ಶಿಕ್ಷಣ, ಉದ್ಯೋಗ ಮೀರಿ ಕುಟುಂಬ ನೋಡಿಕೊಳ್ಳುವ ಮಹಿಳೆ ಗೃಹಿಣಿಯೇ: ಹೈಕೋರ್ಟ್‌

ಸಂತ್ರಸ್ತೆಯು ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದು, ಅಪಘಾತದಿಂದ ಉಂಟಾದ ಆದಾಯ ನಷ್ಟಕ್ಕೆ ಪರಿಹಾರ ಹೆಚ್ಚಿಸಬೇಕೆಂದು ಕೋರಿದ್ದರು.
Women
WomenAi generated image
Published on

ತನ್ನ ಕುಟುಂಬಕ್ಕೆ ಸೇವೆ ಸಲ್ಲಿಸುವ ಮಹಿಳೆಯೊಬ್ಬಳ ಶೈಕ್ಷಣಿಕ ಅರ್ಹತೆ ಅಥವಾ ಕೆಲಸದ ಸ್ಥಿತಿ ಏನೇ ಇರಲಿ, ಅವರನ್ನು ಗೃಹಿಣಿ ಎಂದು ಪರಿಗಣಿಸಲಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್ ಅಪಘಾತದಲ್ಲಿ ಗಾಯಗೊಂಡ ಜೈವಿಕ ತಂತ್ರಜ್ಞಾನ ಸ್ನಾತಕೋತ್ತರ ಪದವೀಧರೆಯೊಬ್ಬರು ಹೂಡಿರುವ ಮೋಟಾರು ಅಪಘಾತ ಪ್ರಕರಣವನ್ನು ನ್ಯಾಯಮೂರ್ತಿ ಸಿ ಸುಮಲತಾ ಅವರ ಏಕಸದಸ್ಯ ಪೀಠ ನಡೆಸಿತು.

Justice Chillakur Sumalatha
Justice Chillakur Sumalatha

ಸಂತ್ರಸ್ತೆಯು ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದು, ಅಪಘಾತದಿಂದ ಉಂಟಾದ ಆದಾಯ ನಷ್ಟಕ್ಕೆ ಪರಿಹಾರ ಹೆಚ್ಚಿಸಬೇಕೆಂದು ಕೋರಿದ್ದರು. ಬೆಂಗಳೂರಿನ ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿ (ಎಂಎಸಿಟಿ) ಈ ಹಿಂದೆ ಇದಕ್ಕೆ ನಿರಾಕರಿಸಿತ್ತು.

ಅಪಘಾತದ ಸಮಯದಲ್ಲಿ ಅವರ ಕೆಲಸದ ಸ್ಥಿತಿಯ ಬಗ್ಗೆ ಯಾವುದೇ ಪುರಾವೆ ಇಲ್ಲದ ಕಾರಣ ಭವಿಷ್ಯದ ಗಳಿಕೆಯ ನಷ್ಟಕ್ಕೆ ಪರಿಹಾರವನ್ನು ನಿರಾಕರಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವಾದಿಸಿತ್ತು. ಆಕೆಯ ಉನ್ನತ ಶೈಕ್ಷಣಿಕ ಅರ್ಹತೆಯನ್ನು ಪರಿಗಣಿಸಿ, ಅವರನ್ನು ಗೃಹಿಣಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ಅದು ವಾದಿಸಿತ್ತು.

ಕೆಎಸ್‌ಆರ್‌ಟಿಸಿ ವಾದ ತಿರಸ್ಕರಿಸಿರುವ ಪೀಠವು “ಮನೆಯಲ್ಲಿ ತನ್ನ ಕುಟುಂಬ ಸದಸ್ಯರಿಗೆ ಸೇವೆ ಸಲ್ಲಿಸುವ ಪ್ರತಿಯೊಬ್ಬ ಮಹಿಳೆಯೂ ಪದವಿ, ಸ್ನಾತಕೋತ್ತರ ಪದವಿ ಅಥವಾ ಡಾಕ್ಟರೇಟ್ ಪದವಿಯಂತಹ ಉನ್ನತ ಅರ್ಹತೆಯನ್ನು ಹೊಂದಿದ್ದರೂ ಸಹ, ಅವರನ್ನು 'ಗೃಹಿಣಿ' ಎಂದು ಪರಿಗಣಿಸಲಾಗುತ್ತದೆ. ಈ ನ್ಯಾಯಾಲಯದ ವಿನಮ್ರ ಅಭಿಪ್ರಾಯದಲ್ಲಿ, ಕೆಲಸ ಮಾಡುವ ಮಹಿಳೆ ಅಥವಾ ವೃತ್ತಿಪರ ಮಹಿಳೆಯೂ ಸಹ ಗೃಹಿಣಿ ಎಂದು ಪರಿಗಣಿಸಬಹುದು, ಏಕೆಂದರೆ ಅವರು ಮನೆಯಲ್ಲಿ ಕುಟುಂಬ ಸದಸ್ಯರ ಕಲ್ಯಾಣವನ್ನು ನೋಡಿಕೊಳ್ಳುತ್ತಾರೆ” ಎಂದಿದೆ.

ಮಹಿಳೆ ಅನಕ್ಷರಸ್ಥೆ ಅಥವಾ ಅವಳು ದಿನದ ಇಪ್ಪತ್ತನಾಲ್ಕು ತಾಸೂ ಮನೆಯಲ್ಲಿಯೇ ಇರುತ್ತಾಳೆ ಅಥವಾ ಅವಳು ಮನೆಕೆಲಸಕ್ಕೆ ಮಾತ್ರ ಹೋಗುತ್ತಾಳೆ ಎಂದು ಬಿಂಬಿಸುವ ಅಗತ್ಯವಿಲ್ಲ ಎಂದೂ ನ್ಯಾಯಾಲಯವು ಹೇಳಿದೆ.

“ಯಾವುದೇ ವ್ಯಕ್ತಿಯು ದಣಿವರಿಯದೇ ಶ್ರಮಿಸುತ್ತಾ, ಬೇಷರತ್‌ ಪ್ರೀತಿ ಸುರಿಸುತ್ತಾ, ಕೆಲವೊಮ್ಮೆ ವೈಯಕ್ತಿಕ ಸೌಕರ್ಯವನ್ನು ತ್ಯಾಗ ಮಾಡಿ ಅಂತಿಮವಾಗಿ ಸಂತೋಷ ಮತ್ತು ಸ್ಥಿರ ಕುಟುಂಬಕ್ಕೆ ಆಧಾರಸ್ತಂಭವಾಗುತ್ತಾರೋ ಅವರು ಗೃಹಿಣಿಯೇ ಆಗಿರುತ್ತಾರೆ" ಎಂದು ಪೀಠ ಹೇಳಿದೆ.

ಗೃಹಿಣಿ ಎಂಬ ಪದವು ಲಿಂಗ-ತಟಸ್ಥವಾಗಿದೆ ಮತ್ತು ಅದು ಕುಟುಂಬಕ್ಕಾಗಿ ದುಡಿಯುವವರನ್ನೂ ಸಹ ಒಳಗೊಂಡಿರಬಹುದು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

“ಗೃಹಿಣಿ ಎಂಬ ಪದವಿ ಲಿಂಗ ತಟಸ್ಥವಾಗಿದ್ದು, ಗೃಹಿಣಿಯು ಪುರುಷ ಅಥವಾ ಮಹಿಳೆಯಾಗಿರಬಹುದು. ಇದು ಕೆಲಸ ಮಾಡುವವರು ಅಥವಾ ಕುಟುಂಬ ಸಲಹುವವರು ಅಥವಾ ಗೇಯುವವರನ್ನು ಒಳಗೊಂಡಿರುತ್ತದೆ. ಹೀಗಾಗಿ, ಈ ಪ್ರಕರಣದಲ್ಲಿ ಪರಿಹಾರ ಕೋರಿರುವವರನ್ನು ಗೃಹಿಣಿ ಎಂದೇ ಪರಿಗಣಿಸಲಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

2013ರಲ್ಲಿ ಅಪಘಾತ ನಡೆದಿರುವುದನ್ನು ಪರಿಗಣಿಸಿ, ಆಕೆಯ ಉದ್ಯೋಗಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪುರಾವೆಗಳಿಲ್ಲದಿರುವುದರಿಂದ ಆಕೆಯ ಕಾಲ್ಪನಿಕ ಆದಾಯವನ್ನು ತಿಂಗಳಿಗೆ ₹ 8,000 ಎಂದು ಪರಿಗಣಿಸಲು ನ್ಯಾಯಾಲಯ ನಿರ್ಧರಿಸಿತು. ಆಕೆಯ ಗಾಯಗಳನ್ನು ಗಮನಿಸಿದ ನ್ಯಾಯಾಲಯವು ಆಕೆ ಕನಿಷ್ಠ ಮೂರು ತಿಂಗಳ ಕಾಲ ವಿರಾಮದಲ್ಲಿದ್ದು, ಆ ಸಮಯದಲ್ಲಿ ಆಕೆ ಕುಟುಂಬಕ್ಕೆ ಯಾವುದೇ ಸೇವೆ ಸಲ್ಲಿಸದೇ ಇರಬಹುದು ಎಂದು ಹೇಳಿದೆ.

"ಆದ್ದರಿಂದ, ಆ 3 ತಿಂಗಳುಗಳ ಕಾಲ ಹಕ್ಕುದಾರರು ತಮ್ಮ ಕುಟುಂಬದಲ್ಲಿ ತಮ್ಮ ಕರ್ತವ್ಯ ನಿರ್ವಹಿಸಲು ಅಸಮರ್ಥರಾಗುವುದರಿಂದ ಉಂಟಾಗುವ ಆರ್ಥಿಕ ನಷ್ಟವು ರೂ. 24,000/- (8,000 x3) ಆಗಿರುತ್ತದೆ. ಆದ್ದರಿಂದ ನ್ಯಾಯಮಂಡಳಿಯಿಂದ ನೀಡಲಾಗುವ ಮೊತ್ತದ ಜೊತೆಗೆ ಹಕ್ಕುದಾರರು ಪಡೆಯುವ ಒಟ್ಟು ಮೊತ್ತ ರೂ. 1,96,800 (1,72,800 + 24,000)” ಎಂದು ನ್ಯಾಯಾಲಯ ಆದೇಶಿಸಿದೆ.

Attachment
PDF
KSRTC Vs Pampapal
Preview
Kannada Bar & Bench
kannada.barandbench.com