

“ರಾಜಕೀಯ ಉದ್ದೇಶಕ್ಕೆ ಧಾರ್ಮಿಕ ಸ್ಥಳಗಳನ್ನು ಬಳಸುವುದು ಸರಿಯಲ್ಲ” ಎಂದು ಕಟುವಾಗಿ ನುಡಿದಿರುವ ಕರ್ನಾಟಕ ಹೈಕೋರ್ಟ್, ಲೋಕಸಭಾ ಚುನಾವಣೆಯ ವೇಳೆ ಶಿವಮೊಗ್ಗ ದೇವಸ್ಥಾನದಲ್ಲಿ ರಾಜಕೀಯ ಸಭೆ ನಡೆಸಿದ ಸಂಬಂಧ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಮತ್ತು ಇತರರ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದತಿಗೆ ನಿರಾಕರಿಸಿದೆ.
ಶಿವಮೊಗ್ಗದ ತುಂಗಾನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಮತ್ತು ಆ ಸಂಬಂಧ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿ ರದ್ದತಿ ಕೋರಿ ಬಿಜೆಪಿ ಉಚ್ಚಾಟಿತ ನಾಯಕ ಕೆ ಎಸ್ ಈಶ್ವರಪ್ಪ ಸೇರಿ ಒಂಭತ್ತು ಮಂದಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ನಡೆಸಿತು.
ಕನಿಷ್ಠ ಪಕ್ಷ ದೇವಸ್ಥಾನದ ಅರ್ಚಕ ಮತ್ತು ಇನ್ನೊಬ್ಬ ಅರ್ಜಿದಾರರ ವಿರುದ್ಧ ಪ್ರಕರಣ ರದ್ದುಪಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಆಗ ಪೀಠವು “ರಾಜಕೀಯ ಕಾರಣಗಳಿಗೆ ನೀವು ಧಾರ್ಮಿಕ ಸ್ಥಳಗಳನ್ನು ಬಳಕೆ ಮಾಡಲಾಗದು. ಇದಕ್ಕೆ ವಿರಾಮ ಇಡಬೇಕು” ಎಂದು ಮೌಖಿಕವಾಗಿ ಕಿಡಿಕಾರಿತು.
ಅರ್ಜಿದಾರರ ಪರ ವಕೀಲ ಲೀಲೇಶ್ ಕೃಷ್ಣ ಅವರು “ದೇವಸ್ಥಾನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಯಾವುದೇ ರಾಜಕೀಯ ಭಾಷಣ ಮಾಡಿಲ್ಲ. ಯಾವ ರಾಜಕೀಯ ಚಟುವಟಿಕೆ ನಡೆಸಲಾಗಿದೆ ಎಂಬುದನ್ನು ದೂರಿನಲ್ಲಿ ವಿವರಿಸಲಾಗಿಲ್ಲ. ಕಾಯಿದೆ ಅಡಿ ಅಪರಾಧವಾಗುವ ಯಾವುದೇ ಕೃತ್ಯ ನಡೆಸಿಲ್ಲ. 14 ಸಾಕ್ಷಿಗಳ ಪೈಕಿ 13 ಮಂದಿ ಸರ್ಕಾರಿ ಅಧಿಕಾರಿಗಳೇ ಆಗಿದ್ದಾರೆ. ಒಬ್ಬೇ ಒಬ್ಬರು ಪ್ರತ್ಯಕ್ಷದರ್ಶಿಯಾಗಿದೆ” ಎಂದು ಕೋರಿದರು.
ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ದೇವಸ್ಥಾನದಲ್ಲಿ ಸಭೆ ನಡೆಸಲಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಸಂಬಂಧ ಚರ್ಚೆ ನಡೆಸಲಾಗಿದೆ. ಆದ್ದರಿಂದ ಧಾರ್ಮಿಕ ಸ್ಥಳಗಳ (ದುರ್ಬಳಕೆ) ತಡೆ ಕಾಯಿದೆ ಅನ್ವಯಿಸಿರುವುದು ಸಮರ್ಥನೀಯ” ಎಂದರು.
ಇದನ್ನು ಆಲಿಸಿದ ಪೀಠವು ಉಭಯ ಪಕ್ಷಕಾರರ ಪರ ವಕೀಲರಿಂದ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಪ್ರಕರಣದ ವಿಸ್ತೃತ ವಿಚಾರಣೆ ಅಗತ್ಯ ಎಂದು ಅರ್ಜಿಯನ್ನು ಜೂನ್ 15ರ ವಾರದಲ್ಲಿ ಪಟ್ಟಿ ಮಾಡಲು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
2024ರ ಲೋಕಸಭಾ ಚುನಾವಣೆಯ ವೇಳೆ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಶಿವಮೊಗ್ಗದ ಆದಿ ರಂಗನಾಥ ದೇವಾಲಯದಲ್ಲಿ ಈಶ್ವರಪ್ಪ ಮತ್ತು ಇತರರು ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಾಗಿ ಸಭೆ ನಡೆಸಿ ಚರ್ಚಿಸಿದ್ದರು. ಇದರ ಮಾಹಿತಿಯ ಹಿನ್ನೆಲೆಯಲ್ಲಿ ಚುನಾವಣಾ ವೀಕ್ಷಕರು ತುಂಗಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಅನ್ವಯ ಈಶ್ವರಪ್ಪ ಸೇರಿ ಒಂಭತ್ತು ಮಂದಿಯ ವಿರುದ್ಧ ಧಾರ್ಮಿಕ ಸಂಸ್ಥೆಗಳ (ದುರ್ಬಳಕೆ ತಡೆ) ಕಾಯಿದೆ ಸೆಕ್ಷನ್‌ಗಳಾದ 3, 6, ಮತ್ತು 7ರ ಪ್ರಕರಣ ದಾಖಲಿಸಲಾಗಿದೆ.