ಯತಿ ನರಸಿಂಹಾನಂದ ಭಾಷಣ ಕುರಿತ ಟ್ವೀಟ್: ಎಫ್ಐಆರ್ ರದ್ದತಿಗೆ ಅಲಾಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ ಪತ್ರಕರ್ತ ಜುಬೇರ್‌

ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಗಾಗಿ ಯತಿ ನರಸಿಂಹಾನಂದರನ್ನು ನಿಂದಿಸಿ ಟ್ವೀಟ್ ಮಾಡಿದ್ದ ಜುಬೈರ್ ವಿರುದ್ಧ ಗಾಜಿಯಾಬಾದ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.
Mohammed Zubair, Yati Narsinghanand and Allahabad High Court
Mohammed Zubair, Yati Narsinghanand and Allahabad High Court
Published on

ದ್ವೇಷಕ್ಕೆ ಕುಮ್ಮಕ್ಕು ನೀಡಿದ ಆರೋಪದಡಿ ಗಾಜಿಯಾಬಾದ್‌ನ ದಾಸ್ನಾ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ ಅವರ ಬೆಂಬಲಿಗರು ತನ್ನ ವಿರುದ್ಧ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಿಂದ ರಕ್ಷಣೆ ಕೋರಿ ಸುಳ್ಳು ಸುದ್ದಿ ಪತ್ತೆ ಹಚ್ಚುವ ಜಾಲತಾಣ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮತ್ತು  ಪತ್ರಕರ್ತ ಮೊಹಮ್ಮದ್ ಜುಬೇರ್ ಅವರು ಅಲಾಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ನವೆಂಬರ್ 21ರಂದು ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆಯಿದ್ದು ನ್ಯಾಯಮೂರ್ತಿಗಳಾದ ಅಶ್ವಿನಿ ಕುಮಾರ್ ಮಿಶ್ರಾ ಮತ್ತು ಡಾ. ಗೌತಮ್ ಚೌಧರಿ ಅವರಿರುವ ಪೀಠ ಆಲಿಸಲಿದೆ.

Also Read
ಯತಿ ನರಸಿಂಗಾನಂದ, ತ್ಯಾಗಿ ಬಂಧನದ ಕೋರಿಕೆ; 'ಮೊಹಮ್ಮದ್' ಪುಸ್ತಕ ನಿಷೇಧಿಸಲು ಮನವಿ: ಪಿಐಎಲ್‌ ತಿರಸ್ಕರಿಸಿದ ಸುಪ್ರೀಂ

ಅನೇಕ ಸಂದರ್ಭಗಳಲ್ಲಿ ದ್ವೇಷ ಭಾಷಣ ಮಾಡಿರುವ ಆರೋಪ ಹೊತ್ತಿರುವ ನರಸಿಂಹಾನಂದ ಅವರು ಸೆಪ್ಟೆಂಬರ್ 29 ರಂದು ಸಾರ್ವಜನಿಕ ಭಾಷಣವೊಂದರಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಭಾಷಣವನ್ನುಅವಹೇಳನಕರ ಮತ್ತು ದ್ವೇಷಪೂರಿತ ಎಂದು ಜುಬೇರ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಜರೆದಿದ್ದರು.

ನಂತರ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ನರಸಿಂಹಾನಂದ್ ವಿರುದ್ಧ ಕೋಮು ದ್ವೇಷಕ್ಕೆ ಕುಮ್ಮಕ್ಕು ನೀಡಿದ ಮಾತ್ತು ಧಾರ್ಮಿಕ ಭಾವನೆಗೆ ಘಾಸಿ ತಂದ ಆರೋಪದಡಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಪೊಲೀಸರು ನರಸಿಂಹಾನಂದರನ್ನು ಬಂಧಿಸದಿದ್ದರೂ ಅವರನ್ನು ಪೊಲೀಸರು ಕರೆದೊಯ್ದಿದ್ದರು ಎಂದು ಅವರ ಅನುಯಾಯಿಗಳು ತಿಳಿಸಿದ್ದರು. ನಂತರ ದಾಸ್ನಾದೇವಿ ದೇವಸ್ಥಾನದಲ್ಲಿ ಪ್ರತಿಭಟನೆ ನಡೆದಿತ್ತು.

Also Read
ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ: ಯತಿ ನರಸಿಂಗಾನಂದಗೆ ಉತ್ತರಾಖಂಡ ನ್ಯಾಯಾಲಯ ಜಾಮೀನು

ಯತಿ ನರಸಿಂಹಾನಂದ ಸರಸ್ವತಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಉದಿತಾ ತ್ಯಾಗಿ ಅವರು ಸಲ್ಲಿಸಿದ ದೂರಿನ ಮೇರೆಗೆ ಜುಬೇರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ತನ್ನ ವಿರುದ್ಧ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಉದ್ದೇಶದಿಂದ ಅಕ್ಟೋಬರ್ 3 ರಂದು ಜುಬೇರ್ ನರಸಿಂಹಾನಂದ ಅವರ ಹಳೆಯ ವಿಡಿಯೋ ಕ್ಲಿಪ್  ಹಂಚಿಕೊಂಡಿದ್ದಾರೆ ಎಂದು ತ್ಯಾಗಿ ಆರೋಪಿಸಿದ್ದರು.

ಜುಬೇರ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 196 (ಧರ್ಮಾಧಾರಿತ ದ್ವೇಷಕ್ಕೆ ಕುಮ್ಮಕ್ಕು), 228 (ಸುಳ್ಳು ಪುರಾವೆ ಸೃಷ್ಟಿ) , 299 (ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆ ಕೆರಳಿಸುವುದು) , 356(3) (ಮಾನಹಾನಿ) , ಮತ್ತು 351(2) (ಕ್ರಿಮಿನಲ್‌ ಬೆದರಿಕೆ) ಅಡಿ ಪ್ರಕರಣ ದಾಖಲಿಸಲಾಗಿತ್ತು.

Kannada Bar & Bench
kannada.barandbench.com