ಜಾರಿ ನಿರ್ದೇಶನಾಲಯ ಭ್ರಷ್ಟಾಚಾರದ ವಿರುದ್ಧ ಸಮರ ಸೇನಾನಿಯಾಗಿರಬಹುದು, ಕಾನೂನಿನ ಪ್ರಕಾರ ನಡೆಯಬೇಕು: ಹೈಕೋರ್ಟ್‌ ತರಾಟೆ

ಅಬಕಾರಿ ಆಯುಕ್ತ ವೈ ಮಂಜುನಾಥ್‌, ಅವರ ಪತ್ನಿ ಮಹಾದೇವಿ ಮತ್ತು ಇತರರ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಜಾರಿ ನಿರ್ದೇಶನಾಲಯಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.
ED and Karnataka HC
ED and Karnataka HC
Published on

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸಹೋದರಿ ಮಹಾದೇವಿ ಮತ್ತು ಭಾವಮೈದುನ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ. ವೈ ಮಂಜುನಾಥ್‌ ಸೇರಿ ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ಶೋಧ ಮತ್ತು ಜಫ್ತಿ ಸಂಬಂಧಿತ ಪ್ರಕ್ರಿಯೆಯಲ್ಲಿ ಆತುರದ ಕ್ರಮಕ್ಕೆ ಮುಂದಾಗದಂತೆ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶಿಸಿರುವ ಕರ್ನಾಟಕ ಹೈಕೋರ್ಟ್‌, ನೀವು (ಇ ಡಿ) ಭ್ರಷ್ಟಾಚಾರದ ವಿರುದ್ಧ ಸಮರ ಸೇನಾನಿಯಾಗಿರಬಹುದು. ಆದರೆ, ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು ಎಂದು ಕಟುವಾಗಿ ನುಡಿದಿದೆ.

ಜೂನ್‌ ೨೩ರಂದು ಬೆಂಗಳೂರು ಮತ್ತು ಗೋವಾದ ಇ ಡಿ ಅಧಿಕಾರಿಗಳು ಬೆಳಗಾವಿ ಸೇರಿದಂತೆ ಅರ್ಜಿದಾರರಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ನಡೆಸಿರುವ ಶೋಧ ಮತ್ತು ಜಫ್ತಿ ಪ್ರಶ್ನಿಸಿ ಡಾ. ಮಂಜುನಾಥ್‌ ಮತ್ತು ಅವರ ಸಂಬಂಧಿಗಳು ಪ್ರತ್ಯೇಕವಾಗಿ ಸಲ್ಲಿಸಿರುವ ಮೂರು ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice M Nagaprasanna
Justice M Nagaprasanna

“ನೀವು (ಇ ಡಿ) ಭ್ರಷ್ಟಾಚಾರದ ವಿರುದ್ಧ ಸಮರ ಸೇನಾನಿಯಾಗಿರಬಹುದು. ಆದರೆ, ಕಾನೂನಿನ ಅನ್ವಯ ನಡೆಯಬೇಕು. ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಉತ್ಸಾಹ ಇದ್ದರೆ ಕಾನೂನಿನ ಪ್ರಕಾರ ನಡೆಯಬೇಕು. ಆಗ ಯಾವುದೇ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ. ಆದರೆ, ನೀವು ಇಲ್ಲಿಗೆ ಬಂದು ಮೇಲ್ನೋಟಕ್ಕೆ ಸಮರ್ಥನೀಯವಲ್ಲದ ಕ್ರಿಯೆಯನ್ನು ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ” ಎಂದು ನ್ಯಾಯಾಲಯವು ಮೌಖಿಕವಾಗಿ ಹೇಳಿದೆ.

ಮುಂದುವರಿದು, ಜಾರಿ ನಿರ್ದೇಶನಾಲಯವು ಹಾಲಿ ಪ್ರಕರಣದಲ್ಲಿ ಮುಂದಿನ ವಿಚಾರಣೆಯವರೆಗೆ ಮುಂದುವರಿಯಬಾರದು ಎಂದು ನಿರ್ದೇಶಿಸಿದ್ದು, ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿದೆ.

ವಿಚಾರಣೆಯ ವೇಳೆ ಪೀಠವು “ಹಣ ವರ್ಗಾವಣೆಯಾಗಿರಬೇಕು, ಸಂಪರ್ಕ ಕಾಣಬೇಕು. ಇಲ್ಲಿ ಸಂಬಂಧವೇ ಇಲ್ಲದ ವ್ಯಕ್ತಿಗಳಿದ್ದಾರೆ. ಅಷ್ಟು ಸರಳವಾಗಿ ನೀವು ಅವರನ್ನು ಎಳೆದು ತರಲಾಗದು. ಯಾರ ಮನೆಯನ್ನಾದರೂ ಇ ಡಿ ಶೋಧಿಸಬಹುದು. ಆದರೆ, ಪ್ರೆಡಿಕೇಟ್‌ ಅಪರಾಧ ಇರಬೇಕು. ಆ ಪ್ರಕರಣದಲ್ಲಿ ವ್ಯಕ್ತಿ ಆರೋಪಿಯಾಗಿರಬೇಕು, ಇಲ್ಲವೇ ಆ ವ್ಯಕ್ತಿಯನ್ನು ಸಂಪರ್ಕಿಸುವ ಹಣ ವರ್ಗಾವಣೆಯಾಗಿರಬೇಕು. ಇಲ್ಲಿನ ವ್ಯಕ್ತಿಗಳು ಯಾರು ಮತ್ತು ಜಗದೀಶ್‌ ನಾಯಕ್‌ ಯಾರು?” ಎಂದು ಪ್ರಶ್ನಿಸಿತು.

Prabhuling Navadagi, Senior Advocate
Prabhuling Navadagi, Senior Advocate

“₹25 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವುದು ಅಪರಾಧ ಪ್ರಕ್ರಿಯೆಯಾಗುತ್ತದೆಯೇ? ಲಂಚ ಪಡೆದ ವ್ಯಕ್ತಿಯ ವಿರುದ್ಧ ಇ ಡಿ ಮುಂದುವರಿಯಬಹುದು. ಇದಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಗಳ ವಿರುದ್ಧ ಹೇಗೆ ಇ ಡಿ ಹೋಗುತ್ತದೆ? ಲೋಕಾಯುಕ್ತ ರೂಪದಲ್ಲಿ ಒಳ್ಳೆಯ ಸಂಸ್ಥೆ ಇದೆ. ಲೋಕಾಯುಕ್ತ ಕೆಲಸವನ್ನು ಇ ಡಿ ಮಾಡುತ್ತದೆಯೇ?” ಎಂದು ಪ್ರಶ್ನಿಸಿತು.

ಮಹಾದೇವಿ ಮತ್ತು ಮಂಜುನಾಥ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಇಲ್ಲಿ ಪ್ರೆಡಿಕೇಟ್‌ ಅಪರಾಧವೇ ಇಲ್ಲ. ಪತ್ರಿಕಾ ಪ್ರಕಟಣೆಯು ಪಿಎಂಎಲ್‌ಎ ಅಡಿ ವ್ಯಾಪ್ತಿಗೆ ಒಳಪಡುವುದಿಲ್ಲ” ಎಂದರು.

ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ಅರ್ಜಿದಾರರ ಕಚೇರಿ ಮತ್ತು ಮನೆಗಳಲ್ಲಿ ಶೋಧ ಮತ್ತು ಜಫ್ತಿ ನಡೆದಿದೆ. ಅವರ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ನಿರ್ಬಂಧಿಸಬೇಕು” ಎಂದು ಕೋರಿದರು.

ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಮಧು ರಾವ್‌ ಅವರು “ತನಿಖೆಯ ಸಂದರ್ಭದಲ್ಲಿ ಪತ್ತೆಯಾದ ಅಂಶಗಳ ಆಧಾರದಲ್ಲಿ ಇ ಡಿ ಕ್ರಮಕೈಗೊಂಡಿದೆ. ಈ ಸಂಬಂಧ ಮಾಹಿತಿ ಪಡೆಯಲು ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು.

Madhu N Rao, Special Public Prosecutor of Enforcement Directorate
Madhu N Rao, Special Public Prosecutor of Enforcement Directorate

ಷೆಡ್ಯೂಲ್‌ ಅಪರಾಧವಿಲ್ಲದೇ ಇರುವುದರಿಂದ ಅರ್ಜಿದಾರರ ವಿರುದ್ಧ ಜಾರಿ ನಿರ್ದೇಶನಾಲಯವು ಪಿಎಂಎಲ್‌ಎ ಸೆಕ್ಷನ್‌ 17ರ ಅಡಿ ಆರಂಭಿಸಿರುವ ಪ್ರಕ್ರಿಯೆಯನ್ನು ವಜಾಗೊಳಿಸಬೇಕು ಎಂದು ಕೋರಲಾಗಿದೆ.

ಲೋಕಾಯುಕ್ತ ಪೊಲೀಸರು ಜಗದೀಶ್‌ ನಾಯಕ್‌ ಎಂಬ ವ್ಯಕ್ತಿಯು ₹25 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದು, ಇದರ ಭಾಗವಾಗಿ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 7A ಅಡಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ತಾವು ಆರೋಪಿಗಳೂ ಅಲ್ಲ, ಅದಕ್ಕೆ ಸಂಬಂಧವನ್ನೂ ಹೊಂದಿಲ್ಲ. ಅದಾಗ್ಯೂ, ಇದನ್ನು ಜಾರಿ ನಿರ್ದೇಶನಾಲಯವು ಅಪರಾಧ ಪ್ರಕ್ರಿಯೆಯಾಗಿ ಮುಂದು ಮಾಡುತ್ತಿರುವುದು ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.

ವಕೀಲರಾದ ಗೌತಮ್‌ ಎಸ್‌ ಭಾರದ್ವಾಜ್‌, ಪ್ರಶಾಂತ್‌ ಎಫ್‌. ಗೌಡರ್‌ ಅರ್ಜಿದಾರರ ಪರವಾಗಿ ವಾದಿಸಿದರು.

Kannada Bar & Bench
kannada.barandbench.com