ಕೋವಿಡ್ ನಂತರ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿ ನ್ಯಾಯವಾದಿಗಳು ಒತ್ತಡ ಅನುಭವಿಸುತ್ತಿದ್ದಾರೆ: ವಿ ಟಿ ಥಾಮಸ್

"ಚಿಕ್ಕಮಗಳೂರು ಜಿಲ್ಲೆಯ ವಕೀಲ ಸಮುದಾಯ ನೇರವಾಗಿ ಕೋವಿಡ್ ದಾಳಿಗೆ ಬಲಿಯಾಗಲಿಲ್ಲ. ಒಂದಿಬ್ಬರಿಗೆ ಸೋಂಕು ತಗುಲಿತು. ಆದರೆ ಅದು ಸೃಷ್ಟಿಸಿದ ಸಮಾಜೋ ಆರ್ಥಿಕ ಬಿಕ್ಕಟ್ಟು ಕೆಟ್ಟ ಪರಿಣಾಮ ಬೀರಿತು. "
ಕೋವಿಡ್ ನಂತರ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿ ನ್ಯಾಯವಾದಿಗಳು ಒತ್ತಡ ಅನುಭವಿಸುತ್ತಿದ್ದಾರೆ: ವಿ ಟಿ ಥಾಮಸ್
Published on

ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿ ಸೇವೆ ಸಲ್ಲಿಸುತ್ತಿರುವ ವಿ ಟಿ ಥಾಮಸ್‌ ಅವರಿಗೆ ಮೂರು ದಶಕಗಳ ವಕೀಲಿಕೆಯ ಅನುಭವ ಇದೆ. ದಕ್ಷಿಣ ಕನ್ನಡ ಜಿಲ್ಲೆ ನೆರಿಯ ಗ್ರಾಮದವರಾದ ಥಾಮಸ್‌ ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಪದವಿ ಪಡೆದರು. ನಂತರ ವೃತ್ತಿಯ ಕಾರಣಕ್ಕೆ ಅವರು ಚಿಕ್ಕಮಗಳೂರಿನಲ್ಲಿ ನೆಲೆಸಿದರು. ಬಹುತೇಕ ಎಲ್ಲಾ ಬಗೆಯ ಪ್ರಕರಣಗಳನ್ನು ನಿರ್ವಹಿಸಿದ ಅನುಭವ ಅವರದು. ಕೋವಿಡ್‌ ಆವರಿಸಿದ ಬಿಕ್ಕಟ್ಟಿನ ಸಂದರ್ಭದಲ್ಲಿಯೇ ಅವರು ಚಿಕ್ಕಮಗಳೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಗಾದಿ ಹಿಡಿದದ್ದು ವಿಶೇಷ.

ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಮಾತಿಗಿಳಿದ ಅವರು ಚಿಕ್ಕಮಗಳೂರಿನ ವಕೀಲ ಸಮುದಾಯದಲ್ಲಿ ಮಹಾ ಸಾಂಕ್ರಾಮಿಕ ಸೃಷ್ಟಿಸಿದ ಮಾನಸಿಕ ತಳಮಳವನ್ನು ವಿವರಿಸಿದ್ದಾರೆ. ವಕೀಲ ಸಮುದಾಯವೆಂದರೆ ಶ್ರೀಮಂತರು ಎಂಬ ತಪ್ಪು ಕಲ್ಪನೆ ಬೇಡ ಎಂದು ಎಚ್ಚರಿಸುವ ಥಾಮಸ್‌ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಆರ್ಥಿಕ ಸಾಮಾಜಿಕ ಸಮಸ್ಯೆಗೆ ಕಾರಣವಾಗಿದ್ದ ಕೋವಿಡ್‌ ಈಗ ಔದ್ಯೋಗಿಕ ಒತ್ತಡ ಹೆಚ್ಚಿಸುತ್ತಿದೆ ಎಂಬುದು ಅವರ ಕಳವಳ.

Q

ಕೋವಿಡ್‌ ಸಾಂಕ್ರಾಮಿಕದಿಂದ ಚಿಕ್ಕಮಗಳೂರಿನ ವಕೀಲರು ಅನುಭವಿಸಿದ ಸಂಕಷ್ಟಗಳೇನು?

A

ನಮ್ಮಲ್ಲಿ ಸುಮಾರು 500ರಷ್ಟು ವಕೀಲರಿದ್ದಾರೆ. ಅವರಲ್ಲಿ 250 ಮಂದಿಯಾದರೂ ನಿಯಮಿತವಾಗಿ ನ್ಯಾಯಾಲಯಕ್ಕೆ ಹಾಜರಾಗುತ್ತಾರೆ. ಹಿರಿಯರು- ಕಿರಿಯರು ಎಂಬ ಬೇಧ ಭಾವವಿಲ್ಲದೆ ಎಲ್ಲರೂ ತೊಂದರೆಗೊಳಗಾಗಿದ್ದಾರೆ. ಬೆರಳೆಣಿಕೆಯ ವಕೀಲರನ್ನು ಹೊರತುಪಡಿಸಿ ಉಳಿದವರೆಲ್ಲರೂ ಕೋವಿಡ್‌ ಬಿಕ್ಕಟ್ಟಿನಿಂದಾಗಿ ಒಂದಲ್ಲಾ ಒಂದು ಬಗೆಯ ತೊಂದರೆಗಳನ್ನು ಅನುಭವಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ವಕೀಲ ಸಮುದಾಯ ನೇರವಾಗಿ ಕೋವಿಡ್‌ ದಾಳಿಗೆ ಬಲಿಯಾಗಲಿಲ್ಲ. ಒಂದಿಬ್ಬರಿಗೆ ಸೋಂಕು ತಗುಲಿತು. ಆದರೆ ಅದು ಸೃಷ್ಟಿಸಿದ ಸಮಾಜೋ ಆರ್ಥಿಕ ಬಿಕ್ಕಟ್ಟು ಕೆಟ್ಟ ಪರಿಣಾಮ ಬೀರಿತು. ಹೆಂಡತಿ ಮಕ್ಕಳು ತಂದೆ ತಾಯಿ ಹೀಗೆ ಒಬ್ಬ ವಕೀಲನನ್ನು ನೆಚ್ಚಿಕೊಂಡು ಆತನ ಕುಟುಂಬ ಇದ್ದರೆ ಕೋವಿಡ್‌ ರೀತಿಯ ಸ್ಥಿತಿ ಆತನ ಮೇಲೆ ಸಾಕಷ್ಟು ಒತ್ತಡಗಳನ್ನು ಸೃಷ್ಟಿಸುತ್ತದೆ. ಅಂತಹ ವಕೀಲರು ಅನುಭವಿಸಿದ ಮಾನಸಿಕ ತಳಮಳ ವರ್ಣನೆಗೆ ನಿಲುಕುವುದಿಲ್ಲ. ಕೆಲ ವಕೀಲರು ಕಾಯಿಲೆಗೆ ಹೆದರಿ ಯಾವುದೇ ಪ್ರಕರಣಗಳನ್ನು ಮುಟ್ಟುತ್ತಿರಲಿಲ್ಲ. ಅನೇಕರು ತಮ್ಮ ಹಳ್ಳಿಗಳಿಗೆ ಮರಳಿದರು. ಇನ್ನು ಕಲಾಪ ಆರಂಭವಾದರೂ ನ್ಯಾಯಾಲಯಕ್ಕೆ ಪೂರಕವಾಗಿ ಕೆಲಸ ಮಾಡುವವರ (ಶೀಘ್ರಲಿಪಿಗಾರರು, ಕ್ಯಾಂಟಿನ್‌ ವ್ಯವಸ್ಥೆ ಇತ್ಯಾದಿ) ಕೊರತೆ ಇತ್ತು. ಹೀಗಾಗಿ ವಾದ ಮಂಡಿಸುವ ಮನಸ್ಸು ಅನೇಕರಿಗೆ ಇದ್ದರೂ ವಾಸ್ತವವಾಗಿ ಅದು ಕಾರ್ಯರೂಪಕ್ಕೆ ಬರುವುದು ಸಾಧ್ಯ ಇರಲಿಲ್ಲ. ಇದು ಕೆಲ ತಿಂಗಳುಗಳ ಕಾಲ ಮುಂದುವರೆಯಿತು.

Also Read
ಪರಿಹಾರ ನೀಡುವಾಗ ಹಿರಿಕಿರಿಯ ವಕೀಲರೆಂದು ಬೇಧವೆಣಿಸಬಾರದಿತ್ತು: ಬಳ್ಳಾರಿ ವಕೀಲರ ಸಂಘದ ಅಧ್ಯಕ್ಷ ಹೆಚ್‌ ಎಂ ಅಂಕಲಯ್ಯ
Q

ಚಿಕ್ಕಮಗಳೂರು ವಕೀಲರ ಸಂಘ ಹೇಗೆ ಸಮಸ್ಯೆಗಳಿಗೆ ಸ್ಪಂದಿಸಿತು?

A

ಲಾಕ್‌ಡೌನ್‌ಗೂ ಒಂದು ವಾರ ಮೊದಲೇ ಕಕ್ಷೀದಾರರಿಗೆ ನ್ಯಾಯಾಲಯಕ್ಕೆ ಬರಬಾರದು ಎಂದು ಮನವಿ ಮಾಡಿದೆವು. ನಮ್ಮಲ್ಲಿ ಮೂರು ವರ್ಷಕ್ಕಿಂತ ಕಡಿಮೆ ಅನುಭವ ಇರುವ ವಕೀಲರ ಸಂಖ್ಯೆ ಶೇ 20ರಷ್ಟಿದೆ. ಕೆಲ ವಕೀಲರಿಗೆ ಕಷ್ಟ ಇದೆ ಎಂದು ಗೊತ್ತಾದಾಗ ಅವರ ಸಹಾಯಕ್ಕೆ ಹಿರಿಯ ವಕೀಲರು ನಿಂತರು. ತಿಂಗಳಿಗೆ ಆಗುವಷ್ಟು ಆಹಾರದ ಕಿಟ್‌ಗಳನ್ನು ಒದಗಿಸಲಾಯಿತು. ನಾನೇ ಖುದ್ದಾಗಿ ನನ್ನ ಹೆಸರು ಬಹಿರಂಗಪಡಿಸದೇ ಸಹಾಯಕ್ಕೆ ಮುಂದಾಗುವುದಾಗಿ ಸಂಬಂಧಪಟ್ಟವರಿಗೆ ತಿಳಿಸಿದ್ದೆ. ಆರ್ಥಿಕವಾಗಿ ಸಹಾಯ ನೀಡಲು ಮುಂದಾದರೂ ಅದನ್ನು ಪಡೆಯಲು ಕೆಲವರು ಹಿಂಜರಿದರು. ಬಹುಶಃ ವಕೀಲಿಕೆಗೆ ಇರುವ ಘನತೆ ಅವರನ್ನು ಕೈಚಾಚದಂತೆ ಮಾಡಿತ್ತು ಎನ್ನಿಸುತ್ತದೆ.

Q

ರಾಜ್ಯ ಸರ್ಕಾರ ವಕೀಲ ಸಮುದಾಯಕ್ಕೆ ನೀಡಿದ ಸಹಾಯ ತೃಪ್ತಿಕರವಾಗಿದೆಯೇ?

A

ನಿರೀಕ್ಷಿತ ಸಹಾಯ ದೊರೆತಿಲ್ಲ ಎನ್ನಬಹುದು. ವಕೀಲ ಸಮುದಾಯಕ್ಕೆ ಸೇರಿದವರು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುತ್ತಾರೆ ಎಂಬ ಭಾವನೆ ಸಾಮಾನ್ಯವಾಗಿರುತ್ತದೆ. ಆದರೆ ವಸ್ತುಸ್ಥಿತಿ ಬೇರೆಯೇ ಇರುತ್ತದೆ. ಬಡ, ಕೆಳ ಮಧ್ಯಮ ವರ್ಗಗಳಿಂದ ಬಂದು ವಕೀಲರಾಗಿ ದುಡಿಯುತ್ತಿರುವವರ ಸಂಖ್ಯೆ ದೊಡ್ಡದು. ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಸಹಾಯ ಹಸ್ತಚಾಚಿದೆ. ಆದರೆ ಅದು ಹಾಕಿದ ಪೂರ್ವ ಷರತ್ತುಗಳು ಸೂಕ್ತ ರೀತಿಯಲ್ಲಿರಲಿಲ್ಲ. ತೊಂದರೆಗೊಳಗಾದ ಎಲ್ಲರಿಗೂ ಅದು ನ್ಯಾಯ ಒದಗಿಸಬೇಕಿತ್ತು. ವಕೀಲರ ಏಳಿಗಾಗಿ ಸಂಗ್ರಹಿಸಿಟ್ಟ ಹಣ ವಕೀಲರಿಗೆ ಪೂರ್ಣಪ್ರಮಾಣದಲ್ಲಿ ನೆರವಿಗೆ ಬರಬೇಕಿತ್ತು. ಸರ್ಕಾರ ಕೂಡ ಕಷ್ಟ ಕಾಲದಲ್ಲಿ ಕೈಹಿಡಿಯದೇ ಸತ್ತ ಮೇಲೆ ನೆರವಿಗೆ ಬಂದರೆ ಏನು ಪ್ರಯೋಜನ?

Q

ಮುಂದೆ ಕೋವಿಡ್‌ ರೀತಿಯ ಅನಿಶ್ಷಿತತೆ, ಬಿಕ್ಕಟ್ಟು ಸೃಷ್ಟಿಯಾಗದಂತೆ ಹೇಗೆ ಕ್ರಮ ವಹಿಸಬಹುದು?

A

ಖಂಡಿತವಾಗಿಯೂ ಕೋವಿಡ್‌ ಎಂಬುದು Act of God ಅಲ್ಲ. ಸಂಘಗಳಿಗೆ ಆರ್ಥಿಕವಾಗಿ ಚೈತನ್ಯ ಇರುವುದಿಲ್ಲ. ಯಾರಲ್ಲಿಯೂ ಹಣ ಇಲ್ಲದಿರುವಾಗ ವಕೀಲರ ಸಂಘಕ್ಕೆ ನೆರವು ನೀಡಿ ಎಂದು ಕೇಳವುದು ಸಮಂಜಸವಲ್ಲ. ಹೀಗಾಗಿ ಇಂತಹ ಪರಿಸ್ಥಿತಿ ಎದುರಿಸಲು ವಕೀಲರ ಸಂಘಗಳಿಗೆ ಪರಿಷತ್ತು ಮತ್ತು ಸರ್ಕಾರ ನೆರವಿಗೆ ಧಾವಿಸಬೇಕಿದೆ.

Q

ವರ್ಚುವಲ್‌ ಕಲಾಪ, ಭೌತಿಕ ಕಲಾಪ… ಇವೆರಡರಲ್ಲಿ ಯಾವುದು ಉತ್ತಮ?

A

ಸದ್ಯದ ಮಟ್ಟಿಗೆ ಭೌತಿಕ ಕಲಾಪವೇ ಅತ್ಯುತ್ತಮ. ಅಂತರ್ಜಾಲದ ಸಮಸ್ಯೆ ಇದೆ. ಅನೇಕರಿಗೆ ಕಂಪ್ಯೂಟರ್‌ ಫೋನ್‌ ಬಳಸಲು ಬರುವುದಿಲ್ಲ. ಮೂಲಸೌಕರ್ಯ ಮತ್ತು ತಾಂತ್ರಿಕ ಅರಿವು ಮೂಡಿಸಿದ ಬಳಿಕ ವರ್ಚುವಲ್‌ ವಿಧಾನ ಯಶಸ್ವಿಯಾಗಬಹುದು ಎನ್ನಿಸುತ್ತದೆ. ಈ ವಿಷಯದಲ್ಲಿ ನ್ಯಾಯಾಂಗ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಸಲಹೆ ಮಾರ್ಗದರ್ಶನ ನೀಡಿದ್ದಾರೆ.

Q

ನ್ಯಾಯಾಲಯಗಳಲ್ಲಿ ಪರಿಸ್ಥಿತಿ ಈಗ ಹೇಗಿದೆ?

A

ನ್ಯಾಯಾಲಯಗಳು ಕಳೆದ ವರ್ಷ ಮಾರ್ಚ್‌ಗಿಂತ ಹಿಂದೆ ಇದ್ದ ಸ್ಥಿತಿಗೆ ಮರಳುತ್ತಿವೆ. ಆದರೆ ಒಂದು ವರ್ಷದಲ್ಲಿ ಬಾಕಿ ಉಳಿದ ಪ್ರಕರಣಗಳ ಸಂಖ್ಯೆಯ ಜೊತೆಗೆ ಹೊಸ ಪ್ರಕರಣಗಳೂ ಸೇರಿಕೊಂಡು ವಕೀಲರ ಮೇಲೆ ಕೆಲಸದ ಒತ್ತಡ ಹೆಚ್ಚುತ್ತಿದೆ. ನಮ್ಮಲ್ಲಿ ಹನ್ನೆರಡು ನ್ಯಾಯಾಲಯಗಳಿವೆ. ದಿನವೊಂದಕ್ಕೆ ಸುಮಾರು ಐವತ್ತು ಪ್ರಕರಣಗಳ ವಿಚಾರಣೆ ನಡೆದರೆ ಕೇವಲ ಬೆರಳಣಿಕೆಯಷ್ಟು ಕಿರಿಯ ವಕೀಲರೊಂದಿಗೆ ಕೆಲಸ ನಿರ್ವಹಿಸುವ ನ್ಯಾಯವಾದಿ ಸಹಜವಾಗಿಯೇ ಮಾನಸಿಕ ಒತ್ತಡ ಅನುಭವಿಸುತ್ತಾರೆ. ಏಕೆಂದರೆ ಕಕ್ಷೀದಾರರಿಗೆ ನ್ಯಾಯ ಒದಗಿಸುವುದೇ ನಮ್ಮ ಕಟ್ಟಕಡೆಯ ಗುರಿಯಾಗಿರುತ್ತದೆ.

Kannada Bar & Bench
kannada.barandbench.com