಅಡಿಯಲ್ಲಿ ಆರೋಪಿಸಿ ಆಕೆ ದೂರು ಸಲ್ಲಿಸುವಂತಿಲ್ಲ. ಸಂಬಂಧಪಟ್ಟ ನ್ಯಾಯಾಲಯ ವಿಚ್ಛೇದನದ ತೀರ್ಪು ನೀಡಿದ ನಂತರ, ಪತಿ ಮತ್ತು ಹೆಂಡತಿಯ ವೈವಾಹಿಕ ಸ್ಥಿತಿಯು ಬೇರ್ಪಟ್ಟಿದ್ದು 498- ಎ ಸೆಕ್ಷನ್‌ನ ಪೂರ್ವ-ಅವಶ್ಯಕತಾ ಷರತ್ತಾದ 'ಗಂಡ' ಅಥವಾ 'ಗಂಡನ ಸಂಬಂಧಿಕರು' ಪದ ಇಲ್ಲವಾಗುತ್ತದೆ” ಎಂದು ಪೀಠ ಹೇಳಿದೆ. ವಿಚ್ಛೇದನದ ಬಳಿಕ ಎರಡನೇ ಮದುವೆಯಾದ ಹಿನ್ನೆಲೆಯಲ್ಲಿ ವ್ಯಭಿಚಾರ ಅಪರಾಧದಡಿ ಆತ ತಪ್ಪಿತಸ್ಥ ಎಂದು ಮಹಿಳೆ ಆರೋಪಿಸಿದ್ದರು.  

ಮುಖ್ಯವಾಗಿ, ವೈವಾಹಿಕ ಸಂಬಂಧ ಅಸ್ತಿತ್ವದಲ್ಲಿದ್ದಾಗ ಕ್ರೌರ್ಯ ಅಥವಾ ಕಿರುಕುಳ ಸೂಚಿಸುವ ಯಾವುದೇ ನಿರ್ದಿಷ್ಟ ಆರೋಪವನ್ನು ಮಾಜಿ ಪತ್ನಿ ಮಾಡಿಲ್ಲ. ಹೀಗಾಗಿ ಸೇಡು ತೀರಿಸಿಕೊಳ್ಳಲು ಮತ್ತು ವಿಚ್ಛೇದನದ ತೀರ್ಪಿಗೆ ಪ್ರತಿಯಾಗಿ ಈ ಪ್ರಕರಣ ದಾಖಲಿಸಲಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಅದನ್ನು ರದ್ದುಗೊಳಿಸಿತು.

Kannada Bar & Bench
kannada.barandbench.com