[ಮಹಿಳೆ ವಿವಸ್ತ್ರ ಪ್ರಕರಣ] ಸಂತ್ರಸ್ತೆಗೆ ಎರಡು ಎಕರೆ ಭೂಮಿ ಮಂಜೂರು: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಪರಿಹಾರ ಹಣ ಪಾವತಿಯ ಜೊತೆಗೆ ಸರ್ಕಾರ ಈ ಹಿಂದೆ ಘೋಷಿಸಿದಂತೆ ಸಂತ್ರಸ್ತೆಗೆ ಎರಡು ಎಕರೆ ಜಮೀನು ಮಂಜೂರು ಮಾಡಲಾಗಿದೆ. ಜಮೀನಿನ ಕ್ರಯಪತ್ರ ಸಹ ಹಸ್ತಾಂತರಿಸಲಾಗಿದೆ ಎಂದು ಅಡ್ವೋಕೇಟ್‌ ಜನರಲ್‌ ತಿಳಿಸಿದರು.
Chief Justice P S Dinesh Kumar & Justice T G Shivashankare Gowda, Karnataka HC
Chief Justice P S Dinesh Kumar & Justice T G Shivashankare Gowda, Karnataka HC
Published on

ಬೆಳಗಾವಿ ಜಿಲ್ಲೆಯ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಯೋಜನೆಯಡಿ ಘೋಷಿಸಿದಂತೆ ಸಂತ್ರಸ್ತೆಗೆ ಜಮೀನು ಮಂಜೂರು ಮಾಡಿದ್ದು, ಅದರ ಕ್ರಯಪತ್ರವನ್ನು ಸಹ ಹಸ್ತಾಂತರಿಸಲಾಗಿದೆ ಎಂದು ರಾಜ್ಯ ಸರ್ಕಾರವು ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ ಎಸ್‌ ದಿನೇಶ್‌ ಕುಮಾರ್‌ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಈ ಸಂದರ್ಭದಲ್ಲಿ ಪೀಠದ ಮುಂದೆ ಹಾಜರಾದ ಅಡ್ವೋಕೇಟ್ ಜನರಲ್ ಕೆ ಶಶಿಕಿರಣ್‌ ಶೆಟ್ಟಿ ಅವರು ಮಾಹಿತಿ ನೀಡಿದರು.

ಪರಿಹಾರ ಹಣ ಪಾವತಿಯ ಜೊತೆಗೆ ಸರ್ಕಾರ ಈ ಹಿಂದೆ ಘೋಷಿಸಿದಂತೆ ಸಂತ್ರಸ್ತೆಗೆ ಎರಡು ಎಕರೆ ಜಮೀನು ಮಂಜೂರು ಮಾಡಲಾಗಿದೆ. ಜಮೀನಿನ ಕ್ರಯಪತ್ರ ಸಹ ಹಸ್ತಾಂತರಿಸಲಾಗಿದೆ ಎಂದು ಅಡ್ವೋಕೇಟ್‌ ಜನರಲ್‌ ತಿಳಿಸಿದರು.

ಅಲ್ಲದೇ, ಇದೊಂದು ಸೂಕ್ಷ್ಮ ಪ್ರಕರಣವಾಗಿದೆ. ಸಂತ್ರಸ್ತೆ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಕ್ರಿಮಿನಲ್‌ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಪೂರೈಸಲು ಸಂಬಂಧಪಟ್ಟ ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಇದೇ ವೇಳೆ ಅಡ್ವೋಕೇಟ್‌ ಜನರಲ್‌ ಪೀಠವನ್ನು ಕೋರಿದರು. ಈ ಎಲ್ಲಾ ಅಂಶ ದಾಖಲಿಸಿಕೊಂಡ ನ್ಯಾಯಾಲಯವು ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದ 24 ವರ್ಷದ ಯುವಕ ಮತ್ತು 18 ವರ್ಷದ ಯುವತಿ ಪ್ರೀತಿಸುತ್ತಿದ್ದರು. ಯುವತಿಗೆ ಆಕೆಯ ಕುಟುಂಬದವರು ಬೇರೊಬ್ಬ ಯುವಕನೊಂದಿಗೆ ಮದುವೆ ನಿಗದಿಪಡಿಸಿ ನಿಶ್ಚಿತಾರ್ಥ ಇಟ್ಟುಕೊಂಡಿದ್ದರು. ನಿಶ್ಚಿತಾರ್ಥದ ಹಿಂದಿನ ದಿನ ಮಧ್ಯರಾತ್ರಿ ಪ್ರೇಮಿಗಳಿಬ್ಬರು ಮನೆಬಿಟ್ಟು ಪರಾರಿಯಾಗಿದ್ದರು. ಇದರಿಂದ ರೊಚ್ಚಿಗೆದ್ದ ಯುವತಿಯ ಕುಟುಂಬದವರು, ಯುವಕನ ತಾಯಿಯನ್ನು (ಸಂತ್ರಸ್ತೆ) ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದ್ದರು. ಈ ಘಟನೆಯನ್ನು ಮಾಧ್ಯಮಗಳ ವರದಿ ಮಾಡಿದ್ದವು. ಈ ವರದಿ ಆಧರಿಸಿ ಸ್ವಯಂ ಪ್ರೇರಿತ ಪಿಐಎಲ್‌ ದಾಖಲಿಸಿಕೊಂಡು ಹೈಕೋರ್ಟ್‌ ವಿಚಾರಣೆ ನಡೆಸುತ್ತಿದೆ.

Kannada Bar & Bench
kannada.barandbench.com