ಮಾನಸಿಕ ಅಸ್ವಸ್ಥತೆ ಅಥವಾ ಯಾವುದೇ ರೀತಿಯ ಬೌದ್ಧಿಕ ಇಲ್ಲವೇ ಮಾನಸಿಕ ಬೆಳವಣಿಗೆಯ ಅಸಾಮರ್ಥ್ಯದಿಂದ ಬಳಲುತ್ತಿರುವವರಿಗೆ ಮರಣ ದಂಡನೆ ವಿಧಿಸುವುದನ್ನು ರದ್ದುಗೊಳಿಸುವಂತೆ ವಿಶ್ವ ಮನೋವೈದ್ಯಕೀಯ ಸಂಘ ವಿಯೆನ್ನಾದಲ್ಲಿ ಈಚೆಗೆ ನಡೆದ ಮಹಾಸಭೆಯಲ್ಲಿ ಶಿಫಾರಸು ಮಾಡುವ ವರದಿಯನ್ನು ಅನುಮೋದಿಸಿದೆ.
ಸೆ. 30ರಂದು ಈ ವರದಿಯನ್ನು ಅನುಮೋದಿಸಲಾಗಿದೆ, 121 ದೇಶಗಳ 145 ಮನೋವೈದ್ಯಕೀಯ ಸೊಸೈಟಿಗಳನ್ನು ಪ್ರತಿನಿಧಿಸುವ ವೃತ್ತಿಪರ ಸಂಘವೊಂದು ವರದಿಗೆ ಅನುಮೋದನೆ ನೀಡಿರುವುದರಿಂದ ಮಹತ್ವದ್ದೆನಿಸಿದೆ.
ಮಾನಸಿಕ ಅಸ್ವಸ್ಥತೆ ಇಲ್ಲವೇ ಮಾನಸಿಕ ಬೆಳವಣಿಗೆ ಕುಂಠಿತವಾದ ಅಥವಾ ಬೌದ್ಧಿಕ ಅಸಮಾರ್ಥ್ಯ ಹೊಂದಿರುವ ಯಾವುದೇ ವ್ಯಕ್ತಿಗೆ ಮರಣ ದಂಡನ ವಿಧಿಸಬಾರದು. ಏಕೆಂದರೆ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಅಂತಹವರ ನ್ಯಾಯಯುತ ವಿಚಾರಣೆಯ ಹಕ್ಕುಗಳನ್ನು ಮತ್ತು ಘನತೆಯ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ (NLUD) ಸಾಮೂಹಿಕ ಸದಸ್ಯರನ್ನೂ ಒಳಗೊಂಡಿರುವ ಪ್ರಾಜೆಕ್ಟ್39ಎ ವರದಿಯ ಲೇಖಕರು ತಿಳಿಸಿದ್ದಾರೆ.
ವರದಿಯ ಶಿಫಾರಸುಗಳು
ಮರಣದಂಡನೆಗೆ ಗುರಿಯಾಗುವ ಅಪಾಯದಲ್ಲಿರುವ ವ್ಯಕ್ತಿಗಳ ಮಾನಸಿಕ ಆರೋಗ್ಯ ಮೌಲ್ಯಮಾಪನ ಮಾಡಬೇಕು.
ಮಾನಸಿಕ ಕಾಯಿಲೆಗಳು ಅಥವಾ ಬೆಳವಣಿಗೆಯ ಮತ್ತು ಬೌದ್ಧಿಕ ವಿಕಲಾಂಗ ವ್ಯಕ್ತಿಗಳಿಗೆ ಮರಣದಂಡನೆ ವಿಧಿಸದಂತೆ ನೋಡಿಕೊಳ್ಳಲು ನ್ಯಾಯಾಂಗದ ಪ್ರತಿ ಹಂತದಲ್ಲಿಯೂ ಮೌಲ್ಯ ಮಾಪನ ನಡೆಸಬೇಕು.
ಭಾರತದಲ್ಲಿ ಮಾನಸಿಕ ಅಸ್ವಸ್ಥತೆ ಮತ್ತು ಬೌದ್ಧಿಕ ಅಸಾಮರ್ಥ್ಯ
ಭಾರತದಲ್ಲಿ 2021ರಲ್ಲಿ 490 ಮಂದಿ ಮರಣ ದಂಡನೆಗೆ ಗುರಿಯಾಗಿದ್ದರೆ ಡಿಸೆಂಬರ್ 31, 2022ರವರೆಗೆ 539 ಮಂದಿ ಫಾಸಿ ಶಿಕ್ಷೆಗೆ ತುತ್ತಾಗಿದ್ದರು. ಹೀಗೆ ಒಂದು ವರ್ಷದ ಅವಧಿಯಲ್ಲಿ ಮರಣದಂಡನೆಗೆ ತುತ್ತಾದ ಕೈದಿಗಳ ಸಂಖ್ಯೆಯಲ್ಲಿ ಶೇ 10ರಷ್ಟು ಹೆಚ್ಚಳವಾಗಿದೆ.
ಪ್ರಾಜೆಕ್ಟ್ 39ಎ 2021ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಮರಣ ದಂಡನೆಗೆ ಗುರಿಯಾದ ಶೇ 62% ವ್ಯಕ್ತಿಗಳು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಸಂದರ್ಶನ ನಡೆಸಲಾದ ಗಲ್ಲುಶಿಕ್ಷೆಗೊಳಗಾದ 83 ಕೈದಿಗಳಲ್ಲಿ 9 ಮಂದಿ ಬೌದ್ಧಿಕ ಅಸಾಮರ್ಥ್ಯದಿಂದ ಬಳಲುತ್ತಿದ್ದು ಅವರಲ್ಲಿ ಮೂವರ ಕ್ಷಮಾದಾನ ಅರ್ಜಿಗಳನ್ನು ಈಗಾಗಲೇ ತಿರಸ್ಕರಿಸಲಾಗಿದೆ. ಶೇ 75ಕ್ಕಿಂತಲೂ ಹೆಚ್ಚು ಕೈದಿಗಳ ಬೌದ್ಧಿಕ ಕಾರ್ಯಚಟುವಟಿಕೆಯಲ್ಲಿ ನ್ಯೂನತೆ ಇರುವುದು ಕಂಡುಬಂದಿದೆ.
ಮತ್ತೊಂದು ನಿರ್ಣಾಯಕ ಅಂಶವೆಂದರೆ ಮರಣದಂಡನೆಗೆ ಒಳಗಾದ ಕೈದಿಗಳಲ್ಲಿ ಆತ್ಮಹತ್ಯೆಯ ಕಲ್ಪನೆಯ ಪ್ರಮಾಣ, 13.8% ರಷ್ಟಿದೆ. 8 ಕೈದಿಗಳು ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರಲ್ಲಿ 94% ಮಂದಿ ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
ಜಾಗತಿಕವಾಗಿ ಬಹುತೇಕ ದೇಶಗಳು ಮರಣದಂಡನೆಯನ್ನು ರದ್ದುಪಡಿಸಿವೆ. ಜುಲೈ 2023 ರ ಹೊತ್ತಿಗೆ, 112 ದೇಶಗಳಲ್ಲಿ ಗಲ್ಲುಶಿಕ್ಷೆಯು ಜಾರಿಯಲ್ಲಿಲ್ಲ. ಕೇವಲ 55 ದೇಶಗಳಲ್ಲಿ ಮಾತ್ರ ಇದು ಅಸ್ತಿತ್ವದಲ್ಲಿದೆ.
ಕೆಲವು ದೇಶಗಳು ಅಸಾಧಾರಣ ಅಪರಾಧಗಳಿಗೆ ಮರಣದಂಡನೆ ವಿಧಿಸುತ್ತಿವೆ ಅಥವಾ ಮರಣದಂಡನೆಯನ್ನು ಉಳಿಸಿಕೊಂಡಿದ್ದರೂ ಒಂದು ದಶಕದಿಂದ ಯಾರನ್ನೂ ನೇಣಿಗೇರಿಸಿಲ್ಲ.
2022 ರಲ್ಲಿ, ಕೇವಲ 20 ದೇಶಗಳು ಮರಣದಂಡನೆ ವಿಧಿಸಿವೆ. ಅಮೆರಿಕದಲ್ಲಿ ಬೌದ್ಧಿಕ ಅಸಾಮರ್ಥ್ಯ ಹೊಂದಿದವರಿಗೆ ಮರಣದಂಡನೆ ವಿಧಿಸುವುದನ್ನು ನಿಷೇಧಿಸಲಾಗಿದೆ.
ಶತ್ರುಘ್ನ ಚೌಹಾಣ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯ ಶಿಕ್ಷೆಯ ನಂತರದ ಮಾನಸಿಕ ಅಸ್ವಸ್ಥತೆಯ ಆಕ್ರಮಣವು ಮೇಲ್ವಿಚಾರಣಾ ಅಂಶವಾಗಿದ್ದು ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸುವುದನ್ನು ಸಮರ್ಥಿಸಿದೆ.
ಎಲ್ಲಾ ಮರಣದಂಡನೆ ಕೈದಿಗಳ ನಿಯಮಿತ ಮಾನಸಿಕ ಆರೋಗ್ಯ ಪರಾಮರ್ಶೆ ಮತ್ತು ಅಗತ್ಯವಿರುವವರಿಗೆ ಸೂಕ್ತ ವೈದ್ಯಕೀಯ ಆರೈಕೆಯ ಅಗತ್ಯವನ್ನು ಸಹ ಉನ್ನತ ನ್ಯಾಯಾಲಯ ಒತ್ತಿಹೇಳಿತು.
ಹೆಸರು ಉಲ್ಲೇಖಿಸದ ಆರೋಪಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಿನ ಪ್ರಕರಣದಲ್ಲಿ 2019ರಲ್ಲಿ ಖೈದಿಯ ಮರಣದಂಡನೆ ಬದಲಾಯಿಸಲು ತೀವ್ರವಾದ ಮಾನಸಿಕ ಅಸ್ವಸ್ಥತೆ ಮತ್ತು ದೀರ್ಘಾವಧಿಯ ಸೆರೆವಾಸವನ್ನು ಸಂಬಂಧಿತ ಅಂಶಗಳಾಗಿ ಭಾರತದ ಸುಪ್ರೀಂ ಕೋರ್ಟ್ ಪರಿಗಣಿಸಿದೆ.