ಸೇಡಿಗಾಗಿ ಕೆಲ ಮಹಿಳೆಯರು ಪತಿ ಆತನ ಕುಟುಂಬದ ವಿರುದ್ಧ ಸೆಕ್ಷನ್ 498 ಎ ಅಡಿ ಪ್ರಕರಣ ದಾಖಲಿಸುತ್ತಾರೆ: ಕೇರಳ ಹೈಕೋರ್ಟ್
ವೈವಾಹಿಕ ವ್ಯಾಜ್ಯಗಳಲ್ಲಿ ಭಾಗಿಯಾಗಿರುವ ಪತ್ನಿಯಂದಿರು ತಮ್ಮ ಪತಿ ಮತ್ತು ಆತನ ಕುಟುಂಬದ ಸದಸ್ಯರ ವಿರುದ್ಧ ಕೇವಲ ಸೇಡು ತೀರಿಸಿಕೊಳ್ಳುವುದಕ್ಕಾಗಿ ಕ್ರಿಮಿನಲ್ ಮೊಕದ್ದಮೆ ಹೂಡುತ್ತಾರೆ ಎಂದು ಕೇರಳ ಹೈಕೋರ್ಟ್ ಗುರುವಾರ ತಿಳಿಸಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ (ಮಹಿಳೆಯ ವಿರುದ್ಧ ಪತಿ ಅಥವಾ ಗಂಡನ ಸಂಬಂಧಿ ನಡೆಸುವ ಕ್ರೌರ್ಯ) ಅಡಿಯ ಪ್ರಕರಣಗಳನ್ನು ಪರಿಗಣಿಸುವಾಗ ನ್ಯಾಯಾಲಯಗಳು ವಿಶೇಷವಾದ ಗಮನಹರಿಸಬೇಕು ಎಂದು ನ್ಯಾಯಮೂರ್ತಿ ಎ ಬದರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ.
"ವೈವಾಹಿಕ ವ್ಯಾಜ್ಯಗಳಲ್ಲಿ, ಪತಿ ಮತ್ತುಆತನ ಸಂಬಂಧಿಕರ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ, ಕೆಲವು ಪತ್ನಿಯರು ಅಸ್ಪಷ್ಟ ಮತ್ತು ಎಗ್ಗಿಲ್ಲದ ಆರೋಪ ನೆಚ್ಚಿಕೊಂಡು ಕ್ರಿಮಿನಲ್ ಮೊಕದ್ದಮೆ ಹೂಡುತ್ತಾರೆ ಎಂದು ಗಮನಕ್ಕೆ ಬಂದಿದೆ. ಜಾಮೀನು ರಹಿತ ಅಪರಾಧಗಳಲ್ಲಿ ತಮ್ಮ ಪತಿ ಆತನ ಪೋಷಕರು, ಸಹೋದರಿ, ಸಹೋದರರು ಮತ್ತಿತರ ಸಂಬಂಧಿಕರನ್ನು ಸಿಲುಕಿಸಲು ಮತ್ತು ಸಮಾಜದಲ್ಲಿ ಅವರ ಪ್ರತಿಷ್ಠೆಗೆ ಧಕ್ಕೆ ತರಲು ಮತ್ತು ಮಾನಹಾನಿಗೊಳಿಸಲು ಕ್ರಿಮಿನಲ್ ಮೊಕದ್ದಮೆ ಹಾಗೂ ವಿಚಾರಣೆಯ ಅಗ್ನಿಪರೀಕ್ಷೆ ಎದುರಿಸುವಂತೆ ಮಾಡುತ್ತಾರೆ. ಅಂತಹ ಪ್ರಕರಣಗಳಲ್ಲಿ, ಆಪಾದನೆಗಳು ಸೆಕ್ಷನ್ 498 ಎ ಅಡಿಯ ನಿರ್ದಿಷ್ಟ ವಿಚಾರಗಳನ್ನು ಒಳಗೊಂಡಿವೆಯೇ ಎಂಬ ಕುರಿತು ಲಭ್ಯವಿರುವ ಸಾಕ್ಷ್ಯಗಳನ್ನು ವಿಶ್ಲೇಷಿಸುವುದು ನ್ಯಾಯಾಲಯಗಳ ಕರ್ತವ್ಯ” ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಪ್ರಕರಣವನ್ನು ವಿಚಾರಣೆಗೆ ಒಳಪಡಿಸಲು ಪ್ರಾಥಮಿಕವಾಗಿ ಯಾವುದೇ ನಿರ್ದಿಷ್ಟ ಆರೋಪಗಳಿಲ್ಲದಿದ್ದಾಗ, ಸಿಆರ್‌ಪಿಸಿಯ ಸೆಕ್ಷನ್ 482 ರ ಅಡಿಯಲ್ಲಿ ತನ್ನ ಅಧಿಕಾರ ಚಲಾಯಿಸುವ ಮೂಲಕ ಹೈಕೋರ್ಟ್ ಅಂತಹ ಪ್ರಕರಣಗಳನ್ನು ರದ್ದುಗೊಳಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
"ಇದೇ ವೇಳೆ, ಸೆಕ್ಷನ್ 498 ಎ ಅಡಿಯಲ್ಲಿ ಕೃತ್ಯಗಳನ್ನು ಸೂಚಿಸುವ ಪ್ರಾಸಿಕ್ಯೂಷನ್ನ ನಿರ್ದಿಷ್ಟ ಆರೋಪಗಳು ಮೇಲ್ನೋಟಕ್ಕೆ ಸಾಬೀತಾದರೆ, ಅಂತಹ ಪ್ರಕರಣಗಳನ್ನು ರದ್ದುಗೊಳಿಸಲಾಗುವುದಿಲ್ಲ" ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಸೆಕ್ಷನ್ 498 ಎ ಅಡಿಯಲ್ಲಿ ತನ್ನ ವಿರುದ್ಧ ನಡೆಸುತ್ತಿರುವ ವಿಚಾರಣೆ ರದ್ದುಗೊಳಿಸುವಂತೆ ಪತಿಯ ತಾಯಿ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿದಾರರ ವಿರುದ್ಧ ಕೇವಲ ಎಗ್ಗಿಲ್ಲದ ಆರೋಪಗಳನ್ನು ಮಾಡಲಾಗಿದ್ದು ಸೊಸೆಯ ಪೋಷಕರ ಹೇಳಿಕೆಗಳನ್ನು ಕೇವಲ ಕೇಳಿಕೆಯಂತೆ ನೋಡಬಹುದು ಎಂದು ನ್ಯಾಯಾಲಯ ಪ್ರಾಸಿಕ್ಯೂಷನ್ ದಾಖಲೆಗಳನ್ನು ಆಧರಿಸಿ ನುಡಿದಿದೆ. ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲು ಈ ಅಂಶ ಸಾಕಾಗುತ್ತದೆ ಎಂದ ಅದು ಅರ್ಜಿಯನ್ನು ಪುರಸ್ಕರಿಸಿದೆ.