ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ವಿರುದ್ಧ ಪ್ರಕರಣ ದಾಖಲಿಸಿದ ಸಾಹಿತಿ ಕೆ ಎಸ್‌ ಭಗವಾನ್ ‌

ʼಬುದ್ಧಿಜೀವಿ ಧರ್ಮವಿರೋಧಿ ಪ್ರೊ. ಭಗವಾನ್ ಇಂದು ಕೋರ್ಟ್ ಕಟಕಟೆಗೆ ಹಾಜರಾಗಿ ಜಾಮೀನು ಪಡೆದುಕೊಂಡರು. ಅವರಿಗೆ ಮಸಿ ಬಳಿದು ತಕ್ಕ ಶಾಸ್ತಿ ಮಾಡಿದ್ದೇನೆʼ ಎಂದು ಮೀರಾ ರಾಘವೇಂದ್ರ ಹೇಳಿಕೊಂಡಿದ್ದಾರೆ.
K S Bhagavan
K S BhagavanThe new Indian Express

ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಗೆ ಗ್ರಾಸವಾಗುತ್ತಿದ್ದ ಸಾಹಿತಿ ಪೊ ಕೆ ಎಸ್‌ ಭಗವಾನ್‌ ಅವರಿಗೆ ವಕೀಲೆಯೊಬ್ಬರು ಗುರುವಾರ ಮಸಿ ಬಳಿದಿದ್ದಾರೆ. ಇದೇ ವೇಳೆ ಕೃತ್ಯ ಎಸಗಿದ ವಕೀಲೆ ಮೀರಾ ರಾಘವೇಂದ್ರ ಅವರ ವಿರುದ್ಧ ಭಗವಾನ್‌ ಅವರು ಬೆಂಗಳೂರಿನ ಪೊಲೀಸ್‌ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದಾರೆ.

ʼಹಿಂದೂ ಧರ್ಮವೆಂಬುದೇ ಇಲ್ಲ ಹಿಂದೂ ಧರ್ಮ ಅವಮಾನಕರ, ಮಾನ ಮರ್ಯಾದೆ ಇರುವವರು ಹಿಂದೂ ಶಬ್ದ ಬಳಸಬಾರದುʼ ಎಂದು ಕಳೆದ ಅಕ್ಟೋಬರ್‌ನಲ್ಲಿ ಭಗವಾನ್‌ ಅವರು ನೀಡಿದ್ದ ಹೇಳಿಕೆಯನ್ನು ಪ್ರಶ್ನಿಸಿ ವಕೀಲೆ ಮೀರಾ ರಾಘವೇಂದ್ರ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಇದೇ ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಭಗವಾನ್‌ ಅವರಿಗೆ ಕೋರ್ಟ್‌ ಸೂಚಿಸಿತ್ತು. ಮೈಸೂರಿನಲ್ಲಿ ವಾಸವಿರುವ ಭಗವಾನ್‌ ವಿಚಾರಣೆ ನಿಮಿತ್ತ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಲಯದಿಂದ ಅವರಿಗೆ ಜಾಮೀನು ಕೂಡ ದೊರೆತಿತ್ತು.

ವಿಚಾರಣೆ ಮುಗಿಸಿ ಹೊರಬರುತ್ತಿದ್ದಂತೆ ಮೀರಾ ಭಗವಾನ್‌ ಅವರ ಮುಖಕ್ಕೆ ಮಸಿ ಬಳಿದರು. ಬಳಿಕ ಸ್ಥಳದಲ್ಲಿಯೇ ಇದ್ದ ಕೆಲ ವಕೀಲರು, ಪೊಲೀಸರು ಭಗವಾನ್‌ ಅವರನ್ನು ಬೇರೆಡೆಗೆ ಕರೆದೊಯ್ದರು. ಈ ವೇಳೆ ಭಗವಾನ್‌ ವಿರುದ್ಧ ಹರಿಹಾಯ್ದ ಮೀರಾ “ನನ್ನನ್ನು ಬಂಧಿಸಿ ಏನು ಬೇಕಾದರೂ ಮಾಡಿ. ಐಯಾಂ ರೆಡಿ ಫಾರ್‌ ಎವೆರಿ ಥಿಂಗ್‌. (ನಾನು ಎಲ್ಲಕ್ಕೂ ಸಿದ್ಧಳಾಗಿದ್ದೇನೆ). ನಾನು ಜೈಲಿಗೆ ಹೋಗಲು ಕೂಡ ರೆಡಿ. ಏನ್ಸಾರ್‌ ಇಷ್ಟು ವಯಸ್ಸಾಗಿದೆ. ಇನ್ನೂ ದೇವರ ಬಗ್ಗೆ ರಾಮನ ಬಗ್ಗೆ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತೀರಿ ನಾಚಿಕೆಯಾಗುವುದಿಲ್ಲವೇ ನಿಮಗೆ” ಎಂದಿದ್ದರು. ಅವರು ಮಸಿ ಬಳಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಘಟನೆ ಬಗ್ಗೆ ಟ್ವೀಟ್‌ ಕೂಡ ಮಾಡಿರುವ ಮೀರಾ ಭಗವಾನ್‌ ಅವರಿಗೆ ಮಸಿ ಬಳಿದು ತಕ್ಕ ಶಾಸ್ತಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಮೀರಾ ವಿರುದ್ಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಪ್ರೊ ಭಗವಾನ್‌ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ವಕೀಲ ಸಮುದಾಯದ ಕೆಲವರು ಘಟನೆಯನ್ನು ಖಂಡಿಸಿದ್ದಾರೆ. “ನ್ಯಾಯದೇಗುಲದಲ್ಲಿ ಪ್ರಕರಣ ನಡೆಯಬಾರದಿತ್ತು. ಏನೇ ಇದ್ದರೂ ಕಾನೂನಿನ ಚೌಕಟ್ಟಿನಡಿ ಬಗೆಹರಿಸಿಕೊಳ್ಳಬೇಕು. ಇದು ಕ್ಷಮೆ ಕೋರಬೇಕಾದ ಘಟನೆ” ಎಂದು ಫೇಸ್‌ಬುಕ್‌ ಲೈವ್‌ನಲ್ಲಿ ನ್ಯಾಯವಾದಿ ಜಗದೀಶ್‌ ಕೆ ಎನ್‌ ಮಹದೇವ್‌ ತಿಳಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com