ವರ್ಚುವಲ್, ಹೈಬ್ರಿಡ್ ವಿಧಾನದಲ್ಲಿ ಕಲಾಪ: ಸಿಜೆಐ, ಸುಪ್ರೀಂಕೋರ್ಟ್ ಇ- ಸಮಿತಿ ಅಧ್ಯಕ್ಷರಿಗೆ ಯುವ ವಕೀಲರ ಪತ್ರ

ವರ್ಚುವಲ್ ವಿಧಾನ ಪರಿಸರ ಸ್ನೇಹಿಯಾಗಿದ್ದು ವಕೀಲರು ಮತ್ತು ದಾವೆದಾರರ ವಿಮಾನ ಪ್ರಯಾಣ, ವಾಹನ ಸಂಚಾರವನ್ನು ತಪ್ಪಿಸಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
Virtual Hearing and Supreme Court
Virtual Hearing and Supreme Court
Published on

ಪ್ರಸ್ತುತ ಭೌತಿಕ (ನೇರ) ಕಲಾಪವಷ್ಟೇ ನಡೆಯುತ್ತಿರುವ ಸುಪ್ರೀಂಕೋರ್ಟ್‌ನಲ್ಲಿ ಬುಧವಾರ ಮತ್ತು ಗುರುವಾರ ಸೇರಿ ಎಲ್ಲಾ ದಿನಗಳಲ್ಲಿ ವರ್ಚುವಲ್/ಹೈಬ್ರಿಡ್ ವಿಚಾರಣೆ ವ್ಯವಸ್ಥೆ ಮುಂದುವರೆಸುವಂತೆ ಯುವ ವಕೀಲರ ಗುಂಪೊಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ಸರ್ವೋಚ್ಚ ನ್ಯಾಯಾಲಯದ ಇ-ಸಮಿತಿ ಅಧ್ಯಕ್ಷ ನ್ಯಾ. ಡಿ ವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿದೆ.

ದೂರದ ಸ್ಥಳಗಳಿಂದಲೇ ಸುಪ್ರೀಂಕೋರ್ಟ್‌ ಕಲಾಪದಲ್ಲಿ ಪಾಲ್ಗೊಳ್ಳುವಂತಾಗಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ವರ್ಚುವಲ್‌ ವಿಧಾನ ಅನುಕೂಲಕರ ಎಂದು 7 ವರ್ಷಕ್ಕಿಂತ ಕಡಿಮೆ ವೃತ್ತಿ ಅನುಭವ ಹೊಂದಿರುವ ಈ ವಕೀಲರು ಪ್ರತಿಪಾದಿಸಿದ್ದಾರೆ.

ಪತ್ರದ ಪ್ರಮುಖ ಅಂಶಗಳು

  • ಕಾನೂನು ಪ್ರಕ್ರಿಯೆ ಹೆಚ್ಚು ಸಮಾನತೆಯಿಂದ ಕೂಡಿರಲು ವರ್ಚುವಲ್ ವಿಚಾರಣೆಗಳು ಪ್ರೇರಕ.

  • ಸುಪ್ರೀಂ ಕೋರ್ಟ್‌ಗೆ ಪ್ರಾದೇಶಿಕ ಶಾಖೆ ಇಲ್ಲದಿರುವುದರಿಂದ ದೆಹಲಿಯಾಚೆಗಿನ ದಾವೆದಾರರು ಮತ್ತು ವಕೀಲರಿಬ್ಬರಿಗೂ ಇದು ದೂರ. ಹೀಗಾಗಿ ಅವರು ಪಯಣಿಸಲು ಪ್ರಯಾಸವಾಗುತ್ತದೆ ಮತ್ತು ಆರ್ಥಿಕವಾಗಿಯೂ ಹೊರೆ. ಅವರ ಹಣ, ಸಮಯ ಹಾಗೂ ಶಕ್ತಿಯ ನಷ್ಟ ಉಂಟಾಗುತ್ತದೆ.

  • ವರ್ಚುವಲ್‌ ಮಾದರಿಯ ವಿಚಾರಣೆ ಒಟ್ಟಾರೆಯಾಗಿ ಕಾನೂನು ವ್ಯವಸ್ಥೆಗೆ ಮಿತವ್ಯಯ ಹಾಗೂ ಆರ್ಥಿಕ ಪ್ರಯೋಜನಗಳಿಗೆ ಕಾರಣವಾಗುತ್ತದೆ.

  • ಒಂದೇ ನ್ಯಾಯಾಲಯದ ಕೋಣೆಯಲ್ಲಿ ಎಷ್ಟು ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಬಹುದು ಎಂಬುದನ್ನು ಆಧರಿಸಿ ಭೌತಿಕ ವಿಚಾರಣೆಗಳಿಗೆ ವ್ಯವಸ್ಥಾಪನಾ ಮಿತಿಗಳಿರುತ್ತವೆ. ಆದರೆ ಡಿಜಿಟಲ್‌ ತಂತ್ರಜ್ಞಾನ ಈ ನ್ಯೂನತೆಯನ್ನು ಮೀರಿದೆ. ಇ- ಕೋರ್ಟ್‌ ವ್ಯವಸ್ಥೆ ಮೂಲಕ ಫೈಲ್‌ಗಳ ಡಿಜಿಟಲೀಕರಣ ಮಾಡಿರುವುದು ಅನುಕೂಲಕರವಾಗಿದ್ದು ವರ್ಚುವಲ್‌ ವಿಚಾರಣೆಯ ಲಾಭವನ್ನು ಹೆಚ್ಚಿಸಿದೆ.

  • ವರ್ಚುವಲ್‌ ವಿಧಾನ ಪರಿಸರ ಸ್ನೇಹಿಯಾಗಿದ್ದು ವಕೀಲರು ಮತ್ತು ದಾವೆದಾರರ ವಿಮಾನ ಪ್ರಯಾಣ, ವಾಹನ ಸಂಚಾರವನ್ನು ತಪ್ಪಿಸಬಹುದು. ದೆಹಲಿಯಲ್ಲಿನ ವಾಯುಮಾಲಿನ್ಯ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಹೊತ್ತಿನಲ್ಲಿ ವರ್ಚುವಲ್‌ ವಿಚಾರಣೆ ದೊಡ್ಡ ವರವಾಗಿದೆ.

  • ಕೋವಿಡ್‌ ಸಾಂಕ್ರಾಮಿಕ ಹರಡಿದ ಆರಂಭದ ಸಮಯದಿಂದಲೂ ನ್ಯಾಯಾಧೀಶರು ಸೇರಿದಂತೆ ಕಾನೂನು ಲೋಕದ ಹಲವರು ವರ್ಚುವಲ್‌ ವಿಚಾರಣೆಯ ಪ್ರಯೋಜನಗಳನ್ನು ಶ್ಲಾಘಿಸಿದ್ದಾರೆ.

  • ಒಂದು ವೇಳೆ ವರ್ಚುವಲ್‌ ವಿಚಾರಣೆ ಸ್ಥಗಿತಗೊಳಿಸಿದರೆ ಮೂಲಸೌಕರ್ಯ ಮತ್ತು ತಾಂತ್ರಿಕ ಸಾಮರ್ಥ್ಯ ಅಭಿವೃದ್ಧಿಪಡಿಸಲು ಮಾಡಲಾದ ಸಂಪನ್ಮೂಲ ವ್ಯರ್ಥವಾಗುತ್ತದೆ.

  • ಆದ್ದರಿಂದ ಕೋವಿಡ್‌ ಸಂದರ್ಭದಾಚೆಗೂ ವರ್ಚುವಲ್‌ ವಿಚಾರಣೆಗಳು ಮುಂದುವರೆಯಬೇಕು. ಸುಪ್ರೀಂಕೋರ್ಟ್‌ ಈ ಮೊದಲು ಆಲೋಚಿಸಿದಂತೆ ವರ್ಚುವಲ್‌ ಇಲ್ಲವೇ ಭೌತಿಕ ವಿಚಾರಣೆ ಆಯ್ಕೆ ಮಾಡುವ ಹಕ್ಕು ವಕೀಲರಿಗೆ ಇರಬೇಕು.

  • ಸುಪ್ರೀಂಕೋರ್ಟ್‌ನಲ್ಲಿ ಎಲ್ಲಾ ದಿನಗಳಲ್ಲಿ ಅಥವಾ ಪರ್ಯಾಯ ದಿನಗಳಲ್ಲಿ ವರ್ಚುವಲ್‌ ವಿಚಾರಣೆ ಮತ್ತೆ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. 07.10.2021ರಂದು ಹೊರಡಿಸಲಾದ ಪ್ರಮಾಣಿತ ಕಾರ್ಯನಿರ್ವಹಣಾ ವಿಧಾನವನ್ನು (ಎಸ್‌ಒಪಿ) ದಯವಿಟ್ಟು ಮಾರ್ಪಡಿಸಬೇಕು.

ಮಾರ್ಚ್ 2020ರಲ್ಲಿ ಕೋವಿಡ್‌ ಸಾಂಕ್ರಾಮಿಕ ರೋಗದ ಭೀತಿ ಎದುರಾದಾಗ ಸುಪ್ರೀಂಕೋರ್ಟ್‌ ವರ್ಚುವಲ್‌ ವಿಧಾನದ ಮೂಲಕ ಪ್ರಕರಣಗಳ ವಿಚಾರಣೆ ನಡೆಸಲಾರಂಭಿಸಿತು. ಕೋವಿಡ್‌ ಮೂರನೇ ಅಲೆ ಕಡಿಮೆಯಾದಾಗ ಅದು ಭೌತಿಕ ಅಥವಾ ನೇರ ವಿಚಾರಣೆಗೆ ಮರಳಲು ಮುಂದಾಗಿತ್ತು. ವರ್ಚುವಲ್‌ ವಿಧಾನದಲ್ಲೇ ವಿಚಾರಣೆ ಮುಂದುವರೆಸುವಂತೆ ಈ ಹಿಂದೆಯೂ ವಕೀಲ ಸಮುದಾಯ ಬೇಡಿಕೆ ಇಟ್ಟಿತ್ತು. ಆದರೆ ಇದು ನೇರ ವಿಚಾರಣೆಗೆ ಮರಣಶಾಸನವಾಗಬಹುದು ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್‌ ಈ ಬೇಡಿಕೆಯನ್ನು ನಿರಾಕರಿಸಿತ್ತು. ಬುಧವಾರ ಮತ್ತು ಗುರುವಾರದಂದು ಕೇವಲ ನೇರ ವಿಚಾರಣೆ ನಡೆಸಲು ಅವಕಾಶ ಕಲ್ಪಿಸಿತ್ತು.

Kannada Bar & Bench
kannada.barandbench.com