ಬೆಂಗಳೂರಿನಲ್ಲಿ ಕಾನೂನುಬಾಹಿರವಾಗಿ ಹೋರ್ಡಿಂಗ್ಸ್ ಮತ್ತು ಫ್ಲೆಕ್ಸ್ ಅಳವಡಿಕೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್ ಬಿಬಿಎಂಪಿಯನ್ನು ಕುರಿತು 'ನೀವು ನಗರದ ಮೊದಲ ಶತ್ರುʼ ಎಂದು ಮೌಖಿಕವಾಗಿ ಬಿರು ನುಡಿಯಿತು.
ಬೆಂಗಳೂರಿನಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ತಡೆಯಲು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಮಾಯಿಗೇಗೌಡ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಂ.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
“ಒಂದು ಕಡೆ ಕಾನೂನುಬಾಹಿರ ಜಾಹೀರಾತುಗಳಿಂದ ಬಿಬಿಎಂಪಿಗೆ ಯಾವುದೇ ಆದಾಯ ಬರುತ್ತಿಲ್ಲ. ಇನ್ನೊಂದು ಕಡೆ ಅವುಗಳನ್ನು ತೆರವು ಮಾಡಲು ತೆರಿಗೆದಾರರ ಹಣ ಖರ್ಚು ಮಾಡಲಾಗುತ್ತಿದೆ. ಆ ಮೂಲಕ ಜನರಿಗೆ ಹೊರೆ ಉಂಟು ಮಾಡಲಾಗುತ್ತಿದೆ” ಎಂದು ಪೀಠವು ಕಿಡಿಕಾರಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು “ಬಿಬಿಎಂಪಿ ಅಧಿಕಾರಿಗಳು ಜಾಹೀರಾತುದಾರರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ನಗರದಲ್ಲಿ ಅಳವಡಿಸಿರುವ ಯಾವೊಂದು ಜಾಹೀರಾತು ಕಾನೂನಿನ ಮಿತಿಯಲ್ಲಿಲ್ಲ. ಫ್ಲೈಓವರ್ ಸೇರಿದಂತೆ ವಿವಿಧೆಡೆ ನೂರಾರು ಜಾಹೀರಾತು ಹೋರ್ಡಿಂಗ್‌ಗಳನ್ನು ಕಾಣಬಹುದಾಗಿದೆ. ಜಾಹೀರಾತುದಾರರು ಕಾಲಕಾಲಕ್ಕೆ ತಕ್ಕಂತೆ ಜಾಹೀರಾತುಗಳನ್ನು ಬದಲಿಸುತ್ತಾರೆ. ಇದನ್ನು ಯಾರೂ ಪರಿಶೀಲಿಸುತ್ತಿಲ್ಲ” ಎಂದರು.
“ಬಿಬಿಎಂಪಿ ಕಾಯಿದೆಯ ಸೆಕ್ಷನ್ 158ರ ಪ್ರಕಾರ ಮುಖ್ಯ ಆಯುಕ್ತರು ಲಿಖಿತವಾಗಿ ಅನುಮತಿ ನೀಡದ ಹೊರತು ಯಾವುದೇ ಜಾಹೀರಾತುಗಳನ್ನು ಅಳವಡಿಸುವಂತಿಲ್ಲ. ಆಕ್ಷೇಪಣೆ ಅಥವಾ ಅಫಿಡವಿಟ್‌ನಲ್ಲಿ ಎಷ್ಟು ಜಾಹೀರಾತುಗಳಿಗೆ ಅನುಮತಿಸಲಾಗಿದೆ ಮತ್ತು ಅದರಿಂದ ಎಷ್ಟು ಹಣ ಸಂಗ್ರಹಿಸಲಾಗಿದೆ" ಎಂಬ ಮಾಹಿತಿಯನ್ನು ಬಿಬಿಎಂಪಿ ನೀಡಿಲ್ಲ ಎಂದರು.
ಆಗ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು “ಅನಧಿಕೃತ ಹೋರ್ಡಿಂಗ್ ವಿಚಾರವು ಬಹಳ ದೊಡ್ಡ ವಿಷಯವಾಗಿದ್ದು, ಇದರಿಂದ ಬಿಬಿಎಂಪಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಇದನ್ನು ತುಂಬಿಕೊಳ್ಳಲು ಬಿಬಿಎಂಪಿಯು ಜನರಿಗೆ ಹೊರೆ ಉಂಟು ಮಾಡುತ್ತಿದೆ. ಇದು ಸಮಸ್ಯೆಯಾಗಿದ್ದು, ನೀವು (ಬಿಬಿಎಂಪಿ) ನಗರದ ಮೊದಲ ಶತ್ರು” ಎಂದು ಕಟುವಾಗಿ ನುಡಿದರು.
ಅಂತಿಮವಾಗಿ ಪೀಠವು “ಬಿಬಿಎಂಪಿ ವ್ಯಾಪ್ತಿಯಲ್ಲಿ ಎಷ್ಟು ಹೋರ್ಡಿಂಗ್‌ಗಳು /ಬೋರ್ಡ್‌ಗಳು/ ಫ್ಲೆಕ್ಸ್‌ಗಳನ್ನು ತೆರವು ಮಾಡಲಾಗಿದೆ. ಎಷ್ಟು ಜಾಹೀರಾತುಗಳಿಗೆ ಅನುಮತಿಸಲಾಗಿದೆ ಎಂಬುದರ ಪಟ್ಟಿ, ನಿರ್ದಿಷ್ಟ ಅವಧಿಗೆ ಏನಾದರೂ ಅನುಮತಿಸಲಾಗಿದೆಯೇ, ನಿರ್ದಿಷ್ಟ ಕಾಲಮಿತಿ ಮುಗಿದ ಮೇಲೆ ಏನು ಕ್ರಮಕೈಗೊಳ್ಳಲಾಗಿದೆ. ಇನ್ನೂ ಜಾಹೀರಾತು ಅಳವಡಿಸುವುದು ಮೂಂದುವರಿದಿದೆಯೇ ಎಂಬ ಎಲ್ಲಾ ಅಂಶಗಳನ್ನು ಒಳಗೊಂಡ ಸಮೀಕ್ಷಾ ವರದಿ ಸಲ್ಲಿಸಬೇಕು” ಎಂದು ನಿರ್ದೇಶಿಸಿದೆ.
“ಪ್ರಮಾದ ಎಸಗಿರುವವರ ವಿರುದ್ಧ ಬಿಬಿಎಂಪಿ ಯಾವ ಕ್ರಮವನ್ನು ಯಾವ ಕಾಲಾವಧಿಯಲ್ಲಿ ಕೈಗೊಳ್ಳಲಿದೆ ಎಂಬುದನ್ನು ಕಳೆದ ಮೂರು ವರ್ಷಗಳ ಅವಧಿ ಸೇರಿದಂತೆ ವಿವರವಾಗಿ ಸಲ್ಲಿಸಬೇಕು” ಎಂದು ನ್ಯಾಯಾಲಯವು ನಿರ್ದೇಶಿಸಿದೆ. ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿದೆ