ಮಗು ದತ್ತು ಪಡೆಯುವಾಗ ಮಹಿಳೆಯ ವೈವಾಹಿಕ ಸ್ಥಿತಿಯನ್ನು ನಿರ್ಧಾರಕ ಅಂಶ ಎಂದು ಪರಿಗಣಿಸುವಂತಿಲ್ಲ ಎಂಬುದಾಗಿ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.
ವೈವಾಹಿಕ ಸ್ಥಿತಿ ಲೆಕ್ಕಿಸದೆಯೇ ತನ್ನ ಜೈವಿಕ ಮಗುವಿನ ಏಕೈಕ ಪಾಲಕಳಾದ ಮಹಿಳೆಯು ಹಿಂದೂ ದತ್ತು ಮತ್ತು ಜೀವನಾಂಶ ಕಾಯಿದೆ- 1956 ರ ಅಡಿಯಲ್ಲಿ ತನ್ನ ಮಗು ದತ್ತು ನೀಡಲು ಸಮರ್ಥಳೆಂದು ಪರಿಗಣಿಸಬೇಕು ಎಂದು ಜೂನ್ 13ರಂದು ಹೊರಡಿಸಿದ ಆದೇಶದಲ್ಲಿ, ಮಧುರೈ ಪೀಠದ ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ತಿಳಿಸಿದ್ದಾರೆ.
ಮಗು ಅಕ್ರಮ ಸಂಬಂಧದಿಂದ ಜನಿಸಿದ್ದು 2021ರಲ್ಲಿ ಮಗುವನ್ನು ದತ್ತು ಪಡೆದಾಗ ಆ ಮಗುವಿನ ಜೈವಿಕ ತಾಯಿ ಅಪ್ರಾಪ್ತ ವಯಸ್ಕಳಾಗಿದ್ದಳು ಎಂಬ ಕಾರಣಕ್ಕೆ ಮೂರು ವರ್ಷದ ಮಗುವಿನ ದತ್ತು ಪತ್ರ ನೋಂದಾಯಿಸಲು ನಿರಾಕರಿಸಿ ಉಪ ನೋಂದಣಾಧಿಕಾರಿ ಅವರು ಜನವರಿ 2022ರಲ್ಲಿ ಹೊರಡಿಸಿದ್ದ ಆದೇಶವನ್ನು ನ್ಯಾ. ಸ್ವಾಮಿನಾಥನ್ ರದ್ದುಗೊಳಿಸಿದರು.
ದತ್ತು ಒಪ್ಪಂದ ಪೂರ್ಣಗೊಂಡು ದತ್ತು ಪಡೆದ ಪೋಷಕರ ಒಪ್ಪಿಗೆ ಪಡೆಯುವ ಹೊತ್ತಿಗೆ ಮಗುವಿನ ಜೈವಿಕ ತಾಯಿ ವಯಸ್ಕಳಾಗಿದ್ದಳು. ಜೈವಿಕ ತಾಯಿ ಅವಿವಾಹಿತಳಾಗಿದ್ದು, ಮಗುವಿನ ಜೈವಿಕ ತಂದೆಯ ಒಪ್ಪಿಗೆಯನ್ನು ಪಡೆದಿರಲಿಲ್ಲ ಎಂಬುದು ಅಧಿಕಾರಿಗಳ ಆಕ್ಷೇಪವಾಗಿತ್ತು.
ಆದರೆ ಈ ವಾದ ಮನ್ನಿಸದ ನ್ಯಾಯಾಲಯ ಈ ರೀತಿ ದತ್ತು ಪತ್ರವನ್ನು ನೋಂದಾಯಿಸಲು ಅಧಿಕಾರಿಗಳು ನಿರಾಕರಿಸುವುದು ಅವರ ಪುರುಷ ಪ್ರಧಾನ ಮನಸ್ಥಿತಿಯನ್ನು ಸೂಚಿಸುತ್ತದೆ ಎಂದಿತು.
ತಂದೆ ಆ ಮಗುವಿನ ಬಳಿಯಿದ್ದರೆ ಮಾತ್ರ ಮಗುವಿನ ಪಿತೃತ್ವ ಸಾಧಿಸಲು ಅನುವು ಮಾಡಿಕೊಡುವ ಕಾಯಿದೆಯ ಸೆಕ್ಷನ್ 9 (2) ಅನ್ವಯವಾಗುತ್ತದೆ. ಆದರೆ ಪ್ರಸ್ತುತ ಪ್ರಕರಣದಲ್ಲಿ ಮಗುವಿನ ಜೈವಿಕ ತಂದೆ ಯಾರೆಂಬುದೇ ತಿಳಿದಿಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು.
ಹೀಗಾಗಿ ನೋಂದಣಿ ದಾಖಲೆಗಳನ್ನು ನೋಂದಣಿ ಅಧಿಕಾರಿಗಳೆದುರು ಸಲ್ಲಿಸುವಂತೆ ಸೂಚಿಸಿದ ಪೀಠ ಪಕ್ಷಗಳು ಉಳಿದೆಲ್ಲಾ ಔಪಚಾರಿಕತೆಗಳನ್ನು ಪೂರೈಸಿದ ಬಳಿಕ ದತ್ತು ಪತ್ರ ನೋಂದಾಯಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿತು.