ಕೋಮುಗಲಭೆ ಜ್ವಾಲಾಮುಖಿಯ ಲಾವಾರಸದಂತೆ; ನನ್ನ ಅಜ್ಜ- ಅಜ್ಜಿಯರನ್ನು ಅದು ಬಲಿಪಡೆದಿದೆ: ʼಸುಪ್ರೀಂʼಗೆ ಕಪಿಲ್ ಸಿಬಲ್

ಕೋಮುಗಲಭೆ ವೇಳೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ತನಿಖಾ ತಂಡ ನೀಡಿದ್ದ ಕ್ಲೀನ್ ಚಿಟ್ ಪ್ರಶ್ನಿಸಿ ಜಾಫ್ರಿ ಪತ್ನಿ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಿಬಲ್‌ ವಾದ ಮಂಡನೆ.
ಕೋಮುಗಲಭೆ ಜ್ವಾಲಾಮುಖಿಯ ಲಾವಾರಸದಂತೆ; ನನ್ನ ಅಜ್ಜ- ಅಜ್ಜಿಯರನ್ನು ಅದು ಬಲಿಪಡೆದಿದೆ: ʼಸುಪ್ರೀಂʼಗೆ ಕಪಿಲ್ ಸಿಬಲ್
Kapil Sibal and Supreme Court

ಕೋಮು ಹಿಂಸಾಚಾರ ಎಂಬುದು ಸಾಂಸ್ಥಿಕ ಸಮಸ್ಯೆಯಾಗಿದ್ದು ಇದು ಜ್ವಾಲಾಮುಖಿಯಿಂದ ಉಕ್ಕುವ ಲಾವಾರಸದಂತೆ ಸೇಡು ತೀರಿಸಿಕೊಳ್ಳುತ್ತದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

2002ರ ಗುಜರಾತ್ ಗಲಭೆಗೆ ಬಲಿಯಾದ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಪರವಾಗಿ ವಾದ ಮಂಡಿಸಿದ ಸಿಬಲ್, “ದೇಶ ವಿಭಜನೆಯ ಸಂದರ್ಭದಲ್ಲಿ ಈಗಿನ ಪಾಕಿಸ್ತಾನದಲ್ಲಿ ನಡೆದ ಕೋಮುಗಲಭೆಯಲ್ಲಿ ತನ್ನ ತಾಯಿಯ ಕಡೆಯ ಅಜ್ಜ- ಅಜ್ಜಂದಿರನ್ನು ಕಳೆದುಕೊಂಡಿದ್ದರಿಂದ ನಾನೂ ಕೂಡ ಸಂತ್ರಸ್ತ” ಎಂದು ನ್ಯಾಯಾಲಯಕ್ಕೆ ತಿಳಿಸಿದರು.

"ಕೋಮು ಹಿಂಸಾಚಾರವು ಜ್ವಾಲಾಮುಖಿಯಿಂದ ಹೊರಹೊಮ್ಮುವ ಲಾವಾದಂತೆ. ಅದೊಂದು ಸಾಂಸ್ಥಿಕ ಸಮಸ್ಯೆಯಾಗಿದೆ. ಲಾವಾ ಭೂಮಿಯ ಮೇಲಿನ ನೆಲವನ್ನು ಮುಟ್ಟಿದಾಗ ಅದು ಆ ನೆಲವನ್ನು ಗಾಯದ ಗುರುತು ಉಳಿಸುತ್ತದೆ; ಭವಿಷ್ಯದಲ್ಲಿ ಸೇಡಿಗೆ ಫಲವತ್ತಾದ ನೆಲವಾಗುತ್ತದೆ. ನಾನು ಪಾಕಿಸ್ತಾನದಲ್ಲಿ ನನ್ನ ತಾಯಿಯ ಪೋಷಕರನ್ನು ಕಳೆದುಕೊಂಡೆ. ನಾನು ಕೂಡ ಅದರ ಸಂತ್ರಸ್ತ” ಎಂದು ಅವರು ಹೇಳಿದರು.

ಆದರೆ ಯಾರನ್ನೂ ದೂಷಿಸಲು ಬಯಸುವುದಿಲ್ಲ ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸಾಚಾರ ಸಹಿಸುವುದಿಲ್ಲ ಎಂಬ ಎಂಬ ಸಂದೇಶವನ್ನು ಜಗತ್ತಿಗೆ ಸಾರಬೇಕಿದೆ ಎಂದು ಸಿಬಲ್‌ ಪ್ರತಿಪಾದಿಸಿದರು. “ನಾನು ಇದಕ್ಕೆ ಯಾರೊಬ್ಬರನ್ನೂ ದೂಷಿಸಲು ಹೋಗವುದಿಲ್ಲ. ಇಂಥದ್ದನ್ನು ಸಹಿಸಲಾಗದು ಎಂಬ ಸಂದೇಶ ಜಗತ್ತಿಗೆ ತಲುಪಬೇಕಿದೆ” ಎಂದು ಅವರು ಹೇಳಿದರು.

Also Read
ಕೋಮು ಗಲಭೆ ಪ್ರಕರಣ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸೇರಿ 134 ಮಂದಿ ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯ

ಕೋಮುಗಲಭೆ ವೇಳೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ತನಿಖಾ ತಂಡ ನೀಡಿದ್ದ ಕ್ಲೀನ್ ಚಿಟ್ ಅನ್ನು ಪ್ರಶ್ನಿಸಿ ಜಾಫ್ರಿ ಅವರು ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ವಾದ ಮಂಡಿಸಲಾಯಿತು.

ಎಸ್‌ಐಟಿ ತನಿಖೆಯ ವೇಳೆ ಯಾವುದೇ ಫೋನ್‌ಗಳನ್ನು ವಶಪಡಿಸಿಕೊಂಡಿಲ್ಲ, ಕರೆಗಳ ಮಾಹಿತಿ ಪರಿಶೀಲಿಸಲಿಲ್ಲ, ಬಾಂಬ್‌ಗಳನ್ನು ಹೇಗೆ ತಯಾರಿಸಲಾಯಿತು ಎಂಬುದನ್ನು ಕೂಡ ಪರಾಮರ್ಶಿಸಲಿಲ್ಲ ಹಾಗೂ ಆರೋಪಿಗಳು ಇರುವ ಸ್ಥಳವನ್ನು ಅದು ಎಂದಿಗೂ ತನಿಖೆ ಮಾಡಲಿಲ್ಲ. ಆದ್ದರಿಂದ ಯಾವ ರೀತಿಯಿಂದ ನೋಡಿದರೂ ಈ ಪ್ರಕರಣ ತನಿಖೆಗೆ ಒಳಪಡಬೇಕು.

ಕಪಿಲ್‌ ಸಿಬಲ್‌, ಹಿರಿಯ ನ್ಯಾಯವಾದಿ

ಎಸ್‌ಐಟಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿಲ್ಲ ಮತ್ತು ಎಸ್‌ಐಟಿಯ ಅಧಿಕೃತ ದಾಖಲೆಗಳು ಅದನ್ನೇ ಸಾಬೀತು ಮಾಡುತ್ತಿವೆ ಎಂದು ಸಿಬಲ್ ಅವರು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರಿದ್ದ ಪೀಠಕ್ಕೆ ತಿಳಿಸಿದರು. ಝಾಕಿಯಾ ಜಾಫ್ರಿ ಅವರ ದೂರನ್ನು ಪರಿಶೀಲಿಸಿದಾಗ ಯಾರೂ ಸಹಕರಿಸದ ಕಾರಣ ಅಡೆತಡೆಗಳನ್ನು ಎದುರಿಸುತ್ತಿದ್ದೇವೆ ಎಂದು 2009ರಲ್ಲಿ ಸ್ವತಃ ಎಸ್‌ಐಟಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಪ್ರಕರಣ ಮುಕ್ತಾಯಗೊಳಿಸುವ ವರದಿಯಲ್ಲಿ ಇದು ಪರಾಕಾಷ್ಠೆಗೆ ಏರಿದೆ ಎಂದು ಅವರು ಹೇಳಿದರು.

"ಎಸ್‌ಐಟಿ ಎಂದಿಗೂ ಯಾವುದೇ ಫೋನ್‌ಗಳನ್ನು ವಶಪಡಿಸಿಕೊಂಡಿಲ್ಲ, ಕರೆಗಳ ಮಾಹಿತಿ ಪರಿಶೀಲಿಸಲಿಲ್ಲ, ಬಾಂಬ್‌ಗಳನ್ನು ಹೇಗೆ ತಯಾರಿಸಲಾಯಿತು ಎಂಬುದನ್ನು ಕೂಡ ಪರಾಮರ್ಶಿಸಲಿಲ್ಲ ಹಾಗೂ ಆರೋಪಿಗಳು ಇರುವ ಸ್ಥಳವನ್ನು ಅದು ಎಂದಿಗೂ ತನಿಖೆ ಮಾಡಲಿಲ್ಲ. ಆದ್ದರಿಂದ ಯಾವ ರೀತಿಯಿಂದ ನೋಡಿದರೂ ಇದು ತನಿಖೆಗೆ ಒಳಪಡಬೇಕು" ಎಂದು ಅವರು ವಾದಿಸಿದರು.

Related Stories

No stories found.
Kannada Bar & Bench
kannada.barandbench.com