
ರಾಜಕೀಯ ಪಕ್ಷಗಳು, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು ತಮ್ಮ ಯೋಜನೆಗಳ ಜಾಹೀರಾತಿಗೆ ತನ್ನ ಛಾಯಾಚಿತ್ರವನ್ನು ಅನಧಿಕೃತವಾಗಿ ಬಳಸಿರುವುದನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ನಮ್ರತಾ ಅಂಕುಶ್ ಕವಾಲೆ ಮತ್ತಿತರರು ಹಾಗೂ ತುಕಾರಾಂ ನಿವೃತ್ತಿ ಕರ್ವೆ ನಡುವಣ ಪ್ರಕರಣ].
ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ತನ್ನ ಒಪ್ಪಿಗೆಯಿಲ್ಲದೆ ತನ್ನ ಛಾಯಾಚಿತ್ರವನ್ನು ದುರ್ಬಳಕೆ ಮಾಡಿಕೊಂಡಿದ್ದು ತನ್ನ ಮೂಲಭೂತ ಖಾಸಗಿ ಹಕ್ಕುಗಳನ್ನು ಉಲ್ಲಂಘಿಸಿವೆ ಎಂದು ಅರ್ಜಿದಾರೆ ನಮ್ರತಾ ಅಂಕುಶ್ ಕವಾಲೆ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಅರ್ಜಿ ಆಲಿಸಿದ ನ್ಯಾಯಮೂರ್ತಿಗಳಾದ ಜಿ ಎಸ್ ಕುಲಕರ್ಣಿ ಮತ್ತು ಅದ್ವೈತ್ ಎಂ ಸೇತ್ನಾ ಅವರಿದ್ದ ಪೀಠ ಚಿತ್ರ ತೆಗೆದಿದ್ದಾರೆ ಎನ್ನಲಾದ ಛಾಯಾಗ್ರಾಹಕ, ರಾಯಧನರಹಿತವಾಗಿ ಸ್ಟಾಕ್ ಛಾಯಾಚಿತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಅಮೆರಿಕ ಮೂಲದ ಜಾಲತಾಣ ಶಟರ್‌ಸ್ಟಾಕ್, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಒಡಿಶಾ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳ ಪ್ರತಿಕ್ರಿಯೆ ಕೇಳಿದೆ.
"ಎಲೆಕ್ಟ್ರಾನಿಕ್ ಯುಗ ಮತ್ತು ಸಾಮಾಜಿಕ ಮಾಧ್ಯಮದ ಯುಗವನ್ನು ಪರಿಗಣಿಸಿದರೆ, ಸಮಸ್ಯೆಗಳು ತುಂಬಾ ಗಂಭೀರವಾಗಿವೆ. ಪ್ರತಿವಾದಿಗಳು ರಿಟ್ ಅರ್ಜಿಗೆ ಉತ್ತರಿಸಬೇಕಾಗಿದೆ" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ತಮ್ಮ ಛಾಯಾಚಿತ್ರವನ್ನು ತಮ್ಮ ಗ್ರಾಮದ ತುಕಾರಾಂ ನಿವೃತ್ತಿ ಕರ್ವೆ ಎಂಬ ಛಾಯಾಗ್ರಾಹಕ ತೆಗೆದಿದ್ದಾರೆ. ನಂತರ ಅದನ್ನು ಶಟರ್ ಸ್ಟಾಕ್ ಜಾಲತಾಣಕ್ಕೆ ಅಪ್‌ಲೋಡ್ ಮಾಡಿದ್ದಾರೆ. ಬಳಿಕ ವಿವಿಧ ರಾಜ್ಯ ಸರ್ಕಾರಗಳಲ್ಲದೆ ತೆಲಂಗಾಣದ ಕಾಂಗ್ರೆಸ್ ಪಕ್ಷ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮಾತ್ರವಲ್ಲದೆ ಟೋಟಲ್ ಡೆಂಟಲ್ ಕೇರ್ ಪ್ರೈವೇಟ್ ಲಿಮಿಟೆಡ್ ರೀತಿಯ ಖಾಸಗಿ ಸಂಸ್ಥೆಗಳು ಕೂಡ ತನ್ನ ಚಿತ್ರವನ್ನು ಜಾಹೀರಾತಿಗೆ ಬಳಸಿಕೊಂಡಿವೆ ಎಂದು ಎಂಬ ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದರು. ತನ್ನ ಚಿತ್ರದ ಅಕ್ರಮ ಬಳಕೆ ಹಾಗೂ ಗೌಪ್ಯತೆಯ ಹಕ್ಕು ಉಲ್ಲಂಘನೆಗಾಗಿ ಪ್ರತಿವಾದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಕೋರಿದರು.
ಮಹಿಳೆಯ ಕಳವಳದಲ್ಲಿ ಹುರುಳಿದೆ ಎಂದ ನ್ಯಾಯಾಲಯ ಸಾಮಾಜಿಕ ಮಾಧ್ಯಮ ಯುಗದಲ್ಲಿ, ರಾಜ್ಯಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಿಂದ ವೈಯಕ್ತಿಕ ಚಿತ್ರಗಳ ಅನಧಿಕೃತ ಬಳಕೆ ಬಗ್ಗೆ ಆತಂಕ ವ್ಯಕ್ತಪಡಿಸಿತು. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 24ರಂದು ನಡೆಯಲಿದೆ.