ಪತ್ರಕರ್ತರಷ್ಟೇ ಅಲ್ಲ, ಪತ್ರಿಕೆ ಓದುಗರ ಬಗ್ಗೆಯೂ ನಿಮಗೆ ಸಮಸ್ಯೆ ಇದ್ದಂತಿದೆ: ಎನ್‌ಐಎ ಕುರಿತು ಸಿಜೆಐ ರಮಣ ಅಭಿಪ್ರಾಯ

ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರನ್ನು ಕುರಿತು ಸಿಜೆಐ ರಮಣ ಅಭಿಪ್ರಾಯ ವ್ಯಕ್ತಪಡಿಸಿದರು.
CJI NV Ramana
CJI NV Ramana

ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ದಾಖಲಿಸಿದ್ದ ಪ್ರಕರಣದಲ್ಲಿ ಆರೋಪಿಯೊಬ್ಬರಿಗೆ ಜಾರ್ಖಂಡ್‌ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದ್ದನ್ನು ಗುರುವಾರ ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್‌, ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮೇಲ್ಮನವಿಯನ್ನು ವಜಾ ಮಾಡಿದೆ.

ಭಯೋತ್ಪಾದನಾ ಗುಂಪಿನ ಅಣತಿಯ ಮೇರೆಗೆ ಆರೋಪಿಯು ಸಾರಿಗೆ ಇಲಾಖೆ ಅಧಿಕಾರಿಗಳಿಂದ ಹಣ ಸುಲಿಗೆ ಮಾಡಿರುವುದರಿಂದ ಆತನ ಜಾಮೀನು ರದ್ದುಪಡಿಸಬೇಕು ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಒತ್ತಿ ಹೇಳಿದರು. ಆಗ “ನೀವು ಮುಂದಡಿ ಇಡುತ್ತಿರುವುದನ್ನು ನೋಡಿದರೆ ನಿಮಗೆ ಪತ್ರಕರ್ತರಷ್ಟೇ ಅಲ್ಲ, ಪತ್ರಿಕೆ ಓದುಗರ ಬಗ್ಗೆಯೂ ಸಮಸ್ಯೆ ಇದ್ದಂತಿದೆ” ಎಂದು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

“… ಇಲ್ಲಿ ಪ್ರತಿವಾದಿಗೆ ಜಾಮೀನು ಮಂಜೂರು ಮಾಡಿ ಹೈಕೋರ್ಟ್‌ ಹೊರಡಿಸಿರುವ ಆಕ್ಷೇಪಿತ ಆದೇಶದಲ್ಲಿ ಮಧ್ಯಪ್ರವೇಶಿಸುವಂಥದ್ದೇನೂ ನಮಗೆ ಕಾಣುತ್ತಿಲ್ಲ” ಎಂದು ಆದೇಶದಲ್ಲಿ ಉಲ್ಲೇಖಿಸಿದರು.

ಮಾವೋವಾದಿಗಳ ತೃತೀಯ ಪ್ರಸ್ತುತಿ ಸಮಿತಿಯ (ಟಿಪಿಸಿ) ಸೂಚನೆಯಂತೆ ಹಣ ಸುಲಿಗೆ ಮಾಡಿದ ಆರೋಪ ಪ್ರತಿವಾದಿಯ ಮೇಲಿದೆ. ಆರೋಪಿಯನ್ನು ವಶಕ್ಕೆ ಪಡೆದ ಮೂರು ವರ್ಷಗಳ ಬಳಿಕ ಹೈಕೋರ್ಟ್‌ 2021ರ ಡಿಸೆಂಬರ್‌ನಲ್ಲಿ ಜಾಮೀನು ಮಂಜೂರು ಮಾಡಿತ್ತು.

ಆರೋಪಕ್ಕೆ ಪೂರಕವಾದ ದಾಖಲೆಗಳು ಇಲ್ಲದಿರುವುದು ಮತ್ತು ವಿಚಾರಣೆ ಆರಂಭವಾಗಿದ್ದು, ಆರೋಪ ಪಟ್ಟಿ ಸಲ್ಲಿಸಲಾಗಿದೆ. ತನಿಖೆಯ ಸಂದರ್ಭದಲ್ಲಿ ಆರೋಪಿಯು ಎಲ್ಲಾ ರೀತಿಯಲ್ಲೂ ಸಹಕರಿಸಿರುವುದನ್ನು ಆಧರಿಸಿ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು.

“ಟಿಪಿಸಿಯು ಭಯೋತ್ಪಾದನಾ ಚಟುವಟಿಕೆಗಳಲ್ಲಿ ನಿರತವಾಗಿರಬಹುದು. ಆದರೆ ಆರೋಪಿತ ಅರ್ಜಿದಾರರು ತೆರಿಗೆ ಹಣವನ್ನು ಟಿಪಿಸಿಗೆ ನೀಡುವುದು ಮತ್ತು ಟಿಪಿಸಿ ಮುಖ್ಯಸ್ಥರನ್ನು ಭೇಟಿ ಮಾಡುವುದು ಯುಎಪಿಎ ಸೆಕ್ಷನ್‌ಗಳಾದ 17 ಮತ್ತು 18ರ ಅಡಿ ಬರುವುದಿಲ್ಲ. ಆರೋಪಿಯ ವಿರುದ್ಧದ ಆರೋಪಗಳಲ್ಲಿ ಮೇಲ್ನೋಟಕ್ಕೆ ಸತ್ಯಸಂಗತಿ ಇದೆ ಎಂಬುದನ್ನು ಪ್ರಾಸಿಕ್ಯೂಷನ್‌ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟ ಬಳಿಕ ಯುಎಪಿಎ ಸೆಕ್ಷನ್‌ 43ಡಿ ಅಡಿ ಬರುವ ಉಪ ನಿಯಮ (5)ರ ನಿರ್ಬಂಧ ಅನ್ವಯಿಸುತ್ತದೆ” ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ಹೇಳಿತ್ತು. ಇದನ್ನು ಪ್ರಶ್ನಿಸಿ ಎನ್‌ಐಎಯು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈಗ ಅದು ವಜಾಗೊಂಡಿದೆ.

Related Stories

No stories found.
Kannada Bar & Bench
kannada.barandbench.com