
“ನ್ಯಾಯಮೂರ್ತಿಗಳು ಬಂದು ಹೋಗುತ್ತಾರೆ. ಸಾಮಾನ್ಯ ಜನರು ಇಂದಿಗೂ ಭರವಸೆ ಇಟ್ಟಿಕೊಂಡಿರುವ ಘನ ನ್ಯಾಯಾಂಗ ವ್ಯವಸ್ಥೆ ಎಂದೆಂದಿಗೂ ಉಳಿಯಲಿದೆ. ಯುವ ಜನಾಂಗವು ಕಷ್ಟಪಟ್ಟು ಕೆಲಸ ಮಾಡುವ ಮೂಲಕ ಈ ಘನ ಸಂಸ್ಥೆಯನ್ನು ಮತ್ತಷ್ಟು ಸಬಲಗೊಳಿಸುತ್ತಾರೆ ಎಂಬ ಭರವಸೆ ಹೊಂದಿದ್ದೇನೆ” ಎಂದು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಹೇಳಿದರು.
ಕರ್ನಾಟಕ ಹೈಕೋರ್ಟ್‌ನಿಂದ ಸೇವಾ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಹೈಕೋರ್ಟ್‌ನ ಕೋರ್ಟ್ ಹಾಲ್ 1ರಲ್ಲಿ ಶುಕ್ರವಾರ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಟ್ಟಾರೆ 23 ವರ್ಷ ಕಾಲ ನ್ಯಾಯಾಧೀಶನಾಗಿ ಕೆಲಸ ಮಾಡಿದ್ದು, ಹೈಕೋರ್ಟ್ ನ್ಯಾಯಮೂರ್ತಿಯಾಗಿ 8 ವರ್ಷ 7 ತಿಂಗಳು ಸೇವೆ ಸಲ್ಲಿಸಿದ್ದೇನೆ. ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ ಮಾಡಿದ್ದು, ಎರಡು ವರ್ಷಗಳ ಕಾಲ ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ” ಎಂದು ನ್ಯಾ. ಕುಮಾರ್ ಸ್ಮರಿಸಿದರು.
“ಕೊಟ್ಟಿರುವೆ ಎಲ್ಲವನು, ಎನ್ನರ್ಹತೆಯ ಪರಿಧಿಯಲಿ, ಬಹು ಉಪಕೃತನು ನಾನು, ಮುಂದಿರುವ ದಿನಗಳನು ನಿನ್ನ ಸಂಸ್ಮರಣೆಯಲಿ ಇರುವಂತೆ ಹದಗೊಳಿಸು ಎನ್ನ ಹೃದಯವನು ಓ ಸಚ್ಚಿದಾನಂದ ಗುರುವೇ... “ ಎಂದು ಹೇಳುವ ಮೂಲಕ ವಿದಾಯ ಭಾಷಣ ಮುಕ್ತಾಯಗೊಳಿಸಿದರು.
ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರ ನಿವೃತ್ತಿಯೊಂದು ಹೈಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯು 45ಕ್ಕೆ ಇಳಿಯಲಿದೆ. ಒಟ್ಟಾರೆ ಕರ್ನಾಟಕ ಹೈಕೋರ್ಟ್‌ನಲ್ಲಿ 63 ನ್ಯಾಯಮೂರ್ತಿಗಳ ಹುದ್ದೆಗಳಿವೆ.