ಕೃತಕ ಬುದ್ಧಿಮತ್ತೆಯಿಂದ ಚಾಲಕರು ನಿರುದ್ಯೋಗಿಗಳಾಗಬಹುದು: ಸುಪ್ರೀಂ ಕೋರ್ಟ್ ಆತಂಕ

ಎಲೆಕ್ಟ್ರಿಕ್ ವಾಹನಗಳ ಖರೀದಿ ಮತ್ತು ಬಳಕೆ ಉತ್ತೇಜಿಸುವ ಗುರಿ ಹೊಂದಿರುವ ಸರ್ಕಾರದ ನೀತಿಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವಂತೆ ಕೋರಿ ಸಲ್ಲಿಸಲಾದ ಪಿಐಎಲ್ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
Vehicle
Vehicle
Published on

ಚಾಲಕರ ಬದಲಿಗೆ ವಾಹನಗಳನ್ನು ಕೃತಕ ಬುದ್ಧಿಮತ್ತೆಯೇ (ಎಐ) ನಡೆಸುವಂತಾಗಿ ಅನೇಕ ಚಾಲಕರು ಉದ್ಯೋಗ ವಂಚಿತರಾಗಬಹುದು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಕಳವಳ ವ್ಯಕ್ತಪಡಿಸಿದೆ.

ಎಲೆಕ್ಟ್ರಿಕ್ ವಾಹನಗಳ ಖರೀದಿ ಮತ್ತು ಬಳಕೆ ಉತ್ತೇಜಿಸುವ ಗುರಿ ಹೊಂದಿರುವ ಸರ್ಕಾರದ ನೀತಿಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವಂತೆ ಕೋರಿ ಸಲ್ಲಿಸಲಾದ ಪಿಐಎಲ್ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಈ ವಿಚಾರ ತಿಳಿಸಿತು.

Also Read
'ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚುವ ಎಐ ತಂತ್ರಾಂಶ ಇದೆಯೇ?' ಪೊಲೀಸರಿಗೆ ದೆಹಲಿ ಹೈಕೋರ್ಟ್ ಪ್ರಶ್ನೆ

ಚಾಲಕರ ಉದ್ಯೋಗದ ಮೇಲೆ ಎಐ ಪರಿಣಾಮ ಬೀರಬಹುದು ಎಂದು ಕಳವಳ ವ್ಯಕ್ತಪಡಿಸಿದ ನ್ಯಾ. ಸೂರ್ಯಕಾಂತ್‌ ಭಾರತದಲ್ಲಿ ಚಾಲಕ ವೃತ್ತಿ ಎಂಬುದು ನೌಕರಿಯ ಬಹುದೊಡ್ಡ ಮೂಲವಾಗಿದೆ ಎಂದು ತಿಳಿಸಿದರು.

ಇದೇ ವೇಳೆ ವಕೀಲರು ಕೂಡ ಎಐನಿಂದ ಸ್ಪರ್ಧೆ ಎದುರಿಸಬೇಕಾದೀತು. ಅಮೆರಿಕದಲ್ಲಿ ಎಐ ತಂತ್ರಜ್ಞಾನ ಆಧರಿಸಿ ವಾದ ಮಂಡಿಸಲಾಗಿದೆ ಎಂದು ಲಘುಧಾಟಿಯಲ್ಲಿ ಅವರು ಎಚ್ಚರಿಕೆ ನೀಡಿದರು.

ಸೆಂಟರ್‌ ಫಾರ್‌ ಪಬ್ಲಿಕ್‌ ಇಂಟರೆಸ್ಟ್‌ ಲಿಟಿಗೇಷನ್‌ (ಸಿಪಿಐಲ್‌) ಈ ಅರ್ಜಿ ಸಲ್ಲಿಸಿತ್ತು.  ಸಂಘಟನೆ ಪರವಾಗಿ ವಕೀಲ ಪ್ರಶಾಂತ್‌ ಭೂಷಣ್‌ ವಾದ ಮಂಡಿಸಿದರು. ಪರಿಸರ ಮಾಲಿನ್ಯ ನಿಯಂತ್ರಿಸುವಲ್ಲಿ ವಿದ್ಯುತ್‌ ವಾಹನಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಅವರು ವಿಶ್ವದ  ಒಟ್ಟು 15 ಅತ್ಯಂತ ಕಲುಷಿತ ನಗರಗಳಲ್ಲಿ 14 ಭಾರತದಲ್ಲೇ ಇವೆ ಎಂದರು. "ಸರ್ಕಾರ ತನ್ನದೇ ಆದ ನೀತಿಯನ್ನು ಜಾರಿಗೆ ತರಬೇಕು ಎಂಬುದು ನನ್ನ ಆಶಯ " ಎಂದು ಅವರು ಹೇಳಿದರು.

Also Read
ಕಾನೂನು ಸುವ್ಯವಸ್ಥೆ ಪಾಲನೆಗೆ ಎಐ ಬಳಕೆ ಮಾಡಿದರೆ ಸಮಾಜದಂಚಿನಲ್ಲಿರುವವರು ಅದಕ್ಕೆ ಗುರಿಯಾಗಬಹುದು: ಸಿಜೆಐ

ಆದರೆ, ಸರ್ಕಾರ ಮಾತ್ರವಲ್ಲ, ಇತರ ಸಂಸ್ಥೆಗಳು ಸಹ ಮುಂದೆ ಬರಬೇಕು ಎಂದು ನ್ಯಾಯಾಲಯ ಹೇಳಿತು. ಸರ್ಕಾರ ಮೂಲಭೂತ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಭೂಷಣ್ ಪ್ರತಿಕ್ರಿಯಿಸಿದರು. 400 ಕಿ.ಮೀ ದೂರ ಕ್ರಮಿಸಿದ ಬಳಿಕವೇ ಚಾರ್ಜಿಂಗ್ ಪಾಯಿಂಟ್‌ಗಳು ಲಭಿಸುತ್ತಿರುವಂತಹ ಸಂಗತಿಗಳನ್ನು ಅವರು ಎತ್ತಿ ತೋರಿಸಿದರು.

ವಿದ್ಯುತ್‌ ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಕಾಲಕಾಲಕ್ಕೆ ತೆಗೆದುಕೊಂಡ ನೀತಿನಿರ್ಧಾರಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲು ಸಮಯ ನೀಡುವಂತೆ ಸರ್ಕಾರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ (ಎಜಿ) ಆರ್‌ ವೆಂಕಟರಮಣಿ ಇಂದು ಕೋರಿದರು. ನ್ಯಾಯಾಲಯವು ಪ್ರಕರಣವನ್ನು ಮೇ 14ಕ್ಕೆ ಪಟ್ಟಿ ಮಾಡಿತು.

Kannada Bar & Bench
kannada.barandbench.com