ಬಿಬಿಎಂಪಿಗೆ ತಾಜ್ಯ ನಿರ್ವಹಣಾ ಘಟಕ ನಿರ್ಮಿಸಲು ರಾಮನಗರ ತಾಲ್ಲೂಕಿನ ಕೊಡಿಯಾಲ ಗ್ರಾಮದಲ್ಲಿನ ಭೂಮಿ ವಶಕ್ಕೆ ಪಡೆಯುವ ಸಂಬಂಧ ವರ್ಗಾವಣೆ ಅಭಿವೃದ್ಧಿ ಹಕ್ಕು (ಟಿಡಿಆರ್) ನೀಡಿರುವುದನ್ನು ಪ್ರಶ್ನಿಸಿ ಬಿಜೆಪಿ ನಾಯಕ ಎನ್ ಆರ್ ರಮೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡಿರುವ ಕರ್ನಾಟಕ ಹೈಕೋರ್ಟ್ ಅವರಿಗೆ ₹10 ಸಾವಿರ ದಂಡ ವಿಧಿಸಿದೆ.
ಬಿಬಿಎಂಪಿಗೆ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸುವುದಕ್ಕಾಗಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಕೊಡಿಯಾಲ ಗ್ರಾಮದ ನಿರ್ದಿಷ್ಟ ಸರ್ವೇ ನಂಬರ್‌ನ ಭೂ ಸ್ವಾಧೀನ ಮಾಡಿಕೊಳ್ಳಲು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು 03.01.2013ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ಎನ್ ಆರ್ ರಮೇಶ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಜಾ ಮಾಡಿದೆ.
“ವಿಶೇಷ ಕಾರಣಕ್ಕಾಗಿ ಷರತ್ತುಗಳಲ್ಲಿ ವಿನಾಯಿತಿ ಕಲ್ಪಿಸಿ ರಾಜ್ಯ ಸರ್ಕಾರವು 03.01.2013ರಲ್ಲಿ ಆದೇಶ ಮಾಡಿದೆ. ಈ ಸಂಬಂಧ ಟಿಡಿಆರ್ ನೀಡಲಾಗಿದೆ. 11 ವರ್ಷ ತಡವಾಗಿ ರಮೇಶ್ ಅವರು ಪಿಐಎಲ್ ಸಲ್ಲಿಸಿರುವುದರ ಹಿಂದೆ ಪ್ರಾಮಾಣಿಕತೆ ಕಾಣುತ್ತಿಲ್ಲ. ಅರ್ಜಿಯಲ್ಲಿ 11 ವರ್ಷ ತಡವಾಗಿರುವುದಕ್ಕೆ ಚಕಾರವೆತ್ತಿಲ್ಲ. ಇಂಥ ಸಂದರ್ಭದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲದ ನಂತರ ಸಲ್ಲಿಸುವ ಪಿಐಎಲ್ ಅನ್ನು ಪರಿಗಣಿಸುವುದಿಲ್ಲ. ಅರ್ಜಿಯಲ್ಲಿ ಯಾವುದೇ ಅರ್ಹತೆ ಕಾಣುತ್ತಿಲ್ಲ” ಎಂದು ನ್ಯಾಯಾಲಯ ಹೇಳಿದೆ.
“ಬಿಬಿಎಂಪಿ ಸೇರಿದಂತೆ ಪ್ರತಿವಾದಿಗಳ ಪರವಾಗಿ ಸ್ವಯಂಪ್ರೇರಿತವಾಗಿ ಹಾಜರಾಗಿದ್ದ ವಕೀಲ ಎನ್ ಆರ್ ಜಗದೀಶ್ವರ ಅವರು ವಾದ ಮಂಡಿಸಿದ್ದಾರೆ. ರಾಜ್ಯ ಸರ್ಕಾರದ ನಿಲುವಿಗೆ ವಿರುದ್ಧವಾಗಿ ಅವರು ವಾದ ಮಂಡಿಸಿದ್ದಾರೆ. ಈ ನೆಲೆಯಲ್ಲಿ ಇದು ಸಾರ್ವಜನಿಕ ಹಿತಾಸಕ್ತಿ ವ್ಯಾಪ್ತಿಯನ್ನು ಜಂಟಿಯಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಯತ್ನದಂತೆ ಭಾಸವಾಗುತ್ತಿದೆ. ನೋಟಿಸ್ ನೀಡದೆಯೇ ವಿಚಾರಣೆಯಲ್ಲಿ ಬಿಬಿಎಂಪಿ ಭಾಗಿಯಾಗಿ ನಿಲುವು ಕೈಗೊಂಡಿರುವುದು ಮತ್ತು ವಿಸ್ತೃತವಾಗಿ ವಾದಿಸುತ್ತಿರುವುದು, ರಾಜ್ಯ ಸರ್ಕಾರದ ನಿಲುವಿಗೆ ವಿರುದ್ಧವಾದ ನಿಲುವು ಕೈಗೊಂಡಿರುವುದು ಅರ್ಥವಾಗುತ್ತಿಲ್ಲ. ಇಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿರುವುದೂ ಬಿಬಿಎಂಪಿಯೇ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಈ ಬೆಳವಣಿಗೆಗೆ ಪ್ರಬಲವಾದ ಅಸಮ್ಮತಿ ದಾಖಲಿಸಿರುವ ಪೀಠವು ಅರ್ಜಿಯನ್ನು ವಜಾ ಮಾಡಿ, ರಮೇಶ್ ಅವರಿಗೆ ₹10 ಸಾವಿರ ದಂಡವನ್ನು 15 ದಿನಗಳಲ್ಲಿ ಹೈಕೋರ್ಟ್ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದು ನಿರ್ದೇಶಿಸಿದೆ.
ಇದಕ್ಕೂ ಮುನ್ನ, ಎನ್ ಆರ್ ರಮೇಶ್ ಪ್ರತಿನಿಧಿಸಿದ್ದ ವಕೀಲ ಡಿ ಅಶ್ವತ್ಥಪ್ಪ ಅವರು “ಬೆಂಗಳೂರಿನ ಮೆಸರ್ಸ್ ವೆಂಕಟೇಶ್ವರ ಡೆವಲಪರ್ಸ್‌ನ ಪ್ರವೀಣ್ ಶಾ, ಬಾಲಾಜಿ ಇನ್ಪ್ರಾಸ್ಟ್ರಕ್ಚರ್ ಅಂಡ್ ಡೆವಲಪರ್ಸ್‌ನ ವಿಕ್ರಮ್ ಓಸ್ವಾಲ್, ಸಿ ತಿಮ್ಮಯ್ಯ, ಟಿ ಸಿ ಮರಿರಾಜು ಅವರಿಗೆ ಕಾನೂನುಬಾಹಿರವಾಗಿ ಟಿಡಿಆರ್ ನೀಡುವ ಮೂಲಕ ಪ್ರತಿವಾದಿಗಳು ತೆರಿಗೆದಾರರು ಮತ್ತು ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ. 2013ರಲ್ಲಿ ಟಿಡಿಆರ್ ನೀಡುವ ಮೂಲಕ ಭ್ರಷ್ಟಾಚಾರಕ್ಕೆ ನಾಂದಿ ಹಾಡಿದ್ದು, ಇದರಿಂದ ಕೆಲವು ಖಾಸಗಿ ವ್ಯಕ್ತಿಗಳಿಗೆ ಲಾಭವಾಗಿದೆ” ಎಂದು ಆಕ್ಷೇಪಿಸಿದ್ದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸರ್ಕಾರಿ ವಕೀಲೆ ನಿಲೋಫರ್ ಅಕ್ಬರ್ ಅವರು “ಬೆಂಗಳೂರು ತೀವ್ರ ಗತಿಯಲ್ಲಿ ಬೆಳವಣಿಗೆ ಕಾಣುತ್ತಿರುವ ಸಂದರ್ಭದಲ್ಲಿ 18.01.2006ರ ಅಧಿಸೂಚನೆಯ ಷರತ್ತಿನಲ್ಲಿ ವಿನಾಯಿತಿ ಕಲ್ಪಿಸಲಾಗಿದೆ. ನಗರದ ಅಭಿವೃದ್ಧಿಯ ವೇಗಕ್ಕೆ ಅನುಗುಣವಾಗಿ ಟಿಡಿಆರ್ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿತ್ತು. ಅದರಲ್ಲೂ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸುವ ವಿಶೇಷ ಕಾರ್ಯಕ್ಕಾಗಿ ಹಾಗೆ ಮಾಡಲಾಗಿದೆ. 3.01.2013ರ ಆದೇಶದ ಮೂಲಕ ಕೆಲವು ಷರತ್ತುಗಳನ್ನು ಜಾರಿಗೊಳಿಸಲಾಗಿದೆ” ಎಂದರು.
ಅಲ್ಲದೇ, “ಅರ್ಜಿದಾರ ರಮೇಶ್ ಅವರು ಬಿಜೆಪಿಯ ನಾಯಕರಾಗಿದ್ದು, ಬಿಬಿಎಂಪಿ ಸದಸ್ಯರೂ ಆಗಿದ್ದರು. ತಾವು ಬಿಬಿಎಂಪಿ ಸದಸ್ಯರಾಗಿದ್ದಾಗ ಈ ವಿಚಾರ ಎತ್ತಿಲ್ಲ. ಈಗ ಯಾವ ಕಾರಣಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆಯೋ ತಿಳಿಯದಾಗಿದೆ” ಎಂದಿದ್ದರು.