
ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್ ಗೌಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮೊದಲ ಆರೋಪಿ ಬಸವರಾಜ ಶಿವಪ್ಪ ಮುತ್ತಗಿ ಮಾಫಿ ಸಾಕ್ಷಿಯಾಗಿರುವುದನ್ನು ಪರಿಗಣಿಸಿದ್ದ ವಿಶೇಷ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.
ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕರೂ ಆದ ವಿನಯ ರಾಜಶೇಖರಪ್ಪ ಕುಲಕರ್ಣಿ ಸೇರಿದಂತೆ ಒಟ್ಟು 17 ಆರೋಪಿಗಳು ಸಲ್ಲಿಸಿದ್ದ ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಪ್ರಕಟಿಸಿದರು.
“ಮಾಫಿ ಸಾಕ್ಷಿಯನ್ನಾಗಿಸಿ, ಸಾಕ್ಷಿ ವಿಚಾರಣೆ ನಡೆಸಲು ಮೊದಲಿಗೆ ಪಾಟಿ ಸವಾಲು ನಡೆಸಬೇಕು. ಹಾಗಾಗಿ, ಈ ಪ್ರಕರಣದಲ್ಲಿ ಆರೋಪಿಯನ್ನು ಮಾಫಿ ಸಾಕ್ಷಿಯನ್ನಾಗಿಸುವುದಕ್ಕೂ ಮೊದಲೇ ಅಪರಾಧ ದಂಡ ಸಂಹಿತೆ–1973ರ (ಸಿಆರ್‌ಪಿಸಿ) ಸೆಕ್ಷನ್ 164ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಿಕೊಂಡಿರುವುದು ಕಾನೂನುಬಾಹಿರ” ಎಂದು ಪೀಠ ಆದೇಶಿಸಿದೆ.
ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಯಲ್ಲಿ ಒಂದೊಮ್ಮೆ ಲೋಪ ಕಂಡು ಬಂದರೆ ಅದನ್ನು ಪ್ರಶ್ನಿಸಬಹುದು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯವು ಈ ಸಂಬಂಧ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯ, ಪ್ರಕರಣದಲ್ಲಿ ಧಾರವಾಡ ತಾಲ್ಲೂಕು ಮನಗುಂಡಿಯ ಬಸವರಾಜ ಶಿವಪ್ಪ ಮುತ್ತಗಿ ಮಾಫಿ ಸಾಕ್ಷಿ ಆಗಿರುವುದನ್ನು ಮಾನ್ಯ ಮಾಡಿ 2024ರ ಅಕ್ಟೋಬರ್ 30ರಂದು ನೀಡಿದ್ದ ಆದೇಶವನ್ನು ರದ್ದುಪಡಿಸಿದೆ.
ವಿನಯ್ ಕುಲಕರ್ಣಿ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಮತ್ತು ಇತರ ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದಿಸಿದ್ದರು. ಈ ಎಲ್ಲಾ ಅರ್ಜಿದಾರರ ಪರವಾಗಿ ವಕೀಲರಾದ ಎನ್ ಗೌರವ್, ಎಸ್ ಸುನಿಲ್ ಕುಮಾರ್, ಡಿ ಎಸ್ ಸುಧನ್ವ, ವಿಪಿನ್ ಕುಮಾರ್ ಜೈನ್ ಮತ್ತು ಸಿ.ಪರಮೇಶ್ವರಪ್ಪ ವಕಾಲತ್ತು ವಹಿಸಿದ್ದರು.
ಪ್ರಕರಣದ ಹಿನ್ನೆಲೆ: ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್ 15ರಂದು ಬಿಜೆಪಿ ಮುಖಂಡ ಯೋಗೀಶ್‌ಗೌಡ ಗೌಡರ್ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ.
ಈ ಪ್ರಕರಣದಲ್ಲಿ ಒಟ್ಟು 21 ಆರೋಪಿಗಳಿದ್ದಾರೆ. ಇವರಲ್ಲಿ 17ನೇ ಆರೋಪಿ ಶಿವಾನಂದ ಬಿರಾದಾರ (ವಿನಯ ಕುಲಕರ್ಣಿ ಅವರ ಮಾವನವರು ನೀಡಿದ್ದಾರೆ ಎನ್ನಲಾದ ಎರಡು ದೇಸಿ ಪಿಸ್ತೂಲ್‌ಗಳನ್ನು ಸಹ ಆರೋಪಿಗಳಿಗೆ ತಲುಪಿಸಿದ್ದಾರೆ ಎಂಬ ಆರೋಪ ಹೊತ್ತಿರುವವರು) ಈಗಾಗಲೇ ಮಾಫಿ ಸಾಕ್ಷಿ ಆಗಿದ್ದಾರೆ. ಬಸವರಾಜ ಮುತ್ತಗಿಯೇ ಹತ್ಯೆಯ ಪ್ರಮುಖ ಆರೋಪಿ. ಹತ್ಯೆ ನಡೆಸಲು ಬೆಂಗಳೂರಿನಿಂದ ಹುಡುಗರನ್ನು ಧಾರವಾಡಕ್ಕೆ ಕರೆಸಿಕೊಂಡಿದ್ದೇ ಬಸವರಾಜ ಮುತ್ತಗಿ ಎಂಬುದು ಸಿಬಿಐ ಪ್ರತಿಪಾದನೆಯಾಗಿದೆ.