ಯೋಗೀಶ್‌ಗೌಡ ಕೊಲೆ ಪ್ರಕರಣ: ಮರು ವಿಚಾರಣೆಯ ತೀರ್ಪು ಪ್ರಶ್ನಿಸಿದ್ದ ಅರ್ಜಿಯ ಕುರಿತ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಪ್ರಕರಣದಲ್ಲಿ 1–6ನೇ ಆರೋಪಿಗಳ ಬಗ್ಗೆ ಅಂದಿನ ಸರ್ಕಾರ ಆರೋಪ ಪಟ್ಟಿ ಸಲ್ಲಿಸಿತ್ತು. ಇದರಲ್ಲಿ ಶಾಸಕ ಕುಲಕರ್ಣಿ ಹೆಸರು ಕೈಬಿಡಲಾಗಿತ್ತು. ಆದರೆ, ನಂತರ ಸಿಬಿಐ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ 7–21ರವರೆಗೆ ಹೊಸ ಆರೋಪಿಗಳನ್ನು ಸೇರ್ಪಡೆ ಮಾಡಲಾಗಿದೆ.
Vinay Kulkarni and Karnataka HC
Vinay Kulkarni and Karnataka HC
Published on

ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ವಿಚಾರಣೆ ನಡೆಯಬೇಕು ಎಂಬ ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಲಾದ ಎರಡು ಅರ್ಜಿಗಳ ಮೇಲಿನ ತೀರ್ಪನ್ನು ಕರ್ನಾಟಕ ಹೈಕೋರ್ಟ್‌ ಕಾಯ್ದಿರಿಸಿದೆ.

ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರೋಪಿಗಳಾದ ವಿಕ್ರಂ ಬಳ್ಳಾರಿ, ಕೀರ್ತಿಕುಮಾರ ಬಸವರಾಜ ಕುರಹಟ್ಟಿ, ಸಂದೀಪ್‌ ಸೌದತ್ತಿ, ವಿನಾಯಕ ಕಟಗಿ, ಮಹಾಬಲೇಶ್ವರ ಹೊಂಗಲ್‌ ಅಲಿಯಾಸ್‌ ಮುದುಕ ಹಾಗೂ ಮತ್ತೊಬ್ಬ ಆರೋಪಿ ಬಸವರಾಜ ಮುತ್ತಗಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲರಾದ ಸಿ ವಿ ನಾಗೇಶ್‌ ಅವರು “ಮರು ವಿಚಾರಣೆ ನಡೆಸಿದರೆ ಕಾನೂನು ತೊಡಕು ಉಂಟಾಗುತ್ತದೆ” ಎಂಬ ಅಂಶಗಳ ಕುರಿತು ಪೀಠದ ಗಮನಸೆಳೆದರು.

ಇದನ್ನು ಅಲ್ಲಗಳೆದ ಸಿಬಿಐ ಪರ ವಕೀಲ ಪಿ ಪ್ರಸನ್ನ ಕುಮಾರ್ ಅವರು “ಪ್ರಕರಣದಲ್ಲಿ 1–6ನೇ ಆರೋಪಿಗಳ ಬಗ್ಗೆ ಅಂದಿನ ರಾಜ್ಯ ಸರ್ಕಾರ ಆರೋಪ ಪಟ್ಟಿ ಸಲ್ಲಿಸಿತ್ತು. ಇದರಲ್ಲಿ ಶಾಸಕ ವಿನಯ ಕುಲಕರ್ಣಿ ಹೆಸರು ಕೈಬಿಡಲಾಗಿತ್ತು. ಆದರೆ, ನಂತರ ಸಿಬಿಐ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ 7–21ರವರೆಗೆ ಹೊಸ ಆರೋಪಿಗಳನ್ನು ಸೇರ್ಪಡೆ ಮಾಡಲಾಗಿದೆ. ರಾಜ್ಯ ಸರ್ಕಾರ ನಡೆಸಿದ್ದ ತನಿಖೆಯಲ್ಲಿ ಪ್ರಕರಣವನ್ನೇ ಕಲಸುಮೇಲೋಗರ ಮಾಡಲಾಗಿತ್ತು. ಸಾಕ್ಷಿಗಳಿಗೆ ಬೆದರಿಕೆ ಹಾಕಲಾಗಿತ್ತು. ಐದು ಪ್ರತ್ಯಕ್ಷ ಸಾಕ್ಷಿಗಳನ್ನು ಬೆದರಿಸಿ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಹಾಗಾಗಿ, ಪ್ರಕರಣದ ಮರು ವಿಚಾರಣೆ ಅಗತ್ಯವಿದೆ” ಎಂದು ಪ್ರತಿಪಾದಿಸಿದರು. ವಾದ–ಪ್ರತಿವಾದ ಆಲಿಸಿದ ಪೀಠ ತೀರ್ಪು ಕಾಯ್ದಿರಿಸಿರುವುದಾಗಿ ಪ್ರಕಟಿಸಿತು.

Also Read
ಯೋಗೀಶ್‌ ಗೌಡ ಕೊಲೆ: ಆರೋಪ ನಿಗದಿ, ವಿಚಾರಣೆ ರದ್ದತಿ ಕೋರಿದ್ದ ಶಾಸಕ ವಿನಯ್‌ ಕುಲಕರ್ಣಿ ಅರ್ಜಿ ವಜಾ ಮಾಡಿದ ಹೈಕೋರ್ಟ್‌

ಸಿಆರ್‌ಪಿಸಿ ಸೆಕ್ಷನ್‌ 230 ಮತ್ತು 231ರ ಅನುಸಾರ ಪ್ರಕರಣದ ಮರು ವಿಚಾರಣೆಯನ್ನು ನಿಗದಿಪಡಿಸಿ ಸಿಬಿಐ ವಿಶೇಷ ನ್ಯಾಯಾಲಯ 2024ರ ಜೂನ್‌ 28ರಂದು ಆದೇಶಿಸಿತ್ತು. ಅರ್ಜಿದಾರರು ಇದಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ವಿಶೇಷ ನ್ಯಾಯಾಲಯ ಈ ಅರ್ಜಿ ಪುರಸ್ಕರಿಸಲು ನಿರಾಕರಿಸಿತ್ತು.

ಪ್ರಕರಣದ ಹಿನ್ನೆಲೆ: ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್‌ 15ರಂದು ಯೋಗೀಶ್‌ಗೌಡ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ.

Kannada Bar & Bench
kannada.barandbench.com