ಪ್ರಮಾಣ ವಚನ ಸ್ವೀಕರಿಸಲು ಜೊಲ್ಲೆಗೆ ಜೀರೊ ಟ್ರಾಫಿಕ್‌: ಸೂಕ್ತ ಆದೇಶ ಹೊರಡಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

“ಅರ್ಜಿದಾರರು ನ್ಯಾಯಾಲಯದ ಕದತಟ್ಟುವುದಕ್ಕೂ ಮುನ್ನ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿಲ್ಲ” ಎಂದು ಸರ್ಕಾರದ ವಕೀಲರು ಪ್ರಾಥಮಿಕವಾಗಿ ಆಕ್ಷೇಪಿಸಿದರು.
Shashikala Jolle and Karnataka HC
Shashikala Jolle and Karnataka HC

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಆಗಸ್ಟ್‌ 4ರಂದು ಸಂಪುಟ ದರ್ಜೆ ಸಚಿವೆಯಾಗಿ ಪ್ರಮಾಣ ಸ್ವೀಕರಿಸಲು ಶಾಸಕಿ ಶಶಿಕಲಾ ಜೊಲ್ಲೆ ಅವರಿಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ರಾಜಭವನದವರೆಗೆ ಜೀರೊ ಟ್ರಾಫಿಕ್‌ ಸೌಲಭ್ಯ ಕಲ್ಪಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಬುಧವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಜೊಲ್ಲೆ ಅವರಿಗೆ ಜೀರೊ ಟ್ರಾಫಿಕ್‌ ಸೌಲಭ್ಯ ಕಲ್ಪಿಸಿದ್ದರಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿತ್ತು ಎಂದು ವಕೀಲ ಜಿ ಬಾಲಾಜಿ ನಾಯ್ಡು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ಎನ್‌ ಎಸ್‌ ಸಂಜಯ್‌ ಗೌಡ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಸರ್ಕಾರದ ಪರ ವಕೀಲರು “ಅರ್ಜಿದಾರರು ನ್ಯಾಯಾಲಯದ ಕದತಟ್ಟುವುದಕ್ಕೂ ಮುನ್ನ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿಲ್ಲ” ಎಂದು ಪ್ರಾಥಮಿಕವಾಗಿ ಆಕ್ಷೇಪಿಸಿದರು.

ಆಗ ಪೀಠವು ನ್ಯಾಯಾಲಯಕ್ಕೆ ಸಲ್ಲಿಸಿರುವ ಮನವಿಯನ್ನೇ ಕೋರಿಕೆ ಎಂದು ಪರಿಗಣಿಸಿ ಸೂಕ್ತ ಆದೇಶ ಹೊರಡಿಸುವ ಸಂಬಂಧ ಅಧಿಕಾರಿಯೊಬ್ಬರನ್ನು ನೇಮಿಸುವಂತೆ ಮುಖ್ಯ ನ್ಯಾಯಮೂರ್ತಿಗೆ ಆದೇಶ ಮಾಡಿತು. “ಈ ಸಂಬಂಧ ಕೈಗೊಂಡ ನಿರ್ಧಾರವನ್ನು ನ್ಯಾಯಾಲಯದ ಮುಂದೆ ಮಂಡಿಸಬೇಕು. ಸದರಿ ಪ್ರಕರಣದಲ್ಲಿ ವಿಸ್ತೃತ ವಿಚಾರಗಳು ಮಿಳಿತವಾಗಿರುವುದರಿಂದ ಈ ಮನವಿಯನ್ನು ನಾವು ಬಾಕಿಪಟ್ಟಿಯಲ್ಲಿ ಇಟ್ಟಿರುತ್ತೇವೆ” ಎಂದು ನ್ಯಾಯಾಲಯ ಹೇಳಿದ್ದು, ವಿಚಾರಣೆಯನ್ನು ಸೆಪ್ಟೆಂಬರ್‌ 22ಕ್ಕೆ ಮುಂದೂಡಿದೆ.

ಜೊಲ್ಲೆ ಅವರಿಗೆ ಜೀರೊ ಟ್ರಾಫಿಕ್‌ ಸೌಲಭ್ಯ ಕಲ್ಪಿಸುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಅರ್ಜಿದಾರರು ಕೋರಿದ್ದಾರೆ. ಆಗಸ್ಟ್‌ 4ರಂದು ಜೊಲ್ಲೆ ಅವರಿಗೆ ವಿಮಾನ ನಿಲ್ದಾಣದಿಂದ ರಾಜಭವನದವರೆಗೆ ಮಧ್ಯಾಹ್ನ 2.14 ರಿಂದ 2.40ರ ವರೆಗೆ 34 ಕಿ.ಮೀ ಜೀರೊ ಟ್ರಾಫಿಕ್‌ ಸೌಲಭ್ಯ ಕಲ್ಪಿಸಲಾಗಿತ್ತು. ಇದರಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿತ್ತು. ಈ ವಿಚಾರವನ್ನು ಎಲ್ಲಾ ಮಾಧ್ಯಮಗಳು ಪ್ರಸಾರ/ಪ್ರಕಟ ಮಾಡಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Also Read
ಐಎಂಎ ಹಗರಣ: ಶಾಸಕ ರೋಶನ್‌ ಬೇಗ್‌ ಮನೆ ಮೇಲೆ ದಾಳಿ-ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲು ಇಡಿಗೆ ಹೈಕೋರ್ಟ್‌ ನಿರ್ದೇಶನ

ಜೀರೊ ಟ್ರಾಫಿಕ್‌ ಶಿಷ್ಟಾಚಾರದ ಪ್ರಕಾರ ಈ ಸೌಲಭ್ಯವು ರಾಜ್ಯಪಾಲರು, ಮುಖ್ಯಮಂತ್ರಿ, ಗೃಹ ಸಚಿವ, ಮುಖ್ಯ ನ್ಯಾಯಮೂರ್ತಿ, ಅಗತ್ಯಬಿದ್ದರೆ ಪೊಲೀಸ್‌ ಮಹಾನಿರ್ದೇಶಕರ ಅನುಮತಿಯಂತೆ ಉಳಿದವರಿಗೆ ನೀಡಲಾಗುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುನ್ನ ಶಶಿಕಲಾ ಜೊಲ್ಲೆ ಕೇವಲ ವಿಧಾನಸಭಾ ಸದಸ್ಯೆ ಮಾತ್ರ ಆಗಿದ್ದರು. ಜೀರೊ ಟ್ರಾಫಿಕ್‌ ಶಿಷ್ಟಾಚಾರದ ಪ್ರಕಾರ ಅವರು ಅದಕ್ಕೆ ಅರ್ಹರಾಗಿರಲಿಲ್ಲ ಎಂದು ಮನವಿದಾರರು ಹೇಳಿದ್ದರು.

Related Stories

No stories found.
Kannada Bar & Bench
kannada.barandbench.com