H D Revanna
H D Revanna

ಮಹಿಳೆ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್‌ ಡಿ ರೇವಣ್ಣಗೆ ಏಳು ದಿನ ನ್ಯಾಯಾಂಗ ಬಂಧನ

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ರೇವಣ್ಣ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ನಾಳೆಗೆ ಮುಂದೂಡಿದ್ದಾರೆ.

ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣದಲ್ಲಿ ತಳುಕು ಹಾಕಿಕೊಂಡಿರುವ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಜೆಡಿಎಸ್‌ ಮುಖಂಡ, ಶಾಸಕ ಎಚ್‌ ಡಿ ರೇವಣ್ಣ ಅವರನ್ನು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಮೂರು ದಿನಗಳ ಎಸ್‌ಐಟಿ ಕಸ್ಟಡಿ ಇಂದಿಗೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ರೇವಣ್ಣ ಅವರನ್ನು ತನಿಖಾಧಿಕಾರಿಗಳು ಬೆಂಗಳೂರಿನ 17ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ರವೀಂದ್ರಕುಮಾರ್‌ ಬಿ. ಕಟ್ಟೀಮನಿ ಅವರ ಮುಂದೆ ಹಾಜರುಪಡಿಸಿದರು.

ಈ ವೇಳೆ ಎಸ್‌ಐಟಿ ಪರವಾಗಿ ಹಾಜರಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಆರೋಪಿ ರೇವಣ್ಣ ತನಿಖೆಗೆ ಸಹಕರಿಸುತ್ತಿಲ್ಲ. ಹಾರಿಕೆ ಉತ್ತರಗಳನ್ನು ನೀಡುತ್ತಿದ್ದಾರೆ. ಹೀಗಾಗಿ, ಹೆಚ್ಚಿನ ತನಿಖೆಗೆ ಎಸ್‌ಐಟಿ ಕಸ್ಟಡಿಗೆ ನೀಡಬೇಕು” ಎಂದು ಕೋರಿದರು.

ಇದಕ್ಕೆ ಪ್ರತಿಯಾಗಿ ರೇವಣ್ಣ ಪರ ಹಿರಿಯ ವಕೀಲ ಮೂರ್ತಿ ಡಿ. ನಾಯ್ಕ್‌ ಇದಕ್ಕೆ ಆಕ್ಷೇಪಿಸಿದರು. ಈ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್‌ ಸ್ವತಃ ರೇವಣ್ಣ ಅವರಿಂದ ಮಾಹಿತಿ ಪಡೆದರು.

ಮ್ಯಾಜಿಸ್ಟ್ರೇಟ್‌ ಅವರು ರೇವಣ್ಣ ತನಗೆ ಹೊಟ್ಟೆ ನೋವಿದ್ದರೂ ಅಧಿಕಾರಿಗಳು ಆಸ್ಪತ್ರೆಗೆ ಸೇರಿಸಿಲ್ಲ. ತನಿಖಾಧಿಕಾರಿಗಳು ಕೇಳಿರುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಮಹಿಳೆ ಅಪಹರಣ ದಿನ ನಾನು ಊರಿನಲ್ಲಿರಲಿಲ್ಲ. ಆ ಘಟನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ, ತನ್ನನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಅಂತಿಮವಾಗಿ ನ್ಯಾಯಾಲಯವು ರೇವಣ್ಣ ಅವರನ್ನು ಮೇ 14ರವರೆಗೆ ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿತು.

ಈ ಮಧ್ಯೆ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ರೇವಣ್ಣ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರು ನಾಳೆಗೆ ಮುಂದೂಡಿದ್ದಾರೆ. ಎಸ್‌ಐಟಿ ವಕೀಲರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಿಕೆಯಾಗಿದೆ.

Related Stories

No stories found.
Kannada Bar & Bench
kannada.barandbench.com