ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣಕ್ಕೆ ಪೂರಕವಾಗಿ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಮಂಗಳವಾರ ಆದೇಶಿಸಿದೆ.
ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಇಂದು ನಡೆಸಿದರು.
ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಾಧೀಶರು ''ಆರೋಪಿ ಎಸ್‌ಐಟಿ ವಶದಲ್ಲಿದ್ದಾರೆ. ಹೀಗಿದ್ದಾಗ ಜಾಮೀನು ಅರ್ಜಿ ವಿಚಾರಣೆ ಮಾಡಲು ಹೇಗೆ ಸಾಧ್ಯ? ಒಂದು ವೇಳೆ ಜಾಮೀನು ನೀಡಿದರೆ ಪೊಲೀಸ್ ಕಸ್ಟಡಿ ಹೇಗೆ ಮುಂದುವರಿಸಲು ಸಾಧ್ಯ?'' ಎಂದು ರೇವಣ್ಣ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಅವರನ್ನು ಪ್ರಶ್ನಿಸಿದರು.
ಇದಕ್ಕೆ ನಾಗೇಶ್ ಅವರು ''ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗಲೂ ಜಾಮೀನು ನೀಡಬಹುದು” ಎಂದು ಸುಪ್ರೀಂ ಕೋರ್ಟ್‌ನ ಕೆಲವು ತೀರ್ಪುಗಳನ್ನು ಉಲ್ಲೇಖಿಸಿದರು.
ಆಗ ನ್ಯಾಯಾಲಯವು ಎಸ್ಐಟಿ ಪರ ವಿಶೇಷ ಸರ್ಕಾರಿ ಅಭಿಯೋಜಕರಿಗೆ ನೋಟಿಸ್ ಜಾರಿ ಮಾಡಿತು. ಅಲ್ಲದೇ, ಆರೋಪಿಯು ಪೊಲೀಸ್ ಕಸ್ಟಡಿಯಲ್ಲಿದ್ದಾಗ ಜಾಮೀನು ಅರ್ಜಿ ವಿಚಾರಣೆ ನಡೆಸಬಹುದೇ ಎಂಬುದಕ್ಕೂ ಆಕ್ಷೇಪಣೆ ಸಲ್ಲಿಸುವಂತೆ ಆದೇಶಿಸಿ, ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆ ಮುಂದೂಡಿತು.