'ಇನ್ನೆಷ್ಟು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕು?' ಗುತ್ತಿಗೆದಾರರ ಬಾಕಿ ಪಾವತಿ ವಿಳಂಬಕ್ಕೆ ಹೈಕೋರ್ಟ್‌ ಕಿಡಿ

ಕಾಮಗಾರಿಗಳಿಗೆ ಸ್ಥಳೀಯ ಸಂಸ್ಥೆಯು ಟೆಂಡರ್ ಕರೆದು, ಆ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬಳಿಕ ಮೊತ್ತ ಪಾವತಿಗೆ ಷರತ್ತುಗಳನ್ನು ಹಾಕುವುದು, ಅನಗತ್ಯ ವಿಳಂಬ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸರ್ಕಾರಕ್ಕೆ ಪ್ರಶ್ನಿಸಿದ ಪೀಠ.
Chief Justice P B Varale and Justice Krishna S. Dixit
Chief Justice P B Varale and Justice Krishna S. Dixit

ಗುತ್ತಿಗೆದಾರರ ಬಾಕಿ ಹಣ ಪಾವತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಡೆಯನ್ನು ಬುಧವಾರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್, ‘‘ಸರ್ಕಾರವೇ ಹೇಳಿರುವಂತೆ ಈಗಾಗಲೇ ಇಬ್ಬರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇನ್ನು ಎಷ್ಟು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕು, ಬಾಕಿ ಪಾವತಿಯಲ್ಲೂ ಹಿರಿತನವೇ?’’ ಎಂದು ಖಾರವಾಗಿ ಮೌಖಿಕವಾಗಿ ಪ್ರಶ್ನಿಸಿತು.

ಬಾಕಿ ಪಾವತಿ ಸಂಬಂಧ ನ್ಯಾಯಾಲಯದ ಆದೇಶ ಪಾಲಿಸದ ಬಿಬಿಎಂಪಿ ವಿರುದ್ಧ ಮೆಸರ್ಸ್ ನಿಕ್ಷೇಪ್ ಇನಾಫ್ರಾ ಪ್ರಾಜೆಕ್ಟ್ ಹೂಡಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

“ನೀವು (ಸರ್ಕಾರ) ನಿಮ್ಮ ದಾಖಲೆಗಳನ್ನೇ ಒಮ್ಮೆ ನೋಡಿ, ಇಬ್ಬರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ, ನಿಮ್ಮ ದಾಖಲೆ ಪರಿಶೀಲಿಸಿ, ಗುತ್ತಿಗೆದಾರರನ್ನು ಮೂಲೆಗುಂಪು ಮಾಡಬೇಡಿ. ಬಾಕಿ ಪಾವತಿಗೆ ಬಿಬಿಎಂಪಿ ಅನುಸರಿಸುತ್ತಿರುವ ವಿಧಾನವೇ ತಿಳಿಯುತ್ತಿಲ್ಲ, ಕಲ್ಯಾಣ ರಾಜ್ಯವೊಂದರಲ್ಲಿ ಕಾಮಗಾರಿಗಳಿಗೆ ಸ್ಥಳೀಯ ಸಂಸ್ಥೆಗಳು ಟೆಂಡರ್ ಕರೆದು, ಆ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬಳಿಕ ಮೊತ್ತ ಪಾವತಿಗೆ ಷರತ್ತುಗಳನ್ನು ಹಾಕುವುದು, ಅನಗತ್ಯ ವಿಳಂಬ ಮಾಡುವುದು ಎಷ್ಟರ ಮಟ್ಟಿಗೆ ಸರಿ” ಎಂದು ಪ್ರಶ್ನಿಸಿತು.

“ನಾವು 2023ರ ಅಕ್ಟೋಬರ್‌ 30ರ ಮಧ್ಯಂತರ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದೇವೆ, ಆದರೂ ಬಾಕಿ ಪಾವತಿಗೆ ಮೀನಮೇಷ ಎಣಿಸಲಾಗುತ್ತಿದೆ.  ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಹಣ ಪಾವತಿಸದೆ ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದು ಸರಿಯೇ? ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿರುವ ಬಗ್ಗೆ ಯಾವುದೇ ವಿವಾದವಿಲ್ಲ. ಕಾಮಗಾರಿ ಸ್ಥಗಿತಗೊಳಿಸಿ ಅದು ಅರ್ಧಕ್ಕೆ ನಿಂತಿರುವ ಪರಿಸ್ಥಿತಿಯೂ ಇಲ್ಲ. ಕಾಮಗಾರಿ ಪೂರ್ಣಗೊಳಿಸಿದ ನಂತರ ನೀವು ಕಾಯಿಸುತ್ತಿರೀ ಎಂದರೆ ಹೇಗೆ ’’ ಎಂದು ಪ್ರಶ್ನಿಸಿತು.

“ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಯನ್ನು ನಿಮ್ಮಲ್ಲಿ ಹಣ ಇಲ್ಲವೇ” ಎಂದು ಪೀಠ ಪ್ರಶ್ನಿಸಿತು. ನ್ಯಾ. ಕೃಷ್ಣ ದೀಕ್ಷಿತ್ ಅವರು “ನಿಮ್ಮ ಬಳಿ ಹಣ ಇಲ್ಲವೇ? ಇಲ್ಲವಾದರೆ ಹೇಳಿ ಬಿಡಿ, ಬಾಕಿ ಪಾವತಿಯಲ್ಲೂ ಹಿರಿತನ ಎಂದರೆ ಏನು? ನಿಮ್ಮ ಬಳಿ ಮಾರ್ಗಸೂಚಿ ಇದೆಯೇ, ಸರಿಯಾಗಿ ಹೇಳಿ” ಎಂದು ವಕೀಲರನ್ನು ಖಾರವಾಗಿ ಪ್ರಶ್ನಿಸಿದರು.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಮ್‌ ಹುಯಿಲಗೋಳ ಅವರು ಕೆಲವು ನಕಲಿ ಬಿಲ್ ಗಳ ವಿಚಾರ ಪ್ರಸ್ತಾಪಿಸಿದಾಗ ನ್ಯಾಯಾಲಯವು “ಆದಕ್ಕೂ ಈ ಅರ್ಜಿದಾರರಿಗೂ ಸಂಬಂಧ ಇಲ್ಲ, ಒಂದು ವೇಳೆ ನೀವು ಸ್ವಚ್ಛಗೊಳಿಸುವ (ಕ್ಲೀನ್ ಅಪ್) ಕಾರ್ಯಾಚರಣೆ ಆರಂಭಿಸಿದರೆ ಅದನ್ನು ಮೊದಲು ನಿಮ್ಮ ಮನೆಯಿಂದ ಆರಂಭಿಸಿ. ನೀವು ನಿಮ್ಮ ಅಧಿಕಾರಿಗಳ ವಿರುದ್ಧ ಏನಾದರೂ ಕ್ರಮ ಕೈಗೊಂಡಿದ್ದಿರಾ, ಹಾಗಿದ್ದರೆ ಹೇಳಿ? ನಾವು ನಮ್ಮ ಆದೇಶದಲ್ಲಿ ಅತ್ಯಂತ ಸ್ಪಷ್ಟವಾಗಿ ಹೇಳಿದ್ದೇವೆ, ರಾಜ್ಯ ಸರ್ಕಾರ ಸ್ವಲ್ಪ ವಿವೇಚನೆಯಿಂದ ಕಾರ್ಯನಿರ್ವಹಿಸಬೇಕು ಅಷ್ಟೇ” ಎಂದಿತು.

ಬಿಬಿಎಂಪಿ ಪರ ವಕೀಲರು ಕೆಲವು ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದ್ದಕ್ಕೆ ಪೀಠವು ನಾವು ಹಿಂದಿನ ಆದೇಶದಲ್ಲಿ ಉಲ್ಲೇಖಿಸಿದಂತೆ ರಾಜ್ಯ ಸರ್ಕಾರವೇ ಇಂತಹ ಪರಿಸ್ಥಿತಿಗಳನ್ನು ತಪ್ಪಿಸಲು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಬೇಕಾಗಿದೆ ಎಂದು ಆದೇಶಿಸಿ, ವಿಚಾರಣೆಯನ್ನು ಡಿಸೆಂಬರ್‌ 13ಕ್ಕೆ ಮುಂದೂಡಿತು.

ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ನಗರಾಭಿವೃದ್ಧಿ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ವಾಣಿ, ಬಿಬಿಎಂಪಿ ಮಲ್ಲೇಶ್ವರಂ ವಿಭಾಗದ ಕಾರ್ಯಕಾರಿ ಎಂಜಿನಿಯರ್ ಜೈಶಂಕರ್ ಮತ್ತಿತರರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

Related Stories

No stories found.
Kannada Bar & Bench
kannada.barandbench.com