ಕೋವಿಡ್‌ ಸಂಕಷ್ಟ ನೀಗಲು ವಕೀಲರಿಗೆ ಆರ್ಥಿಕ ನೆರವು, ವಿಮಾಯೋಜನೆ ಕಲ್ಪಿಸಿದ್ದೇವೆ: ಕೆಎಸ್‌ಬಿಸಿ ಅಧ್ಯಕ್ಷ ಅನಿಲ್ ಕುಮಾರ್

ಕೋವಿಡ್ ಸಂದರ್ಭದಲ್ಲಿ ವಕೀಲ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು, ಕೋರ್ಟ್ ಕಲಾಪದಲ್ಲಿ ಎದುರಾಗಿರುವ ಸವಾಲು ಮುಂತಾದ ವಿಷಯಗಳ ಬಗ್ಗೆ ಕರ್ನಾಟಕ ಬಾರ್‌ ಕೌನ್ಸಿಲ್ ಅಧ್ಯಕ್ಷ ಜೆ ಎಂ ಅನಿಲ್ ಕುಮಾರ್ ಅವರು ಬಾರ್ ಅಂಡ್ ಬೆಂಚ್ ಗೆ ನೀಡಿದ ಸಂದರ್ಶನ.
ಕೋವಿಡ್‌ ಸಂಕಷ್ಟ ನೀಗಲು ವಕೀಲರಿಗೆ ಆರ್ಥಿಕ ನೆರವು, ವಿಮಾಯೋಜನೆ ಕಲ್ಪಿಸಿದ್ದೇವೆ: ಕೆಎಸ್‌ಬಿಸಿ ಅಧ್ಯಕ್ಷ ಅನಿಲ್ ಕುಮಾರ್
Anil Kumar JM

ಕೋವಿಡ್‌ನಿಂದಾಗಿ ಎಲ್ಲಾ ವರ್ಗದ ಜನರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಕೀಲರ ಸಮುದಾಯವೂ ಸಮಸ್ಯೆಗಳಿಂದ ಹೊರತಾಗಿಲ್ಲ. ಈ ಹಿನ್ನೆಲೆಯಲ್ಲಿ ವಕೀಲರ ಹಿತಾಸಕ್ತಿ ಕಾಯುವುದಕ್ಕಾಗಿ ಅಸ್ತಿತ್ವದಲ್ಲಿರುವ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ (ಕೆಎಸ್‌ಬಿಸಿ) ಅಧ್ಯಕ್ಷ ಜೆ ಎಂ ಅನಿಲ್ ಕುಮಾರ್ ಅವರೊಂದಿಗೆ ಬಾರ್ ಅಂಡ್ ಬೆಂಚ್ ಸಂದರ್ಶನ ನಡೆಸಿದ್ದು, ಅದರ ಪೂರ್ಣಪಾಠ ಇಂತಿದೆ.

ಕೋವಿಡ್ ಹಿನ್ನೆಲೆಯಲ್ಲಿ ಉದ್ಯೋಗವಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ರಾಜ್ಯ ಬಾರ್ ಕೌನ್ಸಿಲ್ (ಕೆಎಸ್‌ಬಿಸಿ) ಯಾವ ರೀತಿಯ ನೆರವು ನೀಡಿದೆ?

ಕೋವಿಡ್‌ ಸಂಕಷ್ಟದ ಈ ಸಂದರ್ಭದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹಾಗೂ ಬಾರ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ (ಬಿಸಿಐ) ಮಾರ್ಚ್‌ 26ರಂದು ಪತ್ರ ಬರೆದು ಹಣಕಾಸಿನ ನೆರವಿಗೆ ಮನವಿ ಮಾಡಿದ್ದೇವೆ. ರಾಜ್ಯದಲ್ಲಿರುವ ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಬಾರ್ ಕೌನ್ಸಿಲ್‌ಗಳಿಗೆ ಪತ್ರ ಬರೆದು ಅಗತ್ಯವಿರುವ ವಕೀಲರಿಗೆ ಆಹಾರ ಧಾನ್ಯ, ಔಷಧ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದ್ದೇವೆ. ಬಿಸಿಐ 45 ಲಕ್ಷ ರೂಪಾಯಿ ನೀಡಿದೆ. ಕೆಎಸ್‌ಬಿಸಿಯ 2 ಕೋಟಿ ರೂಪಾಯಿ ಸೇರಿದಂತೆ ಒಟ್ಟು 2.45 ಕೋಟಿ ರುಪಾಯಿಯನ್ನು ಕೆಎಸ್‌ಬಿಸಿ ಕೋವಿಡ್ ಹಣಕಾಸು ನೆರವು ಯೋಜನೆಯಡಿ ಕ್ರೋಢೀಕರಿಸಿ, ಅರ್ಜಿ ಸಲ್ಲಿಸಿದವರಿಗೆ ತಲಾ 5 ಸಾವಿರ ರೂಪಾಯಿಯಂತೆ ಹಂಚಿಕೆ ಮಾಡಿದ್ದೇವೆ. ಕರ್ನಾಟಕ ಸರ್ಕಾರವೂ 5 ಕೋಟಿ ರೂಪಾಯಿ ನೆರವು ನೀಡಿದೆ. ಇದನ್ನೂ ನೆರವಿನ ನಿರೀಕ್ಷೆಯಲ್ಲಿರುವ ವಕೀಲರಿಗೆ ಹಂಚಿಕೆ ಮಾಡಲಾಗುತ್ತಿದೆ. ದೇಶದಲ್ಲಿ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಅಗತ್ಯವಿರುವ ವಕೀಲರಿಗೆ 5 ಸಾವಿರ ರೂಪಾಯಿ ನೆರವು ನೀಡಲಾಗಿದೆ. ಈ ಪೈಕಿ ಕರ್ನಾಟಕವೂ ಒಂದು. ಇದರ ಜೊತೆಗೆ ಕೋವಿಡ್ ಸುರಕ್ಷಾ ವಿಮಾ ಯೋಜನೆ ಆರಂಭಿಸಿದ್ದು, ಆರು ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಎಲ್ಲರಿಗೂ ವಿಮೆ ಮಾಡಿಸಲಾಗಿದೆ. ಈ ವಿಮಾ ಯೋಜನೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಆಗಸ್ಟ್‌ 24ರ ವರೆಗೂ ವಿಸ್ತರಿಸಲಾಗಿದೆ. ಆರೂವರೆ ತಿಂಗಳ ಅವಧಿಯ ಕೋವಿಡ್ ವಿಮಾ ಯೋಜನೆಯು 1 ಲಕ್ಷ ಮೌಲ್ಯ ಹೊಂದಿದೆ. ಈ ಯೋಜನೆ ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕ. ಕೋವಿಡ್‌ನಿಂದ ಗುಣಮುಖರಾದ ವಕೀಲರು ದಾಖಲಾತಿಗಳನ್ನು ಸಲ್ಲಿಸಿದರೆ 50 ಸಾವಿರ ರೂಪಾಯಿ ಆಸ್ಪತ್ರೆ ವೆಚ್ಚ ಭರಿಸಲಾಗುವುದು. 65 ವರ್ಷ ದಾಟಿದವರೂ ದಾಖಲೆ ಸಲ್ಲಿಸಿದರೆ ಆರ್ಥಿಕ ಸಹಾಯ ಮಾಡಲಾಗುವುದು.

ಕೋವಿಡ್ ಆವರಿಸಿರುವ ಈ ಸಂದರ್ಭದಲ್ಲಿ ಹಿರಿಯ ವಕೀಲರ ಪಾತ್ರವೇನು?

ಹಿರಿಯ ವಕೀಲರು ವೈಯಕ್ತಿಕವಾಗಿ ಹಾಗೂ ಕೆಎಸ್‌ಬಿಸಿಗೆ ಹಣಕಾಸಿನ ನೆರವು ನೀಡುವ ಮೂಲಕ ಬೆನ್ನಿಗೆ ನಿಂತಿದ್ದಾರೆ. ಬೆಂಗಳೂರಿನಲ್ಲಿರುವ ಹಲವು ಹಿರಿಯ ವಕೀಲರು ಕೆಎಸ್‌ಬಿಸಿ ದೇಣಿಗೆ ನೀಡಿದ್ದಾರೆ.

ವರ್ಚುವಲ್ ವಿಚಾರಣೆಗೆ ಸಂಬಂಧಿಸಿದಂತೆ ಬಾರ್ ನ ನಿಲುವೇನು? ವರ್ಚುವಲ್‌ ವಿಚಾರಣೆಯಲ್ಲಿ ಪಾಲ್ಗೊಳ್ಳಲು ಅಗತ್ಯವಾದ ಇಂಟರ್‌ನೆಟ್ ಸೌಕರ್ಯ ಶೇಕಡಾವಾರು ಎಷ್ಟು ಮಂದಿ ವಕೀಲರಿಗೆ ಲಭ್ಯವಿಲ್ಲ?

ಕೋವಿಡ್‌ನಿಂದಾಗಿ ಎಲ್ಲವೂ ನಿಶ್ಚಲವಾಗಿರುವ ಸಂದರ್ಭದಲ್ಲಿ ವರ್ಚುವಲ್ ವಿಚಾರಣೆ‌ಯಿಂದ ಖಂಡಿತವಾಗಿಯೂ ಅನುಕೂಲವಾಗಿದೆ. ಬಹುತೇಕ ವಕೀಲರು ಮೊಬೈಲ್ ನಲ್ಲಿ ಇಂಟರ್‌ನೆಟ್ ಬಳಕೆ ಮಾಡುತ್ತಿದ್ದಾರೆ. ಆದರೂ ಕಂಪ್ಯೂಟರ್‌ನಲ್ಲಿ ಇಂಟರ್‌ನೆಟ್ ಬಳಕೆ ವಿಚಾರ ಬಂದಾಗ ಸ್ವಲ್ಪ ಸಮಸ್ಯೆ ಇದೆ. ವಕೀಲರೂ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಒಟ್ಟಾರೆಯಾಗಿ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವ ಕೆಲಸವಾಗಬೇಕಿದೆ.

ವರ್ಚುವಲ್ ವಿಚಾರಣೆ ನಡೆಯುತ್ತಿರುವುದರಿಂದ ವಕೀಲರು ಪ್ರಯಾಣ ಮಾಡುವ ಅಗತ್ಯವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಹೆಸರಾಂತ ವಕೀಲರ ಶುಲ್ಕ ಮರುಪರಿಶೀಲನೆಯ ಬೇಡಿಕೆ ಕೇಳಿಬರುತ್ತಿದೆ. ಈ ವಿಚಾರದಲ್ಲಿ ಬಾರ್ ಕೌನ್ಸಿಲ್ ನಿಲುವೇನು?

ವಕೀಲರ ಶುಲ್ಕಕ್ಕೆ ಸಂಬಂಧಿಸಿದಂತೆ ಕೆಎಸ್‌ಬಿಸಿಯಲ್ಲಿ ಯಾವುದೇ ತೆರನಾದ ಚರ್ಚೆಯಾಗಿಲ್ಲ. ದಾಖಲೆಗಳಲ್ಲಿ ಶುಲ್ಕ ಪಟ್ಟಿ ಇದೆ. ಆದರೆ, ವಾಸ್ತವದಲ್ಲಿ ಅದನ್ನು ಜಾರಿಗೆ ತರುವ ಸ್ಥಿತಿ ಈಗ ಇಲ್ಲ. ಎಲ್ಲವೂ ವಕೀಲರು ಹಾಗೂ ಕಕ್ಷಿದಾರರ ನಡುವೆ ನಿರ್ಧಾರವಾಗುತ್ತದೆ.

ವರ್ಚುವಲ್ ವಿಚಾರಣೆ ನಡೆಸಲು ರಾಜ್ಯದ ಕೆಳಹಂತದ ನ್ಯಾಯಾಲಯಗಳು ಎಷ್ಟರಮಟ್ಟಿಗೆ ಸಿದ್ಧವಾಗಿವೆ? ಮುಂದಿನ ದಿನಗಳಲ್ಲಿ ಇದು ಸಾಧ್ಯ ಎಂದು ನಿಮಗೆ ಅನಿಸುತ್ತದೆಯೇ?

ಕೆಳಹಂತದ ನ್ಯಾಯಾಲಯಗಳಲ್ಲಿ ಹಲವು ಕಡೆ ಸೌಲಭ್ಯದ ಕೊರತೆ ಇದೆ. ಕೆಲವು ನ್ಯಾಯಾಲಯಗಳಲ್ಲಿ ಸೌಲಭ್ಯ ಇದ್ದರೂ ವಕೀಲರಿಗ ಸೌಕರ್ಯಗಳ ಲಭ್ಯತೆ ಇಲ್ಲ. ಈ ನಿಟ್ಟಿನಲ್ಲಿ ಮೂಲ ಸೌಕರ್ಯ ಹೆಚ್ಚಿಸುವ ಅಗತ್ಯವಿದೆ. ವರ್ಚುವಲ್ ವಿಚಾರಣೆ ಜೊತೆಗೆ ಹಿಂದಿನ ರೀತಿಯಲ್ಲಿ ನ್ಯಾಯಾಲಯ ಕಲಾಪ ನಡೆಯುವುದು ವಕೀಲರು ಹಾಗೂ ಕಕ್ಷಿದಾರರ ದೃಷ್ಟಿಯಿಂದ ಅತ್ಯಂತ ಮುಖ್ಯ. 65 ವರ್ಷ ದಾಟಿದ ಹಲವು ವಕೀಲರಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಅಂಥವರಿಗೆ ವರ್ಚುವಲ್ ವಿಚಾರಣೆಯ ಸೌಲಭ್ಯ ಅನುಕೂಲಕಾರಿ. ಒಟ್ಟಾರೆಯಾಗಿ ವರ್ಚುವಲ್ ವಿಚಾರಣೆಯ ಸೌಲಭ್ಯ ಹೆಚ್ಚಿಸುತ್ತಲೇ ಹಿಂದಿನ ರೀತಿಯಲ್ಲಿ ಕಲಾಪ ನಡೆಸುವ ಕೆಲಸವಾಗಬೇಕಿದೆ.

ಇಡೀ ದೇಶದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಮಾತ್ರ ಕಲಾಪ ನಡೆಸಲಾಗುತ್ತಿದೆ. ಗಾತ್ರ, ಪ್ರಕರಣ ಸೇರಿದಂತೆ ಎಲ್ಲಾ ದೃಷ್ಟಿಯಲ್ಲೂ ಕೇರಳಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕ ಮುಂದಿದೆ. ಕೆಎಸ್‌ಬಿಸಿಯ ಮನವಿಯನ್ನು ಪರಿಗಣಿಸಿ ಹೈಕೋರ್ಟ್ ಜೂನ್ 1ರಿಂದ ಕೆಲವು ದಿನಗಳನ್ನು ಹೊರತುಪಡಿಸಿ ನಿರಂತರವಾಗಿ ಕಲಾಪ ನಡೆಸುತ್ತಿದೆ. ರಾಜ್ಯ ಹೈಕೋರ್ಟ್ ಕಾರ್ಯವೈಖರಿ ತೃಪ್ತಿದಾಯಕವಾಗಿದೆ.

ಜೆ ಎಂ ಅನಿಲ್‌ ಕುಮಾರ್, ಅಧ್ಯಕ್ಷರು, ಕರ್ನಾಟಕ ಬಾರ್ ಕೌನ್ಸಿಲ್‌

ಕೋವಿಡ್ ಪರಿಸ್ಥಿತಿಗೆ ಕರ್ನಾಟಕ ಹೈಕೋರ್ಟ್ ಹೇಗೆ ಹೊಂದಿಕೊಂಡಿದೆ?

ಇಡೀ ದೇಶದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಮಾತ್ರ ಕಲಾಪ ನಡೆಸಲಾಗುತ್ತಿದೆ. ಗಾತ್ರ, ಪ್ರಕರಣ ಸೇರಿದಂತೆ ಎಲ್ಲಾ ದೃಷ್ಟಿಯಲ್ಲೂ ಕೇರಳಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕ ಮುಂದಿದೆ. ಕೆಎಸ್‌ಬಿಸಿಯ ಮನವಿಯನ್ನು ಪರಿಗಣಿಸಿ ಹೈಕೋರ್ಟ್ ಜೂನ್ 1ರಿಂದ ಕೆಲವು ದಿನಗಳನ್ನು ಹೊರತುಪಡಿಸಿ ನಿರಂತರವಾಗಿ ಕಲಾಪ ನಡೆಸುತ್ತಿದೆ. ಕೆಬಿಸಿ ಒಳಗೊಂಡಂತೆ ಕೋವಿಡ್ ತಜ್ಞರ ಸಮಿತಿಯ ಜೊತೆ ಸಭೆ ನಡೆಸಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕೋರ್ಟ್ ಪುನಾರಂಭ ಮಾಡಲು ಪರಿಸ್ಥಿತಿ ಅನುಕೂಲಕರವಾಗಿದೆಯೇ ಎನ್ನುವುದಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ. ಒಟ್ಟಾರೆಯಾಗಿ ರಾಜ್ಯ ಹೈಕೋರ್ಟ್ ಕಾರ್ಯವೈಖರಿ ತೃಪ್ತಿದಾಯಕವಾಗಿದೆ.

ಕೋವಿಡ್ ಸಂಕಷ್ಟದ ಈ ಸಂದರ್ಭದಲ್ಲಿ ಬಾರ್ ಕೌನ್ಸಿಲ್ ಜವಾಬ್ದಾರಿಗಳೇನು?

ಮಾರ್ಚ್ 24ರಂದು ಲಾಕ್‌ಡೌನ್ ಘೋಷಣೆಯಾದಾಗಿನಿಂದಲೂ ಕೆಎಸ್‌ಬಿಸಿ ವಕೀಲರ ಹಿತಾಸಕ್ತಿ ಕಾಯುವ ಕೆಲಸ ಮಾಡುತ್ತಿದೆ. ಆರಂಭದಲ್ಲಿ ಕಠಿಣವಾದ ಲಾಕ್‌ಡೌನ್ ಘೋಷಿಸಲಾಗಿತ್ತು. ಈ ಸಂದರ್ಭದಲ್ಲಿಯೂ ಸಹ ಕೆಎಸ್‌ಬಿಸಿಯ ಎಲ್ಲಾ ಸಿಬ್ಬಂದಿ ಪಾಸ್ ಪಡೆದು ಕೆಲಸ ಮಾಡಿದ್ದೇವೆ. ಈ ಸಂದರ್ಭದಲ್ಲಿ ಹಣಕಾಸಿನ ಚಟುವಟಿಕೆಗಳನ್ನು ಕೈಗೊಂಡಿರುವುದರಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಕೋರ್ಟ್ ನಡೆಸಿದ ಎಲ್ಲಾ ಸಭೆಗಳಲ್ಲಿ ಪಾಲ್ಗೊಂಡಿದ್ದೇವೆ. ವರ್ಚುವಲ್ ವಿಚಾರಣೆ ಆರಂಭಿಸುವುದು ಹಾಗೂ ಅದನ್ನು ನಡೆಸಿಕೊಂಡು ಹೋಗುವುದಕ್ಕೆ ಸಂಬಂಧಿಸಿದಂತೆ ಕೆಎಸ್‌ಬಿಸಿ ನೀಡಿದ ಸಲಹೆ-ಸೂಚನೆಗಳನ್ನು ಕೋರ್ಟ್ ಮುಕ್ತವಾಗಿ ಸ್ವೀಕರಿಸಿದೆ.

ವರ್ಚುವಲ್ ವಿಚಾರಣೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಂಪ್ಯೂಟರ್ ಸೇರಿದಂತೆ ಅಗತ್ಯ ಸಾಧನಗಳನ್ನು ಒದಗಿಸುವಂತೆ ಇಂಡಿಯನ್ ಬಾರ್ ಕೌನ್ಸಿಲ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಏನಾದರೂ ಮನವಿ ಮಾಡಿದೆಯೇ?

ಇದಾಗಲೇ ಕಂಪ್ಯೂಟರ್ ತರಬೇತಿ ಹಾಗೂ ನೆರವು ಅಗತ್ಯವಿರುವ ವಕೀಲರಿಗೆ ಸರ್ಕಾರದ ಸುಪರ್ದಿನಲ್ಲಿರುವ ಕಂಪ್ಯೂಟರ್ ತರಬೇತಿ ಕೇಂದ್ರಗಳನ್ನು ಬಳಸಿಕೊಳ್ಳಲು ಅನುಕೂಲ ಕಲ್ಪಿಸಲಾಗಿದೆ. ಬೆಂಗಳೂರಿನ ಹಲವೆಡೆ ಕಂಪ್ಯೂಟರ್ ಸೆಂಟರ್ ಗಳನ್ನು ತೆರೆಸಲಾಗಿದೆ. ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನೆರವನ್ನು ಸರ್ಕಾರದಿಂದ ಖಂಡಿತಾ ಪಡೆಯಲಾಗುವುದು.

ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಿಂದ ಎಲ್ಲಾ ಚಟುವಟಿಕೆಗಳು ನಿರ್ಬಂಧಿಸಲ್ಪಟ್ಟಿವೆ. ವಕೀಲಿಕೆ ಹೊರತು ಪಡಿಸಿ ಯಾವುದೇ ಉದ್ಯೋಗ ಕೈಗೊಳ್ಳದಂತೆ ವಕೀಲರಿಗೆ ಕೋರ್ಟ್ ಆದೇಶಿಸಿದೆ. ಬ್ಯಾಂಕ್ ಗಳು ಸಹ ವಕೀಲರಿಗೆ ಸಾಲ ಸೌಲಭ್ಯ ಕಲ್ಪಿಸಲು ಮುಂದಾಗುತ್ತಿಲ್ಲ. ವಕೀಲರ ಬಳಿ ಕೆಲಸ ಮಾಡುವವರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಗೆ ಬಾರ್ ಹೇಗೆ ಸ್ಪಂದಿಸಲಿದೆ?

ವಕೀಲರಿಗೆ ಬ್ಯಾಂಕ್ ಗಳಲ್ಲಿ ಸಾಲ-ಸೌಲಭ್ಯ ನೀಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಬಿಸಿಐ ಮೂಲಕ ಕೋರಿಕೆ ಸಲ್ಲಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂಬ ಮಾಹಿತಿಯಿದೆ. ಇದನ್ನು ಶೀಘ್ರದಲ್ಲಿ ಜಾರಿಗೆ ತರುವ ಸಂಬಂಧ ಪ್ರಯತ್ನ ನಡೆಸಲಾಗುತ್ತಿದೆ.

ರಾಜಕಾರಣಿಗಳು ಹಾಗೂ ಸರ್ಕಾರದ ಬಳಿ ಹಣ ಪಡೆದು ವಕೀಲರಿಗೆ ಹಂಚುವುದನ್ನು ಸ್ವಾಭಿಮಾನಿ ವಕೀಲರು ಒಪ್ಪುವುದಿಲ್ಲ. ಇದಕ್ಕೆ ಬದಲಾಗಿ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾಲಸೌಲಭ್ಯ ಕಲ್ಪಿಸುವ ಯತ್ನವನ್ನು ಬಾರ್ ಕೌನ್ಸಿಲ್ ಏಕೆ ಮಾಡಬಾರದು ಎಂಬ ವಾದವಿದೆಯಲ್ಲಾ?

ದೆಹಲಿ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ನೂರಾರು ಕೋಟಿ ರೂಪಾಯಿ ನೆರವನ್ನು ವಕೀಲರ ಸಮುದಾಯಕ್ಕೆ ನೀಡಲು ಮಂಜೂರು ಮಾಡಿವೆ. ಇದೇ ರೀತಿ ರಾಜ್ಯದಲ್ಲೂ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಒತ್ತಡ ಬಂದಿತ್ತು. ಅದರಂತೆಯೇ ಮಾಜಿ ಅಡ್ವೋಕೇಟ್ ಜನರಲ್ ಗಳಾದ ವಿಜಯ ಶಂಕರ್, ಅಶೋಕ್ ಹಾರನಹಳ್ಳಿ ಅವರ ಜೊತೆಗೂಡಿ ಸರ್ಕಾರಕ್ಕೆ ರಾಜ್ಯದ ವಕೀಲರ ಸಮುದಾಯದ ಪರಿಸ್ಥಿತಿ ವಿವರಿಸಿ ನೆರವು ಕೋರಲಾಗಿತ್ತು. ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯೂ ಅಷ್ಟೇನು ಉತ್ತಮವಾಗಿಲ್ಲದ ಕಾರಣ 5 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ನೀಡಿದೆ. ಹಲವು ವಕೀಲರಿಗೆ ನೆರವು ಮುಖ್ಯ, ಕೋವಿಡ್ ನಂಥ ಮಹಾನ್ ಸಂಕಷ್ಟದ ಸಂದರ್ಭದಲ್ಲಿ ಬದುಕು ಮುಖ್ಯವಾಗಿರುವುದರಿಂದ ಸ್ವಾಭಿಮಾನದ ಪ್ರಶ್ನೆ ಉದ್ಭವಿಸದು.

Related Stories

No stories found.
Kannada Bar & Bench
kannada.barandbench.com