ನ್ಯಾ. ರಮಣ ವಿರುದ್ಧ ಭ್ರಷ್ಟಾಚಾರ ಆರೋಪ: ಆಂಧ್ರ ಸಿಎಂ ಜಗನ್ ವಿರುದ್ಧದ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಲಲಿತ್

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಸ್ಥಾನದಿಂದ ಜಗನ್‌ ಮೋಹನ್‌ ರೆಡ್ಡಿ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅಧಿಕಾರ ಲೇಖಿ (ಕ್ಯೊ ವಾರೆಂಟೊ) ರಿಟ್ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.
Jaganmohan Reddy and Supreme Court
Jaganmohan Reddy and Supreme Court
Published on

ಸುಪ್ರೀಂ ಕೋರ್ಟ್‌ನ ಎರಡನೇ ಪ್ರಮುಖ ನ್ಯಾಯಮೂರ್ತಿಯಾದ ಎನ್‌ ವಿ ರಮಣ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರ ವಿರುದ್ಧದ ಅರ್ಜಿಗಳ ವಿಚಾರಣೆ ನಡೆಸುವ ಪೀಠದಿಂದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಯು ಯು ಲಲಿತ್‌ ಸೋಮವಾರ ಹಿಂದೆ ಸರಿದಿದ್ದಾರೆ.

ನ್ಯಾಯಮೂರ್ತಿಗಳಾದ ಲಲಿತ್‌, ವಿನೀತ್‌ ಶರಣ್‌ ಮತ್ತು ರವೀಂದ್ರ ಭಟ್‌ ಅವರಿದ್ದ ತ್ರಿಸದಸ್ಯ ಪೀಠದ ಮುಂದೆ ಅರ್ಜಿಯು ವಿಚಾರಣೆಗೆ ಬಂದಿತು. ಈ ಸಂದರ್ಭದಲ್ಲಿ ನ್ಯಾ. ಲಲಿತ್‌ ಅವರು “ವಕೀಲನಾಗಿ ಈ ಹಿಂದೆ ಪಕ್ಷಕಾರರ ವಿರುದ್ಧದ ಮೊಕದ್ದಮೆಗಳನ್ನು ನಾನು ನಡೆಸಿದ್ದೇನೆ. ಆದ್ದರಿಂದ ಈ ಪ್ರಕರಣ ವಿಚಾರಣೆಯನ್ನು ನಾನು ನಡೆಸಲು ಇಚ್ಛಿಸುವುದಿಲ್ಲ. ಹೀಗಾಗಿ, ಸಿಜೆಐ ನಿರ್ಧರಿಸಿದ ಇತರೆ ನ್ಯಾಯಮೂರ್ತಿ ಪ್ರಕರಣದ ವಿಚಾರಣೆಯನ್ನು ಶೀಘ್ರವಾಗಿ ನಡೆಸಲಿ” ಎಂದು ಪ್ರತಿಪಾದಿಸಿದ್ದಾರೆ.

Justice UU Lalit and Jaganmohan Reddy
Justice UU Lalit and Jaganmohan Reddy

ನ್ಯಾ. ರಮಣ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಜಗನ್‌ ಅವರು ಸರ್ವೋಚ್ಚ ನ್ಯಾಯಾಲಯವನ್ನು ವಿವಾದಾತ್ಮಕಗೊಳಿಸುತ್ತಿರುವುದರಿಂದ ಅವರ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಸಲ್ಲಿಕೆಯಾಗಿರುವ ಮೂರು ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಜಗನ್‌ ಮೋಹನ್‌ ರೆಡ್ಡಿ ಅವರನ್ನು ಮುಖ್ಯ ಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅಧಿಕಾರ ಲೇಖಿ (ಅನಧಿಕೃತವಾಗಿ ಅಧಿಕಾರ ಸ್ಥಾನವನ್ನು ಆಕ್ರಮಿಸಲು ಯತ್ನಿಸುವ ವ್ಯಕ್ತಿಯನ್ನು ತಡೆಗಟ್ಟುವುದಕ್ಕಾಗಿ ನ್ಯಾಯಾಲಯ ನೀಡುವ ಆಜ್ಞೆ- ಕ್ಯೊ ವಾರೆಂಟೊ) ರಿಟ್ ಅರ್ಜಿಯೂ ಇದರಲ್ಲಿ ಸೇರಿದೆ.

ನ್ಯಾ. ರಮಣ ವಿರುದ್ಧದ ಆರೋಪಗಳು ಆಧಾರರಹಿತವಾಗಿದ್ದು, ಜಗನ್‌ ಮೋಹನ್‌ ರೆಡ್ಡಿ ಅವರು 20ಕ್ಕೂ ಹೆಚ್ಚು ಕ್ರಿಮಿನಲ್‌ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಅರ್ಜಿದಾರ ವಕೀಲರಾದ ಜಿ ಎಸ್‌ ಮಣಿ, ಪ್ರದೀಪ್‌ ಕುಮಾರ್‌ ಯಾದವ್‌ ಮತ್ತು ಸುನೀಲ್‌ ಕುಮಾರ್‌ ಸಿಂಗ್‌ ಮತ್ತು ಸರ್ಕಾರೇತರ ಸಂಸ್ಥೆಯಾದ ಭಾರತೀಯ ಭ್ರಷ್ಟಾಚಾರ ವಿರೋಧಿ ಸಮಿತಿ ಟ್ರಸ್ಟ್‌ ನ್ಯಾಯಾಲಯಕ್ಕೆ ವಿವರಿಸಿವೆ.

ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ ರೆಡ್ಡಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಯಿಂದ ನ್ಯಾಯಾಂಗ ತನಿಖೆ, ಕೇಂದ್ರೀಯ ತನಿಖಾ ದಳ ಅಥವಾ ಇನ್ನಿತರೆ ಸಂಸ್ಥೆಯಿಂದ ತನಿಖೆ ನಡೆಸುವಂತೆ ಅರ್ಜಿದಾರರು ಕೋರಿದ್ದಾರೆ.

Also Read
‘ಸುಪ್ರೀಂ’ಗೆ ಪತ್ರ ಬರೆದ ಆಂಧ್ರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ: ಸಿಎಂ ಜಗನ್‌ ವಿರುದ್ಧ ಆರೋಪಗಳ ಸುರಿಮಳೆ

ನ್ಯಾ. ರಮಣ ವಿರುದ್ಧ ಆರೋಪ ಮಾಡಿ ಅಕ್ಟೋಬರ್‌ 6ರಂದು ಸಿಜೆಐ ಎಸ್‌ ಎ ಬೊಬ್ಡೆ ಅವರಿಗೆ ಜಗನ್‌ ರೆಡ್ಡಿ ಬರೆದಿರುವ ಪತ್ರವನ್ನು ಸಾರ್ವಜನಿಕಗೊಳಿಸಿದ ಸರ್ಕಾರದ ಅಧಿಕಾರಿಗಳಿಗೆ ಷೋಕಾಸ್‌ ನೋಟಿಸ್‌ ನೀಡುವಂತೆ ವಕೀಲ ಸುನಿಲ್‌ ಕುಮಾರ್‌ ಸಿಂಗ್‌ ತಮ್ಮ ಮನವಿಯಲ್ಲಿ ಕೋರಿದ್ದಾರೆ.

ಹೈಕೋರ್ಟ್‌ ನ್ಯಾಯಾಮೂರ್ತಿಗಳ ರೋಸ್ಟರ್‌ ಒಳಗೊಂಡಂತೆ ಆಂಧ್ರ ಪ್ರದೇಶದ ಹೈಕೋರ್ಟ್‌ನಲ್ಲಿ ನ್ಯಾಯಾಂಗದ ಆಡಳಿತಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ನ್ಯಾ. ರಮಣ ಅವರು ಪ್ರಭಾವ ಬೀರುತ್ತಿದ್ದಾರೆ ಎಂದು ಜಗನ್‌ ರೆಡ್ಡಿ ಸಿಜೆಐಗೆ ಪತ್ರದಲ್ಲಿ ಆರೋಪಿಸಿದ್ದಾರೆ.

Kannada Bar & Bench
kannada.barandbench.com