ಖಾತೆ ನಿರ್ಬಂಧ ಆದೇಶಕ್ಕೆ ಕಾರಣಗಳನ್ನು ಎಕ್ಸ್‌ ಕಾರ್ಪ್‌ ನೋಡುವ ಅಗತ್ಯವಿಲ್ಲ: ಹೈಕೋರ್ಟ್‌ನಲ್ಲಿ ಕೇಂದ್ರದ ವಾದ

ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರವು 2021ರ ಫೆಬ್ರವರಿ ಮತ್ತು 2022ರ ಅವಧಿಯಲ್ಲಿ ಮಾಡಿದ್ದ ಆದೇಶಗಳನ್ನು ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿರುವ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಕ್ಸ್‌ ಕಾರ್ಪ್‌ ಮೇಲ್ಮನವಿ ಸಲ್ಲಿಸಿದೆ.
Twitter logo and Karnataka High Court
Twitter logo and Karnataka High Court
Published on

ಎಕ್ಸ್‌ ಕಾರ್ಪ್‌ ಕೇವಲ ಮಧ್ಯಸ್ಥಿಕೆ ಸಂಸ್ಥೆಯಾಗಿರುವುದರಿಂದ ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರವು 2021ರ ಫೆಬ್ರವರಿ ಮತ್ತು 2022ರ ಅವಧಿಯಲ್ಲಿ ಮಾಡಿದ್ದ ಆದೇಶಗಳನ್ನು ಎತ್ತಿ ಹಿಡಿದಿದ್ದ ಪರಿಶೀಲನಾ ಸಮಿತಿಯ ಆದೇಶಗಳನ್ನು ಕೋರಲಾಗದು ಎಂದು ಕರ್ನಾಟಕ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.

ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರವು 2021ರ ಫೆಬ್ರವರಿ ಮತ್ತು 2022ರ ಅವಧಿಯಲ್ಲಿ ಮಾಡಿದ್ದ ಆದೇಶಗಳನ್ನು ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿರುವ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಕ್ಸ್‌ ಕಾರ್ಪ್‌ (ಟ್ವಿಟರ್‌) ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಕಾಮೇಶ್ವರ ರಾವ್‌ ಮತ್ತು ಕೆ ರಾಜೇಶ್‌ ರೈ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ್‌ ಕಾಮತ್‌ ಅವರು “ನಿರ್ಬಂಧಿತ ಖಾತೆ ಮತ್ತು ಅವುಗಳಲ್ಲಿನ ಮಾಹಿತಿಯನ್ನು ಎಕ್ಸ್‌ ಬರೆದಿಲ್ಲ. ಹೀಗಾಗಿ, ಕೇಂದ್ರದ ಆದೇಶದ ವಿರುದ್ಧ ಅಹವಾಲು ಹೊಂದಲು ತನಗೆ ಇರುವ ಹಕ್ಕನ್ನು ಎಕ್ಸ್‌ ಕಾರ್ಪ್‌ ನ್ಯಾಯಾಲಯಕ್ಕೆ ತೋರಿಸಬೇಕು" ಎಂದರು.

"ಎಕ್ಸ್‌ ಕಾರ್ಪ್‌ ಪರಿಶೀಲನಾ ಕಡತವನ್ನು ಏಕೆ ನೋಡಬೇಕು? ಅದು ಮಧ್ಯಸ್ಥಿಕೆ ಸಂಸ್ಥೆ ಮಾತ್ರ. ಕೆಲವು ಖಾತೆಗಳನ್ನು ನಿರ್ಬಂಧಿಸಿದರೆ ಎಕ್ಸ್‌ ಕಾರ್ಪ್‌ಗೆ ಸಮಸ್ಯೆ ಏನು? ನೆರಯ ರಾಷ್ಟ್ರಗಳಿಂದ ಆ ಸಂದರ್ಭದಲ್ಲಿ ಕೆಲವು ನಕಲಿ ಟ್ವೀಟ್‌ಗಳನ್ನು ಮಾಡಿದ್ದರಿಂದ ಕೆಲವು ಖಾತೆಗಳನ್ನು ನಿರ್ಬಂಧಿಸಲು ಆದೇಶ ಮಾಡಲಾಗಿತ್ತು” ಎಂದರು.

ಎಕ್ಸ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಜನ್‌ ಪೂವಯ್ಯ ಅವರು “ಕೆಲವು ಖಾತೆಗಳನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದ್ದರಿಂದ ಪರಿಶೀಲನಾ ಸಮಿತಿಯ ಆದೇಶವನ್ನು ನೋಡುವ ಹಕ್ಕು ಎಕ್ಸ್‌ ಕಾರ್ಪ್‌ಗಿದೆ. ಕೇಂದ್ರ ಸರ್ಕಾರದ ಆದೇಶವನ್ನು ಪಾಲಿಸಿದಿದ್ದರೆ ದಂಡನೆಯನ್ನು ಎಕ್ಸ್‌ ಕಾರ್ಪ್‌ ಎದುರಿಸಬೇಕಿದೆ. ಹೀಗಾಗಿ, ನಿರ್ಬಂಧ ಆದೇಶವನ್ನು ಏಕೆ ಮಾಡಲಾಗಿದೆ ಎಂಬುದನ್ನು ಅರಿಯುವ ಹಕ್ಕು ಎಕ್ಸ್‌ ಕಾರ್ಪ್‌ಗೆ ಇದೆ" ಎಂದು ವಾದಿಸಿದರು.

Also Read
ಟ್ವೀಟ್‌ ನಿರ್ಬಂಧ ಎತ್ತಿ ಹಿಡಿದಿರುವ ಪರಿಶೀಲನಾ ಸಮಿತಿ ಆದೇಶ ಅತಿ ಗೌಪ್ಯ ಎಂದು ಕೇಂದ್ರ ಹೇಳಲಾಗದು: ಎಕ್ಸ್‌ ಕಾರ್ಪ್‌

“ಎಕ್ಸ್‌ ಕಾರ್ಪ್‌ ಕಾರ್ಪೊರೆಟ್ ಸಂಸ್ಥೆಯಾದರೂ ನ್ಯಾಯಾಲದಯ ರಿಟ್‌ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸುವ ಹಕ್ಕು ಇದೆ ಎಂದು ಏಕಸದಸ್ಯ ಪೀಠ ಹೇಳಿದೆ. ಕೆಲವು ಬಳಕೆದಾರರು ಮಾಡಿರುವ ಟ್ವೀಟ್‌ ತೆಗೆಯುವಂತೆ ನಮಗೆ ಆದೇಶ ಮಾಡಿದರೆ ಅದನ್ನು ಏಕೆ ತೆಗೆಯಬೇಕು ಎಂಬುದಕ್ಕೆ ಕಾರಣ ತಿಳಿದುಕೊಳ್ಳಬೇಕಿದೆ. ಏಕೆಂದರೆ ಕಾನೂನಿನ ಅಡಿ ಅದರ ಪರಿಣಾಮವನ್ನು ನಾವು ಎದುರಿಸಬೇಕಾಗುತ್ತದೆ. ಒಂದೊಮ್ಮೆ ಕೇಂದ್ರ ಸರ್ಕಾರದ ಸೂಚನೆಯಂತೆ ಆ ಟ್ವೀಟ್‌ ತೆಗೆಯದಿದ್ದರೆ ನಮಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲು ಹೊಸ ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ” ಎಂದರು.

ಅಂತಿಮವಾಗಿ ಪೀಠವು ಪರಿಶೀಲನಾ ಸಮಿತಿಯ ಆದೇಶಗಳನ್ನು ಪಡೆಯಲು ಎಕ್ಸ್‌ ಕಾರ್ಪ್‌ಗೆ ಹಕ್ಕು ಇದೆಯೇ ಎಂಬುದರ ಊರ್ಜಿತತ್ವವನ್ನು ಪರಿಗಣಿಸುವುದಾಗಿ ಹೇಳಿ, ವಿಚಾರಣೆಯನ್ನು ನವೆಂಬರ್‌ 12ಕ್ಕೆ ಮುಂದೂಡಿತು.

Kannada Bar & Bench
kannada.barandbench.com