ಮಹಿಳಾ ನ್ಯಾಯಮೂರ್ತಿಗಳ ಪೀಠದಿಂದ ವಿಚಾರಣೆ: ಮಹಿಳಾ ಕಾನೂನು ಅಧಿಕಾರಿಗಳ ತಂಡ ಮುನ್ನಡೆಸಲಿರುವ ಎಎಜಿ ಪ್ರತಿಮಾ ಹೊನ್ನಾಪುರ

ಆಗಸ್ಟ್ 8 ಮತ್ತು 9 ರಂದು ಬೆಂಗಳೂರಿನಲ್ಲಿ ದೇಶದ ಎಲ್ಲ ಹೈಕೋರ್ಟ್ ಮಹಿಳಾ ನ್ಯಾಯಮೂರ್ತಿಗಳ ಸಮಾವೇಶ ನಡೆಸುವ ಹಿನ್ನೆಲೆಯಲ್ಲಿ ಪೂರ್ಭಾವಿಯಾಗಿ ಈ ಪೀಠಗಳನ್ನು ರಚನೆ ಮಾಡಲಾಗಿದೆ ಎನ್ನಲಾಗಿದೆ.
Woman Lawyer
Woman LawyerRepresentation only
Published on

ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ಆಗಸ್ಟ್ 1ರಂದು (ಶನಿವಾರ) ನಡೆಯಲಿರುವ ಎಲ್ಲಾ ಮಹಿಳಾ ನ್ಯಾಯಪೀಠಗಳ ವಿಚಾರಣೆಯಲ್ಲಿ, ರಾಜ್ಯ ಸರ್ಕಾರದ ಪರ ವಾದ ಮಂಡಿಸಲು ಸಂಪೂರ್ಣ ಮಹಿಳೆಯರೇ ಇರುವ ಕಾನೂನು ಅಧಿಕಾರಿಗಳ ತಂಡವೊಂದನ್ನು ನೇಮಿಸಲಾಗಿದೆ.

ಈ ಕುರಿತಂತೆ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ ಶೆಟ್ಟಿ ಆದೇಶ ಹೊರಡಿಸಿದ್ದು, ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ಪ್ರತಿಮಾ ಹೊನ್ನಾಪುರ ತಂಡದ ನೇತೃತ್ವ ವಹಿಸಿದ್ದಾರೆ. ಈ ತಂಡವು ವಿಶೇಷ ಮಹಿಳಾ ಪೀಠಗಳ ಮುಂದೆ ಪ್ರತ್ಯೇಕ ಜವಾಬ್ದಾರಿಯೊಂದಿಗೆ ಹಾಜರಾಗಲಿದೆ.

ಪ್ರತಿಮಾ ಹೊನ್ನಾಪುರ, ಹೆಚ್ಚುವರಿ ಸರ್ಕಾರಿ ವಕೀಲರಾದ ನಂದಿನಿ ಸೋಮಾಪುರ, ಪ್ರಮೋದಿನಿ ಕಿಶನ್, ಸಾವಿತ್ರಮ್ಮ, ಬಿ ಪಿ ರಾಧಾ, ಸುನೀತಾ ಸಿಕ್ವೇರಿಯಾ, ಮಮತಾ ಶೆಟ್ಟಿ, ಮಾಲಾ ಬಿ ಭೂತೆ, ವಿ ಹೇಮಲತಾ, ಆರ್ ಕೆ ಪ್ರತಿಭಾ, ವಿ ಸ್ಫೂರ್ತಿ, ಗಿರಿಜಾ ಹಿರೇಮಠ, ರಶ್ಮಿ ಪಟೇಲ್, ರಶ್ಮಿ ರಾವ್, ಕೀರ್ತಿಲತಾ ಪಾಟೀಲ್, ರತ್ನಮಲಾ, ಎಸ್​ ಚಾಂದಿನಿ, ಆರ್ ಸೌಮ್ಯ, ವಹೀದಾ ಮತ್ತು ದೀಪ್ತಿ ಆಳ್ವಾ.

ಕರ್ನಾಟಕ ಹೈಕೋರ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಧಾರವಾಡ ಪೀಠದಲ್ಲಿ ಆಗಸ್ಟ್ 1ರ ಇಡೀ ದಿನದ ಕಲಾಪಗಳನ್ನು ಒಟ್ಟು 10 ಮಹಿಳಾ ನ್ಯಾಯಮೂರ್ತಿಗಳೇ ನಡೆಸಿಕೊಡಲಿದ್ದಾರೆ.

ಮೂರು ವಿಭಾಗೀಯ ಪೀಠಗಳನ್ನು ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾ.ಕೆ ಜಿ ಶಾಂತಿ, ನ್ಯಾ.ಜ್ಯೋತಿ ಮೂಲಿಮನಿ ಹಾಗೂ ನ್ಯಾ.ಪಿ ಶ್ರೀಸುಧಾ, ನ್ಯಾ.ಲಲಿತಾ ಕನ್ನೆಗಂಟಿ ಹಾಗೂ ನ್ಯಾ.ಕೆ ಎಸ್ ಹೇಮಲೇಖಾ ಅವರು ಮುನ್ನಡೆಸಲಿದ್ದಾರೆ.

ನ್ಯಾ.ಚಿಲ್ಲಕೂರು ಸುಮಲತಾ, ನ್ಯಾ.ತಾರಾ ವಿತಾಸ್ತಾ ಗಂಜು, ನ್ಯಾ.ಕೆ ಬಿ ಗೀತಾ ಹಾಗೂ ನ್ಯಾ.ರಾಜೇಶ್ವರಿ ಎನ್.ಹೆಗ್ಡೆ ಅವರು ಏಕಸದಸ್ಯ ಪೀಠಗಳಲ್ಲಿ ವಿಚಾರಣೆ ನಡೆಸಲಿದ್ದಾರೆ.

ಆಗಸ್ಟ್ 8 ಮತ್ತು 9 ರಂದು ಬೆಂಗಳೂರಿನಲ್ಲಿ ದೇಶದ ಎಲ್ಲ ಹೈಕೋರ್ಟ್ ಮಹಿಳಾ ನ್ಯಾಯಮೂರ್ತಿಗಳ ಸಮಾವೇಶ ನಡೆಸುವ ಹಿನ್ನೆಲೆಯಲ್ಲಿ ಪೂರ್ಭಾವಿಯಾಗಿ ಈ ಪೀಠಗಳನ್ನು ರಚನೆ ಮಾಡಲಾಗಿದೆ ಎನ್ನಲಾಗಿದೆ.

Kannada Bar & Bench
kannada.barandbench.com