
ದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ಸುಟ್ಟ ನೋಟಿನ ಕಂತೆಗಳು ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ವಾಗ್ದಂಡನೆ (ಮಹಾಭಿಯೋಗ) ವಿಧಿಸಲು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಮಾಡಿದ್ದ ಶಿಫಾರಸು ಪ್ರಶ್ನಿಸಿ ಅಲಾಹಾಬಾದ್ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಬುಧವಾರ ಕಾಯ್ದಿರಿಸಿದೆ.
ಹಿಂದಿನ ಸಿಜೆಐ ರಚಿಸಿದ್ದ ಆಂತರಿಕ ಸಮಿತಿ ತಮಗೆ ಪ್ರತಿಕೂಲವಾದ ವರದಿ ನೀಡಿದ ಬಳಿಕ ತಡವಾಗಿ ನ್ಯಾ. ವರ್ಮಾ ಅವರು ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಅವರ ನಡೆ ವಿಶ್ವಾಸವನ್ನು ಮೂಡಿಸುತ್ತಿಲ್ಲ ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎ ಜಿ ಮಸೀಹ್ ಅವರಿದ್ದ ಪೀಠ ತಿಳಿಸಿತು.
ನ್ಯಾಯಮೂರ್ತಿ ವರ್ಮಾ ಅವರ ಪದಚ್ಯುತಿ ಕುರಿತಂತೆ ಸಂಸತ್ತು ಪರಿಗಣಿಸುತ್ತಿರುವುದರಿಂದ, ಪ್ರಕರಣದಲ್ಲಿ ತಾನು ಮಧ್ಯಪ್ರವೇಶಿಸದೆ ಉಳಿಯಬಹುದು ಎಂಬ ಸುಳಿವನ್ನು ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ನೀಡಿತು.
"ನೀವು ಎತ್ತುತ್ತಿರುವ ಪ್ರಶ್ನೆಗಳು ಪ್ರಮುಖವಾದವು, ಆದರೆ ಮೊದಲೇ ಕೇಳಬಹುದಿತ್ತು. ಹೀಗಾಗಿ ನಿಮ್ಮ ನಡೆ ವಿಶ್ವಾಸ ಮೂಡಿಸುವುದಿಲ್ಲ. ನಿಮ್ಮ ನಡವಳಿಕೆ ಬಹಳಷ್ಟು ಹೇಳುತ್ತದೆ. ಇಲ್ಲಿ ಏನಾದರೂ (ಮಾಹಿತಿ) ಸೋರಿಕೆಯಾಗುವುದನ್ನು ನೀವು ಬಯಸುವುದಿಲ್ಲ. ಸಂಸತ್ತು ನಿರ್ಧರಿಸಲಿ. ಅದು ನಿಮ್ಮ ಹಣವೋ ಅಲ್ಲವೋ ಎಂದು ಸುಪ್ರೀಂ ಕೋರ್ಟ್ ರಚಿಸಿದ್ದ ಸಮಿತಿ ಏಕೆ ನಿರ್ಧರಿಸಬೇಕು? ಅದು ಆಂತರಿಕ ಸಮಿತಿಯ ಕೆಲಸವಾಗಿರಲಿಲ್ಲ" ಎಂದು ಪೀಠ ಹೇಳಿತು.
ನ್ಯಾಯಮೂರ್ತಿಗಳ ನಿವಾಸದಿಂದ ವಶಪಡಿಸಿಕೊಳ್ಳಲಾಗಿದೆ ಎಂಬ ಹಣದ ಮೂಲದ ಬಗ್ಗೆ ಆಂತರಿಕ ಸಮಿತಿ ಸಮಗ್ರ ತನಿಖೆ ನಡೆಸಿಲ್ಲ ಎಂಬ ನ್ಯಾಯಮೂರ್ತಿ ವರ್ಮಾ ಅವರ ನಿಲುವನ್ನು ಉಲ್ಲೇಖಿಸಿದ ಅದು ಈ ಮಾತುಗಳನ್ನು ಹೇಳಿತು.
ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಯಿಂದ ತಮ್ಮನ್ನು ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್ ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಮಾಡಿರುವ ಶಿಫಾರಸು ಸಂವಿಧಾನ ಬಾಹಿರ ಮತ್ತು ಅದು ಅವರ ಅಧಿಕಾರ ವ್ಯಾಪ್ತಿ ಮೀರಿದ್ದು ಎಂಬುದಾಗಿ ಘೋಷಿಸಬೇಕು ಎಂದು ನ್ಯಾ. ವರ್ಮಾ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಯಾವುದೇ ಔಪಚಾರಿಕ ದೂರು ಇಲ್ಲದಿದ್ದರೂ ತಮ್ಮ ವಿರುದ್ಧ ಆಂತರಿಕ ಸಮಿತಿ ವರದಿ ನೀಡಿರುವುದು ಅನುಚಿತ ಮತ್ತು ಅಮಾನ್ಯವಾದುದು. ಅಲ್ಲದೆ ಘಟನೆಗೆ ಸಂಬಂಧಿಸಿದ ವಿವರಗಳನ್ನು ಸುಪ್ರೀಂ ಕೋರ್ಟ್ ಪತ್ರಿಕಾ ಪ್ರಕಟಣೆ ಮೂಲಕ ಬಹಿರಂಗಪಡಿಸಿದ್ದರಿಂದ ತಾವು ಹಿಂದೆಂದೂ ನಡೆಯದಂತಹ ಮಾಧ್ಯಮ ವಿಚಾರಣೆಗೆ ತುತ್ತಾಗುವಂತಾಯಿತು ಎಂದು ಅವರು ದೂರಿದ್ದರು.
ಇಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ವರ್ಮಾ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ , ಆಂತರಿಕ ವಿಚಾರಣೆ ಶಿಫಾರಸು ಮಾಡುವುದಕ್ಕೆ ಮಾತ್ರ ಸೀಮಿತವಾಗಿದ್ದು ವಾಗ್ದಂಡನೆ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಲು ಅದು ಆಧಾರವಲ್ಲ ಎಂದರು.
ಆಂತರಿಕ ಸಮಿತಿಯ ಶಿಫಾರಸು ಮಾಡುವುದಕ್ಕೆ ಸೂಕ್ತ ಅಧಿಕಾರವಿಲ್ಲ. ಹೀಗಾಗಿ, ತಾನು ಆಂತರಿಕ ಸಮಿತಿ ವರದಿ ಪ್ರಶ್ನಿಸುತ್ತಿಲ್ಲ. ಬದಲಿಗೆ ಸಂವಿಧಾನದ 124ನೇ ವಿಧಿ ಮತ್ತು 1968ರ ನ್ಯಾಯಮೂರ್ತಿಗಳ ವಿಚಾರಣಾ ಕಾಯಿದೆಯನ್ನು ಉಲ್ಲಂಘಿಸುವುದರಿಂದ ನ್ಯಾಯಮೂರ್ತಿಗಳನ್ನು ಪದಚ್ಯುತಗೊಳಿಸುವ ಪ್ರಕ್ರಿಯೆಗೆ ತಿದಿ ಒತ್ತುತ್ತಿರುವ ಸಂಗತಿಗಳನ್ನು ತಾನು ವಿರೋಧಿಸುತ್ತಿರುವುದಾಗಿ ಅವರು ಹೇಳಿದರು. ಹಾಗಾಗಿ ವರದಿಯ ಶಿಫಾರಸುಗಳನ್ನು ಅಸಿಂಧು ಎಂದು ಘೋಷಿಸುವಂತೆ ಮನವಿ ಮಾಡಿದರು. ಅಲ್ಲದೆ ನ್ಯಾ. ವರ್ಮಾ ಅವರು ಯಾಕೆ ಮೊದಲೇ ನ್ಯಾಯಾಲಯದ ಮೆಟ್ಟಿಲೇರಿಲ್ಲ ಎಂಬುದಕ್ಕೂ ಅವರು ಸಮರ್ಥನೆಗಳನ್ನು ನೀಡಿದರು.
ಆದರೆ ಆಂತರಿಕ ವಿಚಾರಣೆ ಈ ಮೊದಲಿನಿಂದಲೂ ನಡೆಯುತ್ತಿದೆ ಎಂದು ಪೀಠ ನುಡಿಯಿತು. ಆಂತರಿಕ ಪ್ರಕ್ರಿಯೆಯನ್ನು ಕನಿಷ್ಠ ಮೂರು ತೀರ್ಪುಗಳಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂದು ಒಂದು ಹಂತದಲ್ಲಿ ಪೀಠ ನೆನಪಿಸಿತು. ಅಲ್ಲದೆ, ಆಂತರಿಕ ಸಮಿತಿ ವರದಿಯ ಅರ್ಹತೆಗಿಂತ ಹೆಚ್ಚಾಗಿ ಸಾಂವಿಧಾನಿಕ ಅಂಶಗಳಿಗೆ ತಮ್ಮ ವಾದ ಸೀಮಿತಗೊಳಿಸುವಂತೆ ಪೀಠ ಸಿಬಲ್ ಅವರಿಗೆ ಕಿವಿಮಾತು ಹೇಳಿತು.
"ಆಂತರಿಕ ಪ್ರಕ್ರಿಯೆಯನ್ನು 1999ರಲ್ಲಿ ರೂಪಿಸಲಾಯಿತು. ಏನು ಕ್ರಮ ಕೈಗೊಳ್ಳಬಹುದು ಎನ್ನುವ ಉದ್ದೇಶದಿಂದ ಇದು ರೂಪುಗೊಂಡಿತು. ಮುಖ್ಯ ನ್ಯಾಯಮೂರ್ತಿಯವರ ಕಚೇರಿಯೆಂದರೆ ಅದು ಅಂಚೆ ಕಚೇರಿಯಲ್ಲ (ಮಾಹಿತಿ ವರ್ಗಾಯಿಸಲು ಮಾತ್ರವೇ ಸೀಮಿತವಲ್ಲ), ಅದಕ್ಕೆ ದೇಶದೆಡೆಗೆ ಕರ್ತವ್ಯಗಳೂ ಇವೆ. ಸಿಜೆಐ ಅವರ ಬಳಿ ದುರ್ನಡತೆಯ ಕುರಿತಾದ ದಾಖಲೆಗಳಿವೆ ಎಂದರೆ ಅವರು ಅದನ್ನು ತಿಳಿಸಬಹುದು, ಅದೇ ರೀತಿ ಅವರು ರಾಷ್ಟ್ರಪತಿ ಹಾಗೂ ಪ್ರಧಾನಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ," ಎಂದು ಪೀಠವು ಹೇಳಿತು.
ಅಲ್ಲದೆ, ಸಮಿತಿಯ ವಿರುದ್ಧ ನ್ಯಾಯಾಲಯವನ್ನು ಸಂಪರ್ಕಿಸುವಲ್ಲಿ ನ್ಯಾಯಮೂರ್ತಿ ವರ್ಮಾ ಅವರು ಮಾಡಿದ ವಿಳಂಬವನ್ನು ನ್ಯಾಯಾಲಯ ಪದೇ ಪದೇ ಪ್ರಶ್ನಿಸಿತು.
ನ್ಯಾಯಮೂರ್ತಿ ವರ್ಮಾ ಪರ ವಾದ ಮಂಡಿಸಿದ ಮತ್ತೊಬ್ಬ ಹಿರಿಯ ವಕೀಲ ಮುಕುಲ್ ರೋಹಟಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸೌಮಿತ್ರ ಸೇನ್ ಅವರ ವಿರುದ್ಧದ ವಾಗ್ದಂಡನೆಯ ಪ್ರಕರಣವನ್ನು ಪ್ರಸ್ತಾಪಿಸಿದರು. ಪರಿಗಣಿಸುವುದಾಗಿ ತಿಳಿಸಿದ ಪೀಠ ತೀರ್ಪು ಕಾಯ್ದಿರಿಸಿತು.