
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಎರಡನೇ ಬಾರಿಗೆ ಶನಿವಾರ ವಜಾಗೊಳಿಸಿದೆ.
ಬೆಂಗಳೂರಿನ ಸಿಐಡಿಯ ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ಪ್ರಜ್ವಲ್ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ವಜಾಗೊಳಿಸಿದ್ದಾರೆ.
ಪ್ರಜ್ವಲ್ ಸಲ್ಲಿಸಿರುವ ಅರ್ಜಿ ಊರ್ಜಿತವಾಗುವುದಿಲ್ಲ ಎಂದು ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯವು ಆದೇಶ ಮಾಡಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಪ್ರಕರಣದ ಹಿನ್ನೆಲೆ: ಸಂತ್ರಸ್ತೆಯ ದೂರಿನ ಅನ್ವಯ 2021ರಲ್ಲಿ ಬಿಸಿಎಂ ಹಾಸ್ಟೆಲ್‌ನಲ್ಲಿ ಬಾಲಕಿಯೊಬ್ಬರಿಗೆ ಹಾಸ್ಟೆಲ್ ಸೌಲಭ್ಯ ಪಡೆಯಲು ಕುರಿತು ಚರ್ಚಿಸಲು ಪ್ರಜ್ವಲ್ ಅವರ ಕಚೇರಿಗೆ ಸಂತ್ರಸ್ತೆ ತೆರಳಿದ್ದರು. ಬ್ಯುಸಿ ಇರುವುದರಿಂದ ಮಾರನೆಯ ದಿನ ಬರುವಂತೆ ಪ್ರಜ್ವಲ್ ಸೂಚಿಸಿದ್ದರು.
ಅದರಂತೆ ಮಾರನೇಯ ದಿನ ಸಂತ್ರಸ್ತೆ ತೆರಳಿದಾಗ ಆಕೆಯನ್ನು ತನ್ನ ಅತಿಥಿ ಗೃಹದ ಮೊದಲ ಮಹಡಿಯಲ್ಲಿ ಗನ್ ತೋರಿಸಿ, ಬೆದರಿಸಿ ಅತ್ಯಾಚಾರ ಎಸಗಿದ್ದರು. ಈ ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಆನಂತರ ಹಲವು ಬಾರಿ ವಿಡಿಯೋ ಕರೆ ಮಾಡಿ ನಗ್ನವಾಗುವಂತೆ ಸೂಚಿಸಿ, ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು. ಈ ವಿಚಾರವನ್ನು ಬಹಿರಂಗಪಡಿಸಿದರೆ ಗಂಭೀರ ಕ್ರಮದ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತೆ ದೂರಿದ್ದರು.
ಸಂತ್ರಸ್ತೆಯು ಪ್ರಕರಣದ ಸಂಬಂಧ 01.05.2024ರಂದು ವಿಶೇಷ ತನಿಖಾ ದಳ (ಎಸ್‌ಐಟಿ) ಮುಖ್ಯಸ್ಥರಿಗೆ ದೂರು ನೀಡಿದ್ದರು. ಇದರ ಆಧಾರದಲ್ಲಿ ಬೆಂಗಳೂರಿನ ಸಿಐಡಿಯ ಸೈಬರ್ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 376(2)(ಎನ್), 506, 354-ಎ(1)(ii), 354-ಬಿ, 354-ಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66ಇ ಅಡಿ ಪ್ರಕರಣ ದಾಖಲಿಸಲಾಗಿದೆ.
ಏಪ್ರಿಲ್ 23ರಿಂದ ವಿಚಾರಣೆ: ಹೊಳೆನರಸೀಪುರದ ಗನ್ನಿಗಢ ಫಾರ್ಮ್ ಹೌಸ್ ಮತ್ತು ಬೆಂಗಳೂರಿನ ಬನಶಂಕರಿಯ ಮನೆಯಲ್ಲಿ ಮನೆಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ವಿಚಾರಣೆ ಆರಂಭವಾಗಲಿದೆ. ಏಪ್ರಿಲ್ 23ರಿಂದ 29ರವರೆಗೆ ವಿಶೇಷ ನ್ಯಾಯಾಲಯವು ವಿಚಾರಣೆ ನಡೆಸಲಿದೆ.
ಪ್ರಜ್ವಲ್ ಪರವಾಗಿ ವಕೀಲ ಜಿ ಅರುಣ್ ವಕಾಲತ್ತು ಹಾಕಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ವಾದಿಸಿದರು.