ಸರಿಯೋ ತಪ್ಪೋ ಕೊಲಿಜಿಯಂ ಕುರಿತ ಸುಪ್ರೀಂ ತೀರ್ಪಿಗೆ ಬದ್ಧವಾಗಿರಬೇಕು: ಸಚಿವ ರಿಜಿಜುಗೆ ನ್ಯಾ. ನಾರಿಮನ್ ಬುದ್ಧಿವಾದ

ಕಾನೂನು ಸಚಿವರ ಹೇಳಿಕೆಗಳನ್ನು ಬಿರುನುಡಿಗಳೆಂದು ಕರೆದ ನ್ಯಾ. ನಾರಿಮನ್‌ ಅವರು ಸರ್ಕಾರವನ್ನು ಬದ್ಧವಾಗಿಸಿರುವ ಸಾಂವಿಧಾನಿಕ ನಿಬಂಧನೆಗಳನ್ನು ಕಾನೂನು ಸಚಿವರಿಗೆ ನೆನಪಿಸಿದರು.
Retired Justice Rohinton Nariman
Retired Justice Rohinton Nariman

ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ವ್ಯವಸ್ಥೆಯ ವಿರುದ್ಧ ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಅವರು ನೀಡುತ್ತಿರುವ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದರು.

ಕಾನೂನು ಸಚಿವರ ಹೇಳಿಕೆಗಳನ್ನು ʼ'ಬಿರುನುಡಿಗಳೆಂದು' ಕರೆದ ನ್ಯಾಯಮೂರ್ತಿಗಳು ಸರ್ಕಾರವನ್ನು ಸುಪ್ರೀಂ ಕೋರ್ಟ್ ತೀರ್ಪಿಗೆ ಬದ್ಧವಾಗಿಸುವ ಸಾಂವಿಧಾನಿಕ ನಿಬಂಧನೆಗಳನ್ನು ಕಾನೂನು ಸಚಿವರಿಗೆ ನೆನಪಿಸಿದರು.   

ಮುಂಬೈ ವಿಶ್ವವಿದ್ಯಾಲಯದ ಕಾನೂನು ವಿಭಾಗ, ಸುಪ್ರೀಂ ಕೋರ್ಟ್‌ನ ಏಳನೇ ಮುಖ್ಯ ನ್ಯಾಯಮೂರ್ತಿ ಎಂ ಸಿ ಚಾಗ್ಲಾ ಸ್ಮಾರಕ ಟ್ರಸ್ಟ್‌ ಸಹಯೋಗದಲ್ಲಿ ಶುಕ್ರವಾರ ವಿವಿಯ ಫೋರ್ಟ್‌ ಕ್ಯಾಂಪಸ್‌ನಲ್ಲಿ ಹಮ್ಮಿಕೊಂಡಿದ್ದ ನ್ಯಾ. ಚಾಗ್ಲಾ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ 'ಎ ಟೇಲ್ ಆಫ್ ಟು ಕಾನ್ ಸ್ಟಿಟ್ಯೂಷನ್ಸ್- ಇಂಡಿಯಾ ಅಂಡ್‌ ಯುನೈಟೆಡ್ ಸ್ಟೇಟ್ಸ್: ದಿ ಲಾಂಗ್ ಅಂಡ್ ಶಾರ್ಟ್ ಆಫ್ ಇಟ್ ಆಲ್' (ಎರಡು ಸಂವಿಧಾನಗಳ ಕಥೆ - ಭಾರತ ಮತ್ತು ಅಮೆರಿಕ) ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.

ನ್ಯಾ. ನಾರಿಮನ್‌ ಅವರ ಉಪನ್ಯಾಸದ ಪ್ರಮುಖಾಂಶಗಳು

  • ಕೊಲಿಜಿಯಂ ಪ್ರಕ್ರಿಯೆ ವಿರುದ್ಧ ಕಾನೂನು ಸಚಿವರು ನಡೆಸಿದ ವಾಗ್ದಾಳಿ ಬಗ್ಗೆ ಕೇಳಿದ್ದೇನೆ. ಅವರು ತಿಳಿದಿರಬೇಕಾದ ಎರಡು ಮೂಲಭೂತ ಸಾಂವಿಧಾನಿಕ ಅಂಶಗಳಿವೆ. ಮೊದಲನೆಯದು ಅಮೆರಿಕದಂತೆ ಅಲ್ಲದೆ ಸಂವಿಧಾನವನ್ನು ವ್ಯಾಖ್ಯಾನಿಸಲೆಂದೇ ವಿಧಿ 145(3)ರ ಪ್ರಕಾರ ಕನಿಷ್ಠ ಐವರು ಚುನಾಯಿತರಲ್ಲದ ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠವು ಸಂವಿಧಾನವನ್ನು ವ್ಯಾಖ್ಯಾನಿಸುತ್ತದೆ .

  • ನ್ಯಾಯಮೂರ್ತಿ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ತಾನು ಮಾಡುವ ಶಿಫಾರಸುಗಳಿಗೆ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರಕ್ಕೆ ಕೊಲಿಜಿಯಂ 30 ದಿನಗಳ ಗಡುವು ನೀಡಬೇಕು.

  • ಸುಪ್ರೀಂ ಕೋರ್ಟ್‌ ತೀರ್ಪನ್ನು ಟೀಕಿಸಲು ಕಾನೂನು ಸಚಿವರಿಗೆ ಹಕ್ಕಿದೆ. ಆದರೆ ಕೊಲಿಜಿಯಂ ವ್ಯವಸ್ಥೆಯ ರಚನೆಗೆ ಕಾರಣವಾದ ಎರಡನೇ ನ್ಯಾಯಾಧೀಶರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 1993ರಲ್ಲಿ ನೀಡಿದ್ದ ತೀರ್ಪಿಗೆ ಕೇಂದ್ರ ಸರ್ಕಾರ ಬದ್ಧವಾಗಿರಬೇಕು.

  • ಕೊಲಿಜಿಯಂ ಶಿಫಾರಸುಗಳನ್ನು ಕೇಂದ್ರ ಸರ್ಕಾರವು ಸುಮ್ಮನೆ ಇರಿಸಿಕೊಂಡು ಕೂರುವುದು ದೇಶದ ಪ್ರಜಾಸತ್ತೆಗೆ ಮಾರಕ ಸಂಗತಿ.

  • ಒಮ್ಮೆ ಆ ಐವರು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ನ್ಯಾಯಮೂರ್ತಿಗಳು ಸಂವಿಧಾನವನ್ನು ವ್ಯಾಖ್ಯಾನಿಸಿದರೆ ಆ ತೀರ್ಪನ್ನು ಪಾಲಿಸುವುದು ಸಂವಿಧಾನದ 144 ನೇ ವಿಧಿಯ ಅಡಿಯಲ್ಲಿ ʼಅಧಿಕಾರʼದಲ್ಲಿರುವ ನಿಮ್ಮ (ಕೇಂದ್ರ ಸರ್ಕಾರದ) ಕರ್ತವ್ಯವಾಗಿದೆ. ನಾಗರಿಕನಾಗಿ ನಾನು ಅದನ್ನು ಟೀಕಿಸಬಹುದು, ಅದು ಸಮಸ್ಯೆ ಅಲ್ಲ. ಆದರೆ ಮರೆಯಬೇಡಿ , ಇಂದು ಒಬ್ಬ ಸಾಮಾನ್ಯ ಪ್ರಜೆಯಾಗಿರುವ ನನ್ನಂತಲ್ಲದೆ, ನೀವು "ಅಧಿಕಾರ"ದಲ್ಲಿದ್ದೀರಿ ಮತ್ತು "ಅಧಿಕಾರ"ದಲ್ಲಿರುವ ನೀವು ಅದು ಸರಿಯೇ ಇರಲಿ ತಪ್ಪೇ ಇರಲಿ ಆ ತೀರ್ಪಿಗೆ ಬದ್ಧವಾಗಿರಬೇಕು.

  • ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ನಿಬಂಧನೆಗಳ ವ್ಯಾಖ್ಯಾನದಿಂದ ಕೊಲಿಜಿಯಂ ರೂಪುಗೊಂಡಿದ್ದು 9 ನ್ಯಾಯಮೂರ್ತಿಗಳ ಪೀಠ ನ್ಯಾಯಾಂಗ ಸ್ವಾತಂತ್ಯವು ಆ ಕಾಲದ ಅಗತ್ಯವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಕೊಲಿಜಿಯಂ ವ್ಯವಸ್ಥೆಯನ್ನು ತಂದಿದೆ.

  • ಆದ್ದರಿಂದ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ ನಿಜವಾಗಿಯೂ ಸಮಯದ ಅಗತ್ಯವಾದ ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಉತ್ತರವಾಗಿದೆ.

  • ಕಾಲದ ಅಗತ್ಯಗಳಿಗೆ ಅನುಗುಣವಾಗಿ ಸಾಂವಿಧಾನಿಕ ಆದರ್ಶಗಳನ್ನು ವಿಕಸನಗೊಳಿಸುವುದು ಸುಪ್ರೀಂ ಕೋರ್ಟ್‌ನ ಕರ್ತವ್ಯವಾಗಿದೆ .

[ಉಪನ್ಯಾಸದ ವಿಡಿಯೋ ಲಿಂಕ್‌ಗಾಗಿ ಇಲ್ಲಿ ಕ್ಲಿಕ್ಕಿಸಿ]

[ಭಾಷಣದ ವಿಡಿಯೋ ಲಿಂಕ್‌ಗಾಗಿ ಇಲ್ಲಿ ಕ್ಲಿಕ್ಕಿಸಿ]

Related Stories

No stories found.
Kannada Bar & Bench
kannada.barandbench.com