![[ಕೆಪಿಎಸ್‌ಸಿ ನೇಮಕಾತಿ ಹಗರಣ] ನೀವು ಯಾವ ಮಟ್ಟಕ್ಕಾದರೂ ಇಳಿಯಬಲ್ಲಿರಿ: ಶಿವಶಂಕರಪಪ್ಪ ಸಾಹುಕಾರ್‌ಗೆ ಹೈಕೋರ್ಟ್ ತರಾಟೆ](http://cf-images.assettype.com/barandbench-kannada%2F2026-08-31%2F4im35san%2FWhatsApp-Image-2026-07-29-at-4.44.52-PM.jpeg?w=480&auto=format%2Ccompress&fit=max)
![[ಕೆಪಿಎಸ್‌ಸಿ ನೇಮಕಾತಿ ಹಗರಣ] ನೀವು ಯಾವ ಮಟ್ಟಕ್ಕಾದರೂ ಇಳಿಯಬಲ್ಲಿರಿ: ಶಿವಶಂಕರಪಪ್ಪ ಸಾಹುಕಾರ್‌ಗೆ ಹೈಕೋರ್ಟ್ ತರಾಟೆ](http://cf-images.assettype.com/barandbench-kannada%2F2026-08-31%2F4im35san%2FWhatsApp-Image-2026-07-29-at-4.44.52-PM.jpeg?w=480&auto=format%2Ccompress&fit=max)
ಕರ್ನಾಟಕ ಲೋಕಾ ಸೇವಾ ಆಯೋಗದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನ ಭೀತಿಗೆ ಗುರಿಯಾಗಿರುವ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಕುರಿತು ಹೈಕೋರ್ಟ್ ಗುರುವಾರ “ನೀವು ಯಾವ ಮಟ್ಟಕ್ಕಾದರೂ ಇಳಿಯಬಲ್ಲಿರಿ” ಎಂದು ಕಿಡಿಕಾರಿದೆ.
ನಿರೀಕ್ಷಣಾ ಜಾಮೀನು ಕೋರಿ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ನಡೆಸಿತು.
“ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿದ್ದ ಸಾಹುಕಾರ್ ಅದ್ಹೇಗೆ ನೇಮಕಾತಿಗೆ ಸಂಬಂಧಿಸಿದ ವಂಚನೆಯಲ್ಲಿ ಪಾಲ್ಗೊಳ್ಳಲು ಸಾಧ್ಯ. ಅತ್ಯುನ್ನತ ಹುದ್ದೆಯಲ್ಲಿದ್ದ ವ್ಯಕ್ತಿಯ ನಡತೆ ಅದ್ಹೇಗೆ ಹೀಗಿದೆ? ಇಂಥ ಅಪರಾಧ ಕೃತ್ಯದಲ್ಲಿ ಅವರು ಭಾಗಿಯಾಗಿದ್ದಾರೆ” ಎಂದು ಪೀಠ ಹೇಳಿತು.
“ಭವಿಷ್ಯದ ಆಡಳಿತಗಾರರನ್ನು ನೇಮಕ ಮಾಡುವ ಹುದ್ದೆಯ ಉಸ್ತುವಾರಿಯಲ್ಲಿದ್ದ ನೀವು ಇಂಥ ಕೃತ್ಯದಲ್ಲಿ ಭಾಗಿಯಾಗಿದ್ದೀರಿ. ಭವಿಷ್ಯದಲ್ಲಿ ಯಾವ ಸಮಾಜವನ್ನು ನಾವು ನಿರೀಕ್ಷಿಸಲು ಸಾಧ್ಯ” ಎಂದು ಖಾರವಾಗಿ ಪ್ರಶ್ನಿಸಿತು.
“ಇಂಥ ವಂಚನೆಯಲ್ಲಿ ನೀವು ತೊಡಗುವ ಮೂಲಕ ಅನರ್ಹರನ್ನು ವ್ಯವಸ್ಥೆಯ ಒಳಗೆ ತಂದರೆ ಅವರು ನಾಳಿನ ಆಡಳಿತಗಾರರಾಗುತ್ತಾರೆ” ಎಂಬುದನ್ನು ನೆನಪಿಡಿ ಎಂದು ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
“ದುಷ್ಕೃತ್ಯದಲ್ಲಿ ನಿಮ್ಮ ಪಾತ್ರವೂ ಪತ್ತೆಯಾಗಿದೆ. ಸರ್ಕಾರವು ಒಂದಷ್ಟು ದಾಖಲೆ ನೀಡಿದೆ. ನೀವು ಸಹ ಪಡೆದಿದ್ದೀರಿ (ಹಣ)” ಎಂದು ಪೀಠ ಹೇಳಿತು.
“ನಿಮ್ಮ ಪುತ್ರಿಯ ನೇಮಕಾತಿಗೆ ಸಂಬಂಧಿಸಿದ ವಾಸ್ತವಿಕ ವಿಚಾರವನ್ನು ನೀವು ಮರೆಮಾಚಿದ್ದೀರಿ. ಅದು ಬೇರೆಯದೇ ಅಪರಾಧ ಪ್ರಕರಣವಾಗಿರಬಹುದು. ಇಂಥ ಕೃತ್ಯದಲ್ಲಿ ತೊಡಗಿರುವ ನೀವು ಯಾವ ಮಟ್ಟಕ್ಕಾದರೂ ಇಳಿಯಬಲ್ಲಿರಿ” ಎಂದು ಕಟುವಾಗಿ ನುಡಿಯಿತು.
“ಮುಚ್ಚಿದ ಲಕೋಟೆಯಲ್ಲಿನ ಅಂಶಗಳು ಗೌಪ್ಯ ವಿಚಾರಗಳಾಗಿದ್ದು, ನಿಮಗೆ ಅದನ್ನು ಬಹಿರಂಗಪಡಿಸಲಾಗದು. ತನಿಖೆ ನಡೆಯುತ್ತಿದೆ. ಮಧ್ಯಂತರ ಜಾಮೀನು ಅರ್ಜಿಯ ಮೇಲೆ ನೀವು ಬೇಕಿದ್ದರೆ ವಾದಿಸಬಹುದು” ಎಂದು ಸಾಹುಕಾರ್ ಪರ ವಕೀಲರನ್ನು ಕುರಿತು ಪೀಠ ಹೇಳಿತು.
ಸಾಹುಕಾರ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ ಶ್ಯಾಮ್ ಅವರು “ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರು ಮತ್ತು ಪರೀಕ್ಷಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆರೋಪಗಳು ಕೇಳಿ ಬಂದಿವೆ. ಪ್ರಶ್ನೆಪತ್ರಿಕೆ, ಉತ್ತರ ಪತ್ರಿಕೆಗಳ ಪರಿಶೀಲನೆ, ಅಂಕ ನಿಗದಿ ವಿಚಾರಗಳು ಪರೀಕ್ಷಾ ನಿಯಂತ್ರಕರ ವ್ಯಾಪ್ತಿಗೆ ಬರುತ್ತವೆ. ಸಾಹುಕಾರ್ ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದ್ದು, ಅವರಿಗೆ ಕೆಪಿಎಸ್‌ಸಿ ಕಚೇರಿ ಪ್ರವೇಶ ನಿರಾಕರಿಸಲಾಗಿದೆ” ಎಂದರು.
“ಸಾಹುಕಾರ್ ಪುತ್ರಿಯ ನೇಮಕಾತಿಗೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಕಾಯಿದೆ, ನಿಯಮ ಅಥವಾ ಕೈಪಿಡಿ ಅಡಿ ಕೆಪಿಎಸ್‌ಸಿ ಆಡಳಿತಗಾರರ ಪುತ್ರಿ ಪರೀಕ್ಷೆಗೆ ಹಾಜರಾಗಬಾರದು ಎಂದೇನಿಲ್ಲ. ಇದನ್ನು ಬಹಿರಂಗಪಡಿಸುವ ಅಗತ್ಯವು ಸಂದರ್ಶನದಲ್ಲಿ ಬರುತ್ತದೆ. ಜಾರಿ ನಿರ್ದೇಶನಾಲಯದ ಶೋಧದ ವೇಳೆಯೂ ಸಾಹುಕಾರ್ ಮನೆಯಲ್ಲಿ ಯಾವುದೇ ಆಕ್ಷೇಪಾರ್ಹವಾದ ದಾಖಲೆ ಪತ್ತೆಯಾಗಿಲ್ಲ” ಎಂದರು.
“ಸಂಜೆ ನಾಲ್ಕು ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿಯು ಮಧ್ಯಾಹ್ನ ಒಂದು ಗಂಟೆಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯ ವಿಧಿಸುವ ಯಾವುದೇ ಷರತ್ತಿಗೆ ಬದ್ಧವಾಗಿದ್ದು, ತನಿಖೆಗೆ ಸಹಕರಿಸಲಿದ್ದಾರೆ. ಹೀಗಾಗಿ, ರಕ್ಷಣೆ ಒದಗಿಸಬೇಕು” ಎಂದರು.
ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಮಧ್ಯಂತರ ಅರ್ಜಿಯ ಸಂಬಂಧ ಪೀಠವು ತನ್ನ ವಿಶೇಷಾಧಿಕಾರ ಬಳಸಕೂಡದು” ಎಂದು ಮನವಿ ಮಾಡಿದರು.
ಸಿಐಡಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದ ಪೀಠವು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.
ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿ ಹುದ್ದೆಗಳು ಸೇರಿದಂತೆ ಹಲವು ನೇಮಕಾತಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಶಿವಶಂಕರಪ್ಪ ಸಾಹುಕಾರ್ ಮತ್ತಿತರರ ವಿರುದ್ಧ ಬಿಎನ್‌ಎಸ್ ಸೆಕ್ಷನ್‌ಗಳಾದ 318(3), ಕರ್ನಾಟಕ ಸರ್ಕಾರಿ ಪರೀಕ್ಷೆಗಳ (ಭ್ರಷ್ಟಾಚಾರ ನಿಷೇಧ ಮತ್ತು ಅಕ್ರಮ ನೇಮಕಾತಿ) ತಡೆ ಕಾಯಿದೆ ಸೆಕ್ಷನ್ 10ರ ಅಡಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ಸಂಬಂಧ ಈಚೆಗೆ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಗಂಗ್ವಾರ್, ಕಿಂಗ್‌ಪಿನ್ ಬಸವರಾಜ್ ಕನ್ನಾಳೆಯನ್ನು ಸಿಐಡಿ ಬಂಧಿಸಿದೆ. ಇಡೀ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತಿತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಸಮನ್ವಯ ಪೀಠವು ಆದೇಶ ಕಾಯ್ದಿರಿಸಿದೆ.